ರಾಜ್ಯ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ಡಿಕೆ ಶಿವಕುಮಾರ್ ಇದೀಗ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಆತಿಥ್ಯ ವಹಿಸುವ ಜಾಲಿವುಡ್ ಸ್ಟುಡಿಯೋ ವಿಷಯದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಈ ಸ್ಟುಡಿಯೋವನ್ನು ಬಂದ್ ಮಾಡಲಾಗಿತ್ತು. ಆದರೆ, ಈ ನಿರ್ಧಾರದಿಂದ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದ ಅನೇಕರಿಗೆ ಡಿಕೆ ಶಿವಕುಮಾರ್ ಮಧ್ಯಪ್ರವೇಶವು ಭರವಸೆ ಮೂಡಿಸಿದೆ.
ಡಿಕೆ ಶಿವಕುಮಾರ್ ಜಿಲ್ಲಾಧಿಕಾರಿಯೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅರಿತಿದ್ದಾರೆ. “ಖಾಸಗಿಯವರು ಇಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ. ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವರಿಗೆ ಒಂದು ಅವಕಾಶ ನೀಡಬೇಕು. ತಿದ್ದುಪಡಿ ಮಾಡಿಕೊಂಡು ಮುಂದುವರೆಯಲು ಅನುಮತಿ ನೀಡಬೇಕು” ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಈ ನಡೆಯು ಕೇವಲ ಒಂದು ಸ್ಟುಡಿಯೋವನ್ನು ಉಳಿಸುವುದಕ್ಕಿಂತ ಹೆಚ್ಚಾಗಿ, ಸಾವಿರಾರು ಕುಟುಂಬಗಳಿಗೆ ಆಧಾರವಾಗಲಿದೆ. ತಪ್ಪುಗಳನ್ನು ಸರಿಪಡಿಸಲು ಅವಕಾಶ ನೀಡುವುದು, ಉದ್ಯೋಗಗಳನ್ನು ರಕ್ಷಿಸುವುದು ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಸರ್ಕಾರದ ಕರ್ತವ್ಯ ಎಂಬುದನ್ನು ಡಿಕೆ ಶಿವಕುಮಾರ್ ತಮ್ಮ ಈ ನಿರ್ಧಾರದ ಮೂಲಕ ತೋರಿಸಿಕೊಟ್ಟಿದ್ದಾರೆ.
ಜೆಡಿಎಸ್‌ನವರಿಗೆ ನಿದ್ದೆ ಬರಲ್ಲ!: ನನ್ನ ಬಗ್ಗೆ ಮಾತನಾಡದೆ ಇದ್ದರೆ ಜೆಡಿಎಸ್‌ನವರಿಗೆ ನಿದ್ದೆ ಬರಲ್ಲ, ಮಾಲಿನ್ಯ ನಿಯಂತ್ರಣ ಮಂಡಳಿ ಬಿಗ್ ಬಾಸ್ ಸ್ಟುಡಿಯೋಗ್ಗೆ ಬೀಗ ಹಾಕಿದ್ದು, ಇದರಿಂದ ಉದ್ಯೋಗಗಳ ಮೇಲೆ ಪರಿಣಾಮ ಬೀಳುತ್ತದೆ ಎಂದು ಸುಧಾರಣೆಗೆ ಅವಕಾಶ ನೀಡಲು ಜಿಲ್ಲಾಧಿಕಾರಿಯವರಿಗೆ ಕರೆ ಮಾಡಿ ತಿಳಿಸಿದ್ದೇನೆ. ತಪ್ಪುಗಳಾದರೆ ತಿದ್ದಿಕೊಳ್ಳಲು ಅವಕಾಶ ಕೊಡಬೇಕು.
ಇನ್ನೂ ಈ ಬಗ್ಗೆ ರಾಜಕೀಯ ಮಾಡುತ್ತಿರುವ ದಳದವರಿಗೆ, ನನ್ನ ಬಗ್ಗೆ ಮಾತನಾಡದೇ ಇದ್ದರೆ ನಿದ್ದೆ ಬರಲ್ಲ, ಅವರಿಗೆ ರಾಜಕೀಯ ಶಕ್ತಿ ಸಹ ಇಲ್ಲ. ಮಾಡುವುದಕ್ಕೆ ಬೇರೆ ಕೆಲಸ ಇಲ್ಲದೆ ಇದ್ದಾಗ ಈ ತರಹ ನಾವು ರಾಜಕೀಯವಾಗಿ ಜೀವಂತವಿದ್ದೇವೆಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.