ಕನ್ನಡಿಗರಿಗೆ ಇಲ್ಲಿದೆ ಸುವರ್ಣಾವಕಾಶ ಕರ್ನಾಟಕದ 8 ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು 708 ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ಕಾರ್ಖಾನೆ (KSMDL), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿರುವವರಿಗೆ ಇದು ಉತ್ತಮ ಅವಕಾಶ.
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 9 ರಂದು ಪ್ರಾರಂಭವಾಗಿದ್ದು, ನವೆಂಬರ್ 11, 2025 ರವರೆಗೆ ಮುಂದುವರಿಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು. ನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಯಲಿದ್ದು, ಇದು OMR ಆಧಾರಿತ ಪರೀಕ್ಷೆಯಾಗಿರುತ್ತದೆ.
ಅಧಿಸೂಚನೆಯಲ್ಲಿನ ಹುದ್ದೆಗಳ ಸಂಖ್ಯೆ ಮತ್ತು ಅವುಗಳ ವಿವರ ಇಲ್ಲಿದೆ:
ಕ್ರ, ಸಂ | ಇಲಾಖೆ / ಸಂಸ್ಥೆ / ನಿಗಮ | ಮೂಲ ವೃಂದ | ಕಲ್ಯಾಣ ಕರ್ನಾಟಕ ವ್ಯಂಗ |
1 | ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ | 18 | 07 |
2 | ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ | 07 | 14 |
3 | ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ | 40 | 04 |
4 | ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ | 63 | 253 |
5 | ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ | 19 | – |
6 | ಕೃಷಿ ಮಾರಾಟ ಇಲಾಖೆ | 180 | – |
7 | ತಾಂತ್ರಿಕ ಶಿಕ್ಷಣ ಇಲಾಖೆ | 50 | 43 |
8 | ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) | 10 | – |
ಒಟ್ಟು | 387 | 321 |
ಪರೀಕ್ಷೆಯಲ್ಲಿ ನಕಾರಾತ್ಮಕ ಅಂಕಗಳ (Negative Marking) ವ್ಯವಸ್ಥೆಯಿದ್ದು, ಪ್ರತಿ ತಪ್ಪು ಉತ್ತರಕ್ಕೆ ಕಾಲು ಭಾಗ (1/4) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಆದ್ದರಿಂದ, ಅಭ್ಯರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸುವಾಗ ಎಚ್ಚರಿಕೆ ವಹಿಸುವುದು ಅನಿವಾರ್ಯ. ಒಂದೇ ಪಠ್ಯಕ್ರಮವನ್ನು ಹೊಂದಿರುವ ವಿವಿಧ ಇಲಾಖೆಗಳ ಹುದ್ದೆಗಳಿಗೆ ಒಂದೇ ಪರೀಕ್ಷೆಯನ್ನು ನಡೆಸುವ ಮೂಲಕ ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಪರೀಕ್ಷೆಯ ನಂತರ, ಸಂಬಂಧಪಟ್ಟ ಇಲಾಖೆಗಳಿಗೆ ಮೆರಿಟ್ ಪಟ್ಟಿಯನ್ನು ನೀಡಲಾಗುವುದು.
ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಎಚ್. ಪ್ರಸನ್ನ ತಿಳಿಸಿದ್ದಾರೆ. ಅಭ್ಯರ್ಥಿಗಳು ಈಗಿನಿಂದಲೇ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಸೂಕ್ತ. ಉತ್ತಮ ತಯಾರಿ ಉತ್ತಮ ಫಲಿತಾಂಶಕ್ಕೆ ದಾರಿಯಾಗುತ್ತದೆ.
ಈ ನೇಮಕಾತಿ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಸೂಚನೆಗಾಗಿ, ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ http://cetonline.karnataka.gov.in/kea/ ಗೆ ಭೇಟಿ ನೀಡಬಹುದು.