ಕರ್ನಾಟಕ: ಮಳೆಗೆ ರಾಜ್ಯದ ರಸ್ತೆಗಳೆಲ್ಲಾ ಗುಂಡಿಮಯ

0
82

ಕರ್ನಾಟಕದಲ್ಲಿ ಕಳೆದ 6 ತಿಂಗಳಿಂದ ಸುರಿಯುತ್ತಿರುವ ನಿರಂತರ ಮತ್ತು ಧಾರಾಕಾರ ಮಳೆಯಿಂದಾಗಿ ರಾಜ್ಯಾದ್ಯಂತ ರಸ್ತೆಗಳು ತೀವ್ರವಾಗಿ ಹಾಳಾಗಿವೆ. ಇದರಿಂದ ಉಂಟಾಗಿರುವ ನಷ್ಟದ ಅಂದಾಜು ರೂ.10,000 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ ಎಂದು ಲೋಕೋಪಯೋಗಿ ಇಲಾಖೆ ಅಂದಾಜಿಸಿದೆ.

ಮಳೆ ಮತ್ತು ಪ್ರವಾಹದಿಂದ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಕಲ್ಯಾಣ ಕರ್ನಾಟಕ ಮುಂಚೂಣಿಯಲ್ಲಿದೆ. ಕೇವಲ ಕಲಬುರಗಿ ಜಿಲ್ಲೆಯೊಂದರಲ್ಲೇ 100 ಕಿ.ಮೀ. ಗಿಂತ ಹೆಚ್ಚು ರಾಜ್ಯ ಮತ್ತು ಜಿಲ್ಲಾ ರಸ್ತೆಗಳು ಹಾನಿಗೀಡಾಗಿವೆ. ರಾಯಚೂರು ಜಿಲ್ಲೆಯಲ್ಲಿ 67 ಕಿ.ಮೀ.ರಸ್ತೆಗಳು ಮತ್ತು ಕನಿಷ್ಠ 29 ಸೇತುವೆಗಳು ಹಾಗೂ ಕಲ್ವರ್ಟ್‌ಗಳು ಬಳಕೆಗೆ ಅಯೋಗ್ಯವಾಗಿವೆ. ಸೆಪ್ಟೆಂಬರ್‌ನಲ್ಲಿ ಭೀಮಾ ನದಿಯ ಪ್ರವಾಹದಿಂದಾಗಿ ರಾಷ್ಟ್ರೀಯ ಹೆದ್ದಾರಿ-50ರ ಭಾಗಗಳು ಮುಳುಗಿ, ಈ ಪ್ರದೇಶವು ಹಲವು ದಿನಗಳವರೆಗೆ ರಾಜ್ಯದ ಉಳಿದ ಭಾಗಗಳಿಂದ ಸಂಪರ್ಕ ಕಳೆದುಕೊಂಡಿತ್ತು.

ರಾಜಧಾನಿ ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗಳಿಂದ ಹಿಡಿದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಪೂರ್ಣವಾಗಿ ಹಾಳಾದ ಹೆದ್ದಾರಿಗಳು ಮತ್ತು ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಕೊಚ್ಚಿಹೋದ ಸೇತುವೆಗಳವರೆಗೆ ವ್ಯಾಪಕ ಹಾನಿ ಸಂಭವಿಸಿದೆ. ಮೇ ತಿಂಗಳಲ್ಲಿ ಶುರುವಾದ ಮುಂಗಾರು ಪೂರ್ವ ಮಳೆ ಹಾಗೂ ನಂತರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸುರಿದ ಭಾರೀ ಮಳೆಯು ಈ ಹಾನಿಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿದೆ.

ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿಯೂ ಪರಿಸ್ಥಿತಿ ಗಂಭೀರವಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರಸ್ತೆಗಳು ಹಲವೆಡೆ ಕುಸಿದಿದ್ದರೆ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಂತಹ ಗಿರಿ ಜಿಲ್ಲೆಗಳಲ್ಲಿ ಭೂಕುಸಿತದಿಂದ ಹೆದ್ದಾರಿಗಳು ಬಂದ್ ಆಗಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರೊಂದಿಗೆ ಹಾನಿಗೊಳಗಾದ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ, ದುರಸ್ತಿ ಕಾರ್ಯಕ್ಕೆ ಕಾಯಲು ಸಾಧ್ಯವಿಲ್ಲ. ರಸ್ತೆಗಳೇ ನಮ್ಮ ಜೀವನಾಡಿ, ಆದ್ಯತೆಯ ಮೇರೆಗೆ ದುರಸ್ತಿ ಕೈಗೆತ್ತಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಪ್ರಸ್ತುತ, ರಸ್ತೆಗಳು, ಸೇತುವೆಗಳು ಮತ್ತು ಹಾನಿಗೊಳಗಾದ ಇತರ ನಿರ್ಮಾಣಗಳ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ಆದರೆ, ಸರ್ಕಾರದ ಗ್ಯಾರಂಟಿ ಯೋಜನೆಗಳ ಕಾರಣದಿಂದ ಉಂಟಾಗಿರುವ ಹಣಕಾಸಿನ ಬಿಕ್ಕಟ್ಟಿನಿಂದಾಗಿ ಹಾನಿಗೊಳಗಾದ ರಸ್ತೆಗಳನ್ನು ದುರಸ್ತಿಗೊಳಿಸಲು ಎರಡು-ಮೂರು ವರ್ಷಗಳು ಬೇಕಾಗಬಹುದು ಎಂದು ಮಾಜಿ ಪಿಡಬ್ಲ್ಯೂಡಿ ಎಂಜಿನಿಯರ್ ಒಬ್ಬರು ಹೇಳಿದ್ದಾರೆ.

Previous articleRCB ಖರೀದಿಗೆ ಅನಂತ್ ಅಂಬಾನಿ ಆಸಕ್ತಿ: ಏನಂತಾರೆ ಬೆಂಗಳೂರು ಫ್ಯಾನ್ಸ್‌!
Next articleಸಮೀಕ್ಷೆ:ಯಾವ ಜಾತಿಯನ್ನೂ ತುಳಿಯುವ ಪ್ರಶ್ನೆಯಿಲ್ಲ- ಸಿದ್ದರಾಮಯ್ಯ

LEAVE A REPLY

Please enter your comment!
Please enter your name here