ಕುಣಿಗಲ್ ಶಾಸಕರಿಗೆ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್!

0
73

ನಾಯಕತ್ವ ಬದಲಾವಣೆ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಿದ್ದ ಶಾಸಕರಿಗೆ ಕಾಂಗ್ರೆಸ್ ಶಾಕ್ ನೀಡಿದೆ. ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಆರಂಭವಾಗಿರುವ ನಾಯಕತ್ವ ಬದಲಾವಣೆ ಚರ್ಚೆಗೆ ಫುಲ್ ಸ್ಟಾಪ್ ಇಡುವ ಪ್ರಯತ್ನವನ್ನು ಮಾಡಿದೆ.

ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಮತ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರಿಗೆ ನೋಟಿಸ್ ನೀಡಿದ್ದಾರೆ. ಒಂದು ವಾರದೊಳಗೆ ಸಮಜಾಯಿಷಿ ನೀಡಲು ಸೂಚನೆ ನೀಡಿದ್ದಾರೆ.

ಶೋಕಾಸ್ ನೋಟಿಸ್ ವಿವರ: ಶಿಸ್ತು ಪಾಲನಾ ಸಮಿತಿ ಅಧ್ಯಕ್ಷರು, ಕೆ.ರೆಹಮಾನ್ ಖಾನ್ ನೋಟಿಸ್ ನೀಡಿದ್ದು, ಕಾರಣ ಕೇಳಿ ನೋಟೀಸ್ ಎಂಬ ವಿಷಯವನ್ನು ಇದು ಒಳಗೊಂಡಿದೆ.

ಡಾ. ರಂಗನಾಥ್, ಶಾಸಕರು, ಕುಣಿಗಲ್ ವಿಧಾನಸಭೆ, ತುಮಕೂರು ಜಿಲ್ಲೆ ಆದ ತಾವು ನಿನ್ನೆಯ ದಿನ ಮಾಧ್ಯಮಗಳಿಗೆ ಮುಖ್ಯಮಂತ್ರಿಗಳ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ.

ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಗೊಂದಲ ಹಾಗೂ ಪಕ್ಷಕ್ಕೆ ಮುಜುಗರ ಉಂಟಾಗುವ ಬಹಿರಂಗವಾಗಿ ಹೇಳಿಕೆಗಳನ್ನು ನೀಡಬಾರದೆಂದು ಎಐಸಿಸಿ ಸೂಚನೆ ಇದ್ದಾಗ ತಾವು ಈ ಬಗ್ಗೆ ಹೇಳಿಕೆ ನೀಡಿದ್ದೀರಿ.

ಈ ವಿಷಯದಲ್ಲಿ ನಿಮ್ಮ ಮಾಧ್ಯಮ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುವುದಲ್ಲದೆ, ಪಕ್ಷದ ಶಿಸ್ತು ಉಲ್ಲಂಘನೆಗೆ ಕಾರಣವಾಗುತ್ತದೆ. ತಮ್ಮ ಈ ಅಶಿಸ್ತಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಕಾರಣ ಕೇಳಿ ನೋಟೀಸು ನೀಡಲಾಗಿದೆ. ತಾವುಗಳು ಈ ನೋಟೀಸು ತಲುಪಿದ ಒಂದು ವಾರದ ಒಳಗಾಗಿ ತಮ್ಮ ಹೇಳಿಕೆಗಳ ಬಗ್ಗೆ ಸಮಜಾಯಿಷಿ ನೀಡಲು ಸೂಚಿಸಲಾಗಿದೆ.

ಶಾಸಕ ಡಾ. ರಂಗನಾಥ್ ಡಿಸಿಎಂ ಡಿ.ಕೆ. ಶಿವಕುಮಾರ್ ಆಪ್ತರು. ಹಲವು ಬಾರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿಕೆ ನೀಡಿದ್ದಾರೆ. ಎರಡು ದಿನದ ಹಿಂದೆ ಮಾತನಾಡಿದ್ದ ಅವರು, “ಕರ್ನಾಟಕದಲ್ಲಿ 140 ಸ್ಥಾನ ಗೆದ್ದು ಕಾಂಗ್ರೆಸ್​ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಡಿ.ಕೆ. ಶಿವಕುಮಾರ್​ ಅವರ ಶ್ರಮವಿದೆ. ಹೀಗಾಗಿ ಕಾರ್ಯಕರ್ತರು ಡಿಕೆಶಿ​ ಮುಖ್ಯಮಂತ್ರಿ ಆಗಬೇಕೆಂದು ಅಪೇಕ್ಷೆ ಪಡುತ್ತಿದ್ದು, ಸ್ಥಾನಮಾನ ಕೊಡುವ ಬಗ್ಗೆ ಹೈಕಮಾಂಡ್ ಚಿಂತನೆ ಮಾಡಬೇಕು” ಎಂದು ಹೇಳಿದ್ದರು.

“ಕಾರ್ಯಕರ್ತರು ಡಿ.ಕೆ. ಶಿವಕುಮಾರ್​ ಅವರು ಮುಖ್ಯಮಂತ್ರಿ ಆಗಬೇಕೆಂದು ಅಪೇಕ್ಷೆ ಪಡುತ್ತಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕಾಗಿ ಪಕ್ಷದ ಕಾರ್ಯಕರ್ತರು ಕಾಯುತ್ತಿದ್ದಾರೆ. ರಾಜಕೀಯ ಅನ್ನೋದು ಕೃಷಿ ಇದ್ದ ಹಾಗೆ. ಕೃಷಿಯಲ್ಲಿ ಶ್ರಮ ಹಾಕಿದಂತೆ ರಾಜಕೀಯದಲ್ಲಿ ಸಮಸ್ಯೆ ಬಗೆಹರಿಸಬೇಕು” ಎಂದು ರಂಗನಾಥ್​ ಆಗ್ರಹಿಸಿದ್ದರು.

“ಡಿ.ಕೆ.ಶಿವಕುಮಾರ್ ಬೆಳಗ್ಗೆ 8 ಗಂಟೆಯಿಂದ ಮಧ್ಯರಾತ್ರಿವರೆಗೂ ದುಡಿಯುತ್ತಾರೆ. ಅವರಿಗೆ ಭಗವಂತನ ಆಶೀರ್ವಾದ ಇರುವುದರಿಂದ ಸಿಎಂ ಆಗುತ್ತಾರೆ. ಡಿಸಿಎಂ ಡಿ.ಕೆ.ಶಿವಕುಮಾರ್​ ನಮಗೆ ರಾಜಕೀಯ ಗುರುಗಳು. ಸದ್ಯ ಮುಖ್ಯಮಂತ್ರಿ ಕುರ್ಚಿಯಲ್ಲಿ ಇರುವ ಸಿದ್ದರಾಮಯ್ಯನವರು ದೇಶಕ್ಕೆ ಮಾದರಿಯಾಗುವ ಕೆಲಸ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದರು.

Previous articleಕೋಲಾರ: ಆಧುನಿಕ ಹೆಲಿಕಾಪ್ಟರ್ ನಿರ್ಮಾಣ ಘಟಕ ಸ್ಥಾಪನೆ
Next articleKantara: Chapter 1: ರುಕ್ಮಿಣಿ ವಸಂತ್‌ ಭಾವನಾತ್ಮಕ ಪತ್ರ

LEAVE A REPLY

Please enter your comment!
Please enter your name here