ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ (ರಿ). ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬರೆದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪತ್ರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ಭ್ರಷ್ಟ ಸರ್ಕಾರ ಎಂದು ಟೀಕಿಸಿದೆ.
ಈ ಪತ್ರ ಗುತ್ತಿಗೆದಾರರ ಬಾಕಿ ಇರುವ ಹಣ ಬಿಡುಗಡೆ ಮತ್ತು ಇತರೆ ಸಮಸ್ಯೆಗಳ ಬಗ್ಗೆ ಚರ್ಚೆ ಎಂಬ ವಿಷಯವನ್ನು ಒಳಗೊಂಡಿದೆ.
ಪತ್ರದ ವಿವರ: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ತಾವುಗಳು ಸುಮಾರು 2 ವರ್ಷಗಳಿಂದ ಗುತ್ತಿಗೆದಾರರಿಗೆ ಸಂಬಂಧಪಟ್ಟ ಬಾಕಿ ಇರುವ ಹಣ ಬಿಡುಗಡೆ ವಿಚಾರವಾಗಲಿ ಮತ್ತು ಇತರೆ ಸಮಸ್ಯೆಗಳ ಬಗ್ಗೆ ನಿಮ್ಮ ಜೊತೆ ಹಲವಾರು ಸಾರಿ ಪದಾಧಿಕಾರಿಗಳು ಬಂದು ಚರ್ಚೆ ಮಾಡಿರುತ್ತೇವೆ.
ನಮ್ಮ ಸಂಘವು ಭ್ರಷ್ಟಚಾರದ ವಿರುದ್ಧ ಹೋರಾಟದ ಫಲವಾಗಿ ತಮ್ಮ ಸರ್ಕಾರ ಬರುವುದಕ್ಕೆ ಸ್ವಲ್ಪವಾದರು ನಾವುಗಳು ಕಾರಣಕರ್ತ ರಾಗಿರುತ್ತೇವೆ ಎಂದು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ. ಮೇಲ್ಕಂಡ ವಿಚಾರವಾಗಿ ತಾವುಗಳು ನಮ್ಮನ್ನು ಪ್ರತೀ ಸಾರಿ ಸಮಾಧಾನ ಮಾಡಿ, ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುತ್ತೀರಿ. ನಾವುಗಳು ಇದುವರೆವಿಗೂ ತಮಗೆ ಗೌರವ ಕೊಟ್ಟು, ನಮ್ಮ ಸಮಸ್ಯೆಯನ್ನು ಬಗೆಹರಿಸುತ್ತೀರಿ ಎಂಬ ಆಪಾರ ನಂಬಿಕೆ ಹಾಗೂ ನಿಮ್ಮ ಮೇಲಿನ ಭರವಸೆಯಿಂದ ನಮ್ಮ ಎಲ್ಲಾ ಜಿಲ್ಲೆಗಳ ಗುತ್ತಿಗೆದಾರರಿಗೆ ಇದುವರೆವಿಗೂ ಸಮಧಾನ ಮಾಡಿಕೊಂಡು ಬಂದಿರುತ್ತೇವೆ.
ಮಾನ್ಯರೇ, ಇದುವರೆವಿಗೂ ನಮಗೆ ನಿಮ್ಮ ಸರ್ಕಾರದಿಂದ ಯಾವುದೇ ರೀತಿ ಪ್ರಯೋಜನವಾಗಿರುವುದಿಲ್ಲ ಎಂದು ರಾಜ್ಯದ ಎಲ್ಲಾ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷರುಗಳು ನಮಗೆ ಪತ್ರದ ಮೂಲಕ ತಮ್ಮ ತಮ್ಮ ಸಮಸ್ಯೆಗಳನ್ನು ತಿಳಿಸಿರುತ್ತಾರೆ.
- ಕಾಮಗಾರಿಗಳನ್ನು ಕೈಗೊಳ್ಳುವ ಎಂಟು ಇಲಾಖೆಗಳಿಂದ ರಾಜ್ಯ ಗುತ್ತಿಗೆದಾರರ ಬಾಕಿ ಇರುವ ಹಣವನ್ನು ಇದುವರೆವಿಗೂ ತಾವುಗಳು ಬಿಡುಗಡೆ ಮಾಡಿರುವುದಿಲ್ಲ. ಸಂಬಂಧಪಟ್ಟಂತೆ ಎಲ್ಲಾ ಇಲಾಖೆಗಳ ಸಚಿವರುಗಳನ್ನು, ಸರ್ಕಾರದ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಹಣ ಬಿಡುಗಡೆ ವಿಚಾರವಾಗಿ ಹಲವಾರು ಸಾರಿ ಚರ್ಚಿಸಿದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ.
- ಮೇಲ್ಕಂಡ ಹಲವಾರು ಇಲಾಖೆಗಳು ಯಾವುದೇ ಜೇಷ್ಠತೆಯನ್ನು ಮತ್ತು ಪಾರದರ್ಶಕತೆ (2019- Amended Transparence Act) ಕಾಯ್ದೆಯನ್ನು ಕಾಪಾಡದೆ, ಅವರವರದೆ ಫಾರ್ಮಲಗಳನ್ನು ತಯಾರಿಸಿಕೊಂಡು, ಸ್ಪೆಷಲ್ ಎ.ಓ.ಸಿ. ರೂಪದಲ್ಲಿ ಗುತ್ತಿಗೆದಾರರ ಬಾಕಿ ಇರುವ ಹಣದಲ್ಲಿ 3 ತಿಂಗಳಿಗೊಮ್ಮೆ 15%-20% ಹಣವನ್ನು ಬಿಡುಗಡೆ ಮಾಡುತ್ತಿದ್ದಾರೆ.
- ತಾವುಗಳು ವಿರೋದ ಪಕ್ಷದ ನಾಯಕ ರಿದ್ದಾಗ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಯಾವುದೇ ಕಮಿಷನ್ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿರುತ್ತೀರಿ. ಆದರೆ ಹಿಂದಿನ ಸರ್ಕಾರಕ್ಕಿಂತ ಮೇಲ್ಕಂಡ ಎಲ್ಲಾ ಇಲಾಖೆಗಳಲ್ಲಿ ಈಗ ಕಮಿಷನ್ ದುಪ್ಪಟ್ಟು ಆಗಿರುತ್ತದೆ ಎಂದು ತಮ್ಮ ಗಮನಕ್ಕೆ ತರಲು ಸಂಘವು ವಿಷಾದ ವ್ಯಕ್ತಪಡಿಸುತ್ತದೆ.
- ಮಾನ್ಯರೇ, 2017-18, 2018-19, 2019-20 ಮತ್ತು 2020-21ನೇ ಸಾಲಿನ ವ್ಯಾಟ್ ಇಂದ ಜಿ.ಎಸ್.ಟಿ.ಯ ಹೆಚ್ಚುವರಿ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸುವ ವಿಚಾರವಾಗಿ, ತಾವುಗಳು 2 ವರ್ಷದಿಂದ ಹಲವಾರು ಸಾರಿ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿರವರಿಗೆ ತಿಳಿಸಿದರು ಸಹ ಇದುವರೆವಿಗೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ.
- ಖನಿಜ ಮತ್ತು ಭೂ ವಿಜ್ಞಾನ ಇಲಾಖೆಯವರು ಗುತ್ತಿಗೆದಾರರ ಕಾಮಗಾರಿ ಬಿಲ್ಲುಗಳನ್ನು ಪಾವತಿಸುವ ಸಮಯದಲ್ಲಿ, ಎಂ.ಡಿ.ಪಿ.ಸಲ್ಲಿಸದ ಸಂದರ್ಭದಲ್ಲಿ 5 ಪಟ್ಟು ರಾಜಧನ (ರಾಯಲ್ಟಿ) ದಂಡವನ್ನು ವಿಧಿಸುತ್ತಿದ್ದಾರೆ. ರಾಯಲ್ಟಿ ಮತ್ತು ಎಂ.ಡಿ.ಪಿ. ವ್ಯತ್ಯಾಸದ ಮೊತ್ತವನ್ನು ಸರ್ಕಾರವ ಭರಿಸುತ್ತದೆ ಎಂದು ಹಿಂದಿನ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಚಿವರ ಸಭೆಯಲ್ಲಿ ತಿಳಿಸಿರುತ್ತಾರೆ. ಇದುವರೆವಿಗೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಆದರೂ ಸದರಿ ಇಲಾಖೆಯವರು ಗುತ್ತಿಗೆದಾರರು ಬಳಸುವ ವಾಹನಗಳಿಗೆ ಅವೈಜ್ಞಾನಿಕ ದಂಡವನ್ನು ವಿಧಿಸುತ್ತಿದ್ದಾರೆ.
- ಮಾನ್ಯರೇ, ನಿರ್ಮಿತಿ ಕೇಂದ್ರ ಕೆ.ಆರ್.ಐ.ಡಿ.ಎಲ್. (Land Army) ಹಾಗೂ ಇತರೇ ಸಂಸ್ಥೆಗಳು ಜನಪ್ರತಿನಿಧಿಗಳ ಅನುಯಾಯಿಗಳಿಗೆ ಹಾಗೂ ಕಾರ್ಯಕರ್ತರಿಗೆ ನೀಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿರುತ್ತಾರೆ. ಕೆಲಸ ತೆಗೆದುಕೊಂಡಿರುವ ಅನುಯಾಯಿಗಳು, ಕಾರ್ಯಕರ್ತರು ಅದೇ ಕಾಮಗಾರಿಯನ್ನು ಧೃಡೀಕೃತ ನೋಂದಾಯಿತ ಹಿರಿಯ ಗುತ್ತಿಗೆದಾರರಿಗೆ % ಹಣವನ್ನು ತೆಗೆದುಕೊಂಡು ಕಾಮಗಾರಿಗಳನ್ನು ಕೊಡುತ್ತಿದ್ದಾರೆ. ಹಿರಿಯ ಗುತ್ತಿಗೆದಾರರಾದ ನಾವುಗಳು ಕಾರ್ಯಕರ್ತರಿಂದ ಮರುಗುತ್ತಿಗೆಯನ್ನು ಪಡೆಯುವುದು, ಸದರಿ ಕಾಮಗಾರಿಗಳ ಗುಣಮಟ್ಟವನ್ನು ನಿರ್ವಹಿಸುವುದು ಕಷ್ಟಸಾಧ್ಯವಾಗಿರುತ್ತದೆ.
- ಪೌರಾಡಳಿತ, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಮ್ಮ ಆದೇಶವನ್ನು ಮೀರಿ ಟೆಂಡರ್‌ಗಳನ್ನು ಪ್ಯಾಕೇಜ್ ರೂಪದಲ್ಲಿ ಪರಿವರ್ತಿಸಿ ತಮಗೆ ಬೇಕಾದ ಬಲಾಢ್ಯ ಗುತ್ತಿಗೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಮಾಡುತ್ತಿದ್ದಾರೆ. ಈ ವಿಚಾರವಾಗಿ ರಾಜ್ಯ ಸಂಘವು ಪದಾಧಿಕಾರಿಗಳ ಸಭೆ ನಡೆಸಲು ಹಲವಾರು ಸಾರಿ ಪತ್ರದ ಮುಖೇನ ಮತ್ತು ಮೌಖಿಕವಾಗಿ ತಿಳಿಸಿದರೂ ಸಹ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ನಮ್ಮ ಮನವಿ ಪರಿಗಣಿಸುತ್ತಿಲ್ಲ.
ಈ ಪತ್ರವು ಅಧ್ಯಕ್ಷರು ಆರ್. ಮಂಜುನಾಥ್ ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ ಸಹಿಯನ್ನು ಒಳಗೊಂಡಿದೆ.