ಬೆಂಗಳೂರಿನಲ್ಲಿ ತೀವ್ರ ಸಂಚಲನ ಮೂಡಿಸಿದ್ದ ತಾಯಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಪ್ರಕರಣ ಇದೀಗ ನಾಟಕೀಯ ತಿರುವು ಪಡೆದುಕೊಂಡಿದೆ. ತನ್ನ ತಾಯಿಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದ 9ನೇ ತರಗತಿಯ ಬಾಲಕಿ, ಇದೀಗ ಬಾಲ ನ್ಯಾಯಾಲಯದ ಮುಂದೆ ತನ್ನ ಹೇಳಿಕೆಯನ್ನು ಬದಲಾಯಿಸಿ, ಆರೋಪವನ್ನು ಹಿಂಪಡೆದಿದ್ದಾಳೆ.
ಕೆಲವು ತಿಂಗಳ ಹಿಂದೆ, 9ನೇ ತರಗತಿ ವಿದ್ಯಾರ್ಥಿನಿ ತನ್ನ ತಾಯಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕೌನ್ಸಿಲಿಂಗ್ ವೇಳೆ ಆರೋಪಿಸಿದ್ದಳು. ಮದುವೆಯ ನಂತರ ಗಂಡು-ಹೆಣ್ಣಿನ ಸಂಬಂಧಗಳ ಬಗ್ಗೆ ‘ಶಿಕ್ಷಣ’ ನೀಡುವ ನೆಪದಲ್ಲಿ ತಾಯಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ಹೇಳಿಕೊಂಡಿದ್ದಳು. ಈ ವಿಷಯ ಬೆಳಕಿಗೆ ಬಂದ ಕೂಡಲೇ ರಾಜ್ಯಾದ್ಯಂತ ದೊಡ್ಡ ಚರ್ಚೆಯಾಗಿತ್ತು.
ಪೊಲೀಸರು ಕೂಡ ಇಂತಹ ಅಸಾಮಾನ್ಯ ಪ್ರಕರಣವನ್ನು ಹೇಗೆ ನಿಭಾಯಿಸಬೇಕು ಎಂಬ ಗೊಂದಲದಲ್ಲಿದ್ದರು, ಏಕೆಂದರೆ ತಾಯಿಯ ವಿರುದ್ಧ ಇಂತಹ ಆರೋಪ ದಾಖಲಾಗಿದ್ದು ಇದೇ ಮೊದಲು. ಬಾಲಕಿಯ ಪೋಷಕರು ಭಿನ್ನಾಭಿಪ್ರಾಯದಿಂದ ಪ್ರತ್ಯೇಕವಾಗಿ ವಾಸವಾಗಿದ್ದು, ಬಾಲಕಿ ತನ್ನ ತಾಯಿಯೊಂದಿಗೆ ಇರುತ್ತಿದ್ದಳು. ಆರಂಭದಲ್ಲಿ ತಾಯಿ ತನ್ನ ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದರು ಎನ್ನಲಾಗಿದೆ.
ತದನಂತರ ಬಾಲಕಿ ತನ್ನ ಹೇಳಿಕೆಗಳನ್ನು ನೀಡಲು ಹಿಂದೇಟು ಹಾಕಲು ಶುರುಮಾಡಿದ್ದಳು, ಕೆಲವೊಮ್ಮೆ ಪೊಲೀಸರು ತಮ್ಮ ವೈಯಕ್ತಿಕ ವಿಷಯಗಳಲ್ಲಿ ಏಕೆ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಳು. ಇದೀಗ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಬಾಲಕಿ ಬಾಲ ನ್ಯಾಯಾಲಯದ ಮುಂದೆ ಹಾಜರಾಗಿ ತನ್ನ ತಾಯಿ ಯಾವುದೇ ರೀತಿಯಲ್ಲೂ ಅನುಚಿತವಾಗಿ ನಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.
ಅಷ್ಟೇ ಅಲ್ಲ, ತನ್ನ ಚೇಷ್ಟೆಯ ವರ್ತನೆಗೆ ತಾಯಿ ಶಿಕ್ಷೆ ನೀಡಿದಾಗ ಕೋಪಗೊಂಡು ಸುಳ್ಳು ಆರೋಪ ಮಾಡಿರುವುದಾಗಿ ಬಾಲಕಿ ಒಪ್ಪಿಕೊಂಡಿದ್ದಾಳೆ. ಈ ಬಗ್ಗೆ ಬಾಲಕಿಯ ತಾಯಿ ಮತ್ತು ಸಹೋದರಿ ನೀಡಿದ ಹೇಳಿಕೆಯು ಈ ತಿರುವಿಗೆ ಕಾರಣವಾಗಿದೆ. ಬಾಲಕಿ ವಿದೇಶಗಳ ಬಾಲ ನ್ಯಾಯ ಕಾನೂನುಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಳು ಮತ್ತು ಮಕ್ಕಳನ್ನು ಹೊಡೆಯುವ ಪೋಷಕರಿಗೆ ಶಿಕ್ಷೆ ವಿಧಿಸುವ ಕಾನೂನುಗಳಿಂದ ಪ್ರಭಾವಿತಳಾಗಿ ಇಂತಹ ಆರೋಪ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.