ಲಡಾಖ್ : ‘3 ಈಡಿಯಟ್ಸ್’ ಸ್ಫೂರ್ತಿ ಸೋನಮ್ ವಾಂಗ್ಚುಕ್ ಬಂಧನ!

0
29

ಬಾಲಿವುಡ್‌ನ ಜನಪ್ರಿಯ ಸಿನಿಮಾ ‘3 ಈಡಿಯಟ್ಸ್’ ನೋಡಿದವರಿಗೆ ಫುನ್ಸುಕ್ ವಾಂಗ್ಡು ಪಾತ್ರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುತ್ತದೆ. ಆಮೀರ್ ಖಾನ್ ಅದ್ಭುತವಾಗಿ ನಟಿಸಿದ್ದ ಈ ಪಾತ್ರಕ್ಕೆ ಪ್ರೇರಣೆ ನೀಡಿದವರು ಲಡಾಖ್‌ನ ಶಿಕ್ಷಣ ಸುಧಾರಕ ಮತ್ತು ವಿಜ್ಞಾನಿ ಸೋನಮ್ ವಾಂಗ್ಚುಕ್. ಸಿನಿಮಾ ಬಿಡುಗಡೆಯಾಗಿ 16 ವರ್ಷಗಳ ನಂತರ, ವಾಂಗ್ಚುಕ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ, ಆದರೆ ಈ ಬಾರಿ ಹೋರಾಟ ಮತ್ತು ಬಂಧನದ ಕಾರಣದಿಂದ.

ಲಡಾಖ್ ಜನರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡುತ್ತಿರುವ ವಾಂಗ್ಚುಕ್, ಇತ್ತೀಚೆಗೆ ತಮ್ಮ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಸಂವಿಧಾನದ 6ನೇ ಪರಿಚ್ಛೇದದಡಿ ಲಡಾಖ್‌ಗೆ ಸ್ವಾಯತ್ತ ಪ್ರದೇಶದ ಮಾನ್ಯತೆ ಮತ್ತು ರಾಜ್ಯತ್ವದ ಬೇಡಿಕೆ ಪ್ರಮುಖ ಹೋರಾಟದ ಭಾಗವಾಗಿತ್ತು. ಈ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವು ಬಾರಿ ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದರು.

ವಾಂಗ್ಚುಕ್ ಈ ಶಾಂತಿಯುತ ಪ್ರತಿಭಟನೆಗಳು ಇತ್ತೀಚೆಗೆ ಹಿಂಸಾಚಾರಕ್ಕೆ ತಿರುಗಿದವು. ಕೇಂದ್ರ ಸರ್ಕಾರವು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸೆಪ್ಟೆಂಬರ್ 26 ರಂದು ವಾಂಗ್ಚುಕ್ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಿದೆ. ವಿದೇಶದಿಂದ ಅವರ ಸಂಸ್ಥೆಗಳಿಗೆ ಅಕ್ರಮವಾಗಿ ಹಣ ಹರಿದುಬಂದಿದೆ ಎಂಬ ಆರೋಪದ ಮೇಲೆ ಸಿಬಿಐ ತನಿಖೆಯನ್ನೂ ಆರಂಭಿಸಲಾಗಿದೆ.

ಸೋನಮ್ ವಾಂಗ್ಚುಕ್ ಯಾರು?: ಲೇಹ್ ಬಳಿಯ ಉಲೆಟೊಕೊ ಎಂಬ ಹಳ್ಳಿಯಲ್ಲಿ ಜನಿಸಿದ ಸೋನಮ್, 9 ವರ್ಷದವರೆಗೂ ಮನೆಯಲ್ಲೇ ವಿದ್ಯಾಭ್ಯಾಸ ಮಾಡಿದರು. ನಂತರ ಶಿಕ್ಷಣಕ್ಕಾಗಿ ಶ್ರೀನಗರ ಮತ್ತು ದೆಹಲಿಗೆ ಪ್ರಯಾಣ ಬೆಳೆಸಿದರು. ಶ್ರೀನಗರದ ಎನ್‌ಐಟಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. 1988 ರಲ್ಲಿ ‘ಲಡಾಖ್ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಸಾಂಸ್ಕೃತಿಕ ಚಳವಳಿ’ (SECMOL) ಅನ್ನು ಸ್ಥಾಪಿಸಿ, ಲಡಾಖ್‌ನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು.

ಸ್ಥಳೀಯ ಸಂಸ್ಕೃತಿ ಮತ್ತು ಅಗತ್ಯಗಳಿಗೆ ಒತ್ತು ನೀಡುವ ಶಿಕ್ಷಣ ಪದ್ಧತಿಯನ್ನು ಪರಿಚಯಿಸಿದರು. ಲಡಾಖ್‌ನಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಪರಿಸರ ಸಮಸ್ಯೆಗಳು ಮತ್ತು ಸಾಂಸ್ಕೃತಿಕ ಅವನತಿಯ ಬಗ್ಗೆ ವಾಂಗ್ಚುಕ್ ಸದಾ ಧ್ವನಿ ಎತ್ತಿದ್ದಾರೆ. ಅವರ ಹೋರಾಟಕ್ಕೆ ಲಡಾಖ್‌ನ ಅನೇಕ ಸಂಘಟನೆಗಳು ಮತ್ತು ಜನರು ಬೆಂಬಲ ನೀಡಿದ್ದಾರೆ. ಆದರೆ, ಇತ್ತೀಚಿನ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು ದುರದೃಷ್ಟಕರ. ವಾಂಗ್ಚುಕ್ ಬಂಧನವು ಲಡಾಖ್‌ನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ಹೋರಾಟಗಾರರು ಅವರ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ, ‘ಶಾಂತಿಯುತ ಮಾರ್ಗದ ಸಂದೇಶ ವಿಫಲವಾಗಿದೆ’ ಎಂದು ವಾಂಗ್ಚುಕ್ ಹೇಳಿದ್ದಾರೆ. ಹಾಗಿದ್ದರೂ, ಯುವ ಸಮುದಾಯಕ್ಕೆ ಹಿಂಸಾಚಾರದಿಂದ ದೂರವಿರುವಂತೆ ಮನವಿ ಮಾಡಿದ್ದಾರೆ.

Previous articleಗೋಕರ್ಣ ಗುಹೆಯಲ್ಲಿ ಪತ್ತೆಯಾದ ರಷ್ಯಾದ ತಾಯಿ-ಮಕ್ಕಳ ವಾಪಸಿ: ಹೈಕೋರ್ಟ್ ಆದೇಶ
Next articleಬೆಂಗಳೂರು–ಮುಂಬೈ ಸೂಪರ್‌ಫಾಸ್ಟ್ ರೈಲಿಗೆ ಅನುಮೋದನೆ: 30 ವರ್ಷದ ಬೇಡಿಕೆ ಈಡೇರಿಕೆ

LEAVE A REPLY

Please enter your comment!
Please enter your name here