Namma Metro: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಮಹತ್ವದ ಅಪ್‌ಡೇಟ್ ಇದೆ. ಈಗ ಮಾರ್ಗದಲ್ಲಿ 4 ರೈಲುಗಳು ಸಂಚಾರ ನಡೆಸುತ್ತಿದ್ದು, 5ನೇ ರೈಲು ಸಂಚಾರಕ್ಕೆ ದಿನಗಣನೆ ಪ್ರಾರಂಭವಾಗಿದೆ.
ಆರ್.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕಿಸುವ ಮಾರ್ಗದಲ್ಲಿ 6 ಬೋಗಿಯ 5ನೇ ರೈಲು ಅಕ್ಟೋಬರ್‌ನಿಂದ ಸಂಚಾರ ನಡೆಸಲಿದೆ. ಇದರಿಂದಾಗಿ ಈಗಿರುವ ರೈಲುಗಳಲ್ಲಿನ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಲಿದೆ.
ಸದ್ಯ ಮಾರ್ಗದಲ್ಲಿ 4 ರೈಲು ಸಂಚಾರ ನಡೆಸುತ್ತಿದ್ದು, ರೈಲುಗಳ ಸಂಚಾರದ ಅವಧಿ 19 ನಿಮಿಷಗಳು. 5ನೇ ರೈಲು ಸಂಚಾರ ಆರಂಭದಿಂದ ರೈಲುಗಳ ಅವಧಿ 15 ನಿಮಿಷಕ್ಕೆ ಇಳಿಕೆಯಾಗಲಿದ್ದು, ಇನ್ನಷ್ಟು ಪ್ರಯಾಣಿಕರು ಸಂಚಾರ ನಡೆಸಲು ಅನುಕೂಲವಾಗಲಿದೆ.
ಕೋಲ್ಕತ್ತಾದಿಂದ ಹೊರಟ ರೈಲು: ಪಶ್ಚಿಮ ಬಂಗಾಳದ ಟಿಟಾಗರ್ ರೈಲು ಸಿಸ್ಟಮ್‌ನಿಂದ 6 ಬೋಗಿಯ ಹೊಸ ರೈಲು ತಯಾರಾಗಿ ಹೊರಟಿದೆ. ಸೆಪ್ಟೆಂಬರ್ ಅಂತ್ಯಕ್ಕೆ ರೈಲನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರ ಮಾಡಲಾಗುತ್ತದೆ.
ಈ ರೈಲು ಹೆಬ್ಬಗೋಡಿ ಡಿಪೋಗೆ ಆಗಮಿಸಲಿದ್ದು, ಪರಿಶೀಲನೆ, ಪ್ರಾಯೋಗಿಕ ಸಂಚಾರದ ಬಳಿಕ ಅಕ್ಟೋಬರ್ ತಿಂಗಳ 15ರ ಬಳಿಕ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಿಸುವ ನಿರೀಕ್ಷೆ ಇದೆ.
ಆಗಸ್ಟ್ 11ರಂದು 19.15 ಕಿ.ಮೀ.ಗಳ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಿದೆ. ಮೊದಲು 25 ನಿಮಿಷಕ್ಕೊಂದು ರೈಲು ಸಂಚಾರ ನಡೆಸುತ್ತಿತ್ತು. ಸೆಪ್ಟೆಂಬರ್ 10ರಂದು 4ನೇ ರೈಲು ಸಂಚಾರ ಮಾರ್ಗದಲ್ಲಿ ಆರಂಭವಾಗಿದೆ.
4ನೇ ರೈಲು ಸಂಚಾರದ ಬಳಿಕ ರೈಲು ಸಂಚಾರದ ಅವಧಿ 19 ನಿಮಿಷಕ್ಕೆ ಇಳಿಕೆಯಾಗಿತ್ತು. ಈಗ 5ನೇ ರೈಲು ಸಂಚಾರ ಆರಂಭಿಸಿದರೆ ರೈಲು ಸಂಚಾರದ ಅವಧಿ 15 ನಿಮಿಷಕ್ಕೆ ಇಳಿಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದಾಗ 50,000 ಪ್ರಯಾಣಿಕರು ಪ್ರತಿನಿತ್ಯ ಸಂಚಾರವನ್ನು ನಡೆಸುತ್ತಿದ್ದರು. ಈಗ ಪ್ರಯಾಣಿಕರ ಸಂಖ್ಯೆ 84,000 ಆಗಿದೆ. 5ನೇ ರೈಲು ಸಂಚಾರ ಆರಂಭವಾದರೆ ಪ್ರತಿದಿನ 90,000 ಜನರು ಸಂಚಾರ ನಡೆಸಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಆರ್.ವಿ.ರಸ್ತೆ-ಬೊಮ್ಮಸಂದ್ರ ಬೆಂಗಳೂರು ನಗರದ ಬಹು ನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗವಾಗಿತ್ತು. ಟೆಕ್ಕಿಗಳಿಗೆ ಅನುಕೂಲ ಮಾಡಿಕೊಡುವ ಜೊತೆಗೆ ಈ ಮಾರ್ಗ ಉದ್ಘಾಟನೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಸುತ್ತಲಿನ ಸಂಚಾರ ದಟ್ಟಣೆಯೂ ಕಡಿಮೆಯಾಗಿದೆ.
ಸಂಚಾರಿ ಪೊಲೀಸರ ಸಮೀಕ್ಷೆ ಪ್ರಕಾರ ಬೆಳಗ್ಗೆ ಪೀಕ್ ಅವರ್ ಟ್ರಾಫಿಕ್ ಶೇ 38, ಸಂಜೆಯ ದಟ್ಟಣೆ ಶೇ 37ರಷ್ಟು ಕಡಿಮೆಯಾಗಿದೆ. ವಾರದ ದಿನಗಳಲ್ಲಿ ಒಟ್ಟಾರೆ ಸಂಚಾರ ದಟ್ಟಣೆ ಶೇ 17ರಷ್ಟು ಕಡಿಮೆಯಾಗಿದೆ. 5ನೇ ರೈಲು ಸಂಚಾರದ ಬಳಿಕ ಇನ್ನಷ್ಟು ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಲ್ಲಿ ಪೊಲೀಸರು ಇದ್ದಾರೆ.