ಬೈಕ್‌ ಟ್ಯಾಕ್ಸಿ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

0
48

ಬೈಕ್‌ ಟ್ಯಾಕ್ಸಿ ವಿಚಾರದಲ್ಲಿ ಕರ್ನಾಟಕದಲ್ಲಿ ಗೊಂದಲ ದೂರವಾಗಿಲ್ಲ. ಈ ಕುರಿತು ನೀತಿ ರೂಪಿಸಲು ವಿಫಲವಾದ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ನೀತಿ ರಚನೆಗೆ ನೀಡಲಾಗಿದ್ದ ಒಂದು ತಿಂಗಳ ಅವಧಿ ಮುಗಿದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಕಾರಣ ಬೈಕ್‌ ಟ್ಯಾಕ್ಸಿಗಳ ಮೇಲಿನ ನಿಷೇಧಕ್ಕೆ ಸಂಪೂರ್ಣ ತಡೆ ನೀಡುವುದಾಗಿ ಎಚ್ಚರಿಕೆ ನೀಡಿದೆ.

ಅರ್ಜಿಯ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಹಾಗೂ ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠವು ಈ ಕುರಿತ ಅರ್ಜಿ ವಿಚಾರಣೆ ನಡೆಸಿ, ನಾವು ನೀತಿ ರೂಪಿಸಲು ಸರ್ಕಾರಕ್ಕೆ ಒಂದು ತಿಂಗಳು ಕಾಲಾವಕಾಶವನ್ನು ನೀಡಿದ್ದೆವು. ಆದರೆ ಏನೂ ಮಾಡಿಲ್ಲ. ಬದಲಾಗಿ, ನೀವು ಗಿಗ್ ಕಾರ್ಮಿಕರ ಕಾಯ್ದೆಯನ್ನು ತಂದಿದ್ದೀರಿ. ಹೀಗಾದರೆ, ನಾವು ನಿಷೇಧಕ್ಕೆ ಸಂಪೂರ್ಣ ತಡೆಯಾಜ್ಞೆ ನೀಡಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿತು.

ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್‌ ಶೆಟ್ಟಿ, ಅಗ್ರಿಗೇಟರ್ ಸಂಸ್ಥೆಗಳು ಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಿ ಬೈಕ್ ಟ್ಯಾಕ್ಸಿಗಳ ಬಳಕೆ ಮುಂದುವರಿಸಿವೆ. ರಾಜ್ಯ ಸರ್ಕಾರವು ಗಿಗ್‌ ಕಾರ್ಮಿಕರ ಕಾಯ್ದೆಯನ್ನು ಜಾರಿಗೆ ತಂದಿದ್ದು, ಇದರಡಿಯಲ್ಲಿ ದ್ವಿಚಕ್ರ ವಾಹನಗಳನ್ನು ಡೆಲಿವರಿ ಉದ್ದೇಶಗಳಿಗಾಗಿ ಬಳಸಲು ಅನುಮತಿ ನೀಡಲಾಗಿದೆ ಎಂದರು.

ಓಲಾ, ಉಬರ್ ನಂತಹ ಸಂಸ್ಥೆಗಳು ಇದರಲ್ಲಿ ಸೇರಿದ್ದು, ಚಾಲಕರ ಹಿತಾಸಕ್ತಿಗಳನ್ನು ರಕ್ಷಿಸಲಾಗಿದೆ. ಆದರೂ, ಅರ್ಜಿದಾರರು ಕೋರ್ಟ್ ಆದೇಶಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಹೇಳಿದರು.

ಬೈಕ್‌ ಟ್ಯಾಕ್ಸಿ ಚಾಲಕರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ, ಸವಾರರಿಗೆ ತಮ್ಮ ಬೈಕ್‌ಗಳನ್ನು ನಿಲ್ಲಿಸಲು ಯಾವುದೇ ನಿಲ್ದಾಣಗಳಿಲ್ಲ ಮತ್ತು ಓಲಾ ಹಾಗೂ ಉಬರ್‌ನಂತಹ ಕಂಪನಿಗಳು ನೀಡುತ್ತಿರುವ ಸೇವೆಗಳನ್ನು ನಿಲ್ಲಿಸಿದರೆ ಅವರು ತಮ್ಮ ಜೀವನೋಪಾಯವನ್ನೇ ಕಳೆದುಕೊಳ್ಳುತ್ತಾರೆ ಎಂದು ಪ್ರತಿಪಾದಿಸಿದರು.

ಮೋಟಾರು ವಾಹನ ಕಾಯ್ದೆಯಡಿ ಸರ್ಕಾರ ನಿಯಮಗಳನ್ನು ರೂಪಿಸುವವರೆಗೆ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿ ಏಪ್ರಿಲ್‌ನಲ್ಲಿ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ರಾಪಿಡೊ, ಉಬರ್, ಓಲಾ ಮತ್ತು ಇತರ ಕಂಪನಿಗಳು ಹೈಕೋರ್ಟ್‌ ದ್ವಿಸದಸ್ಯ ಪೀಠದ ಮೊರೆ ಹೋಗಿದ್ದು, ಕೋರ್ಟ್ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿದೆ.

Previous articleವರ್ಷಾಂತ್ಯಕ್ಕೆ ಹೊಸ ಅವತಾರ್‌
Next articleಮಂಗಳೂರು: ಸೆಪ್ಟೆಂಬರ್ 30 ರಂದು ಕುಡ್ಲದ ಪಿಲಿಪರ್ಬ- 4 ನೇ ಆವೃತ್ತಿ

LEAVE A REPLY

Please enter your comment!
Please enter your name here