ಪುಸ್ತಕೋದ್ಯಮಕ್ಕೆ ಜಿಎಸ್‌ಟಿ ಪರಿಷ್ಕರಣೆ ಕೊಡಲಿ ಪೆಟ್ಟು

0
25

ರಾಜು ಮಳವಳ್ಳಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ಪರಿ ಷ್ಕರಣೆ ಹಲವು ವಲಯಗಳಲ್ಲಿ ಉಳಿತಾಯದ ಉತ್ಸವಕ್ಕೆ ಕಾರಣವಾಗಿದ್ದರೂ ಜ್ಞಾನಪ್ರಸಾರದ ಪುಸ್ತಕೋದ್ಯಮಕ್ಕೆ ಕೊಡಲಿಪೆಟ್ಟು ನೀಡಿ ಪ್ರಕಾಶಕರ ದುಗುಡ ಹೆಚ್ಚಿಸಿದೆ!

ಓದುವ ಸಂಸ್ಕೃತಿಯ ಇಳಿಕೆ, ಸಗಟು ಖರೀದಿ ಯೋಜನೆಯ ಸ್ಥಗಿತ ಮತ್ತು ಇ-ಬುಕ್‌ಗಳ ಆಸಕ್ತಿಯ ಹೆಚ್ಚಳ ಮತ್ತಿತರ ಹೊಡೆತಗಳಿಂದ ಸಂಕಷ್ಟದಲ್ಲಿರುವ ಕನ್ನಡ ಪುಸ್ತಕೋದ್ಯಮಕ್ಕೆ ಇದೀಗ ಜಿಎಸ್‌ಟಿ ಪರಿಷ್ಕರಣೆ ಮರ್ಮಾಘಾತ ನೀಡಿದ್ದು, ಇನ್ನಷ್ಟು ಆರ್ಥಿಕ ಹೊರೆಯನ್ನು ಹೊರಿಸಿದೆ.

ಪುಸ್ತಕಗಳ ತಯಾರಿಕೆಗೆ ಅತ್ಯವಶ್ಯಕವಾಗಿರುವ ಮುದ್ರಣ ಕಾಗದದ ಮೇಲೆ ಈ ಮುನ್ನ ಜಿಎಸ್‌ಟಿ ದರ ಶೇ.12ರಷ್ಟಿತ್ತು. ಇದೀಗ ಪರಿಷ್ಕೃತ ಆದೇಶದಲ್ಲಿ ಈ ತೆರಿಗೆಯ ಪ್ರಮಾಣವನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ. ಈ ಹೆಚ್ಚಳದಿಂದಾಗಿ ಸಹಜವಾಗಿಯೇ ಪುಸ್ತಕಗಳ ಉತ್ಪಾದನಾ ವೆಚ್ಚ ಅಧಿಕವಾಗಲಿದೆ.

ಈ ಮಧ್ಯೆ ಪುಸ್ತಕಗಳ ಮುದ್ರಣಕ್ಕೆ ಬಳಸಲಾಗುವ ಕಚ್ಚಾವಸ್ತುಗಳಾದ ಬಣ್ಣ (ಇಂಕ್), ಸಿಟಿಪಿ ಪ್ಲೇಟ್‌ಗಳ ಬೆಲೆಯೂ ಗಗನಮುಖಿಯಾಗಿದೆ. ಪರಿಣಾಮ ಇಡೀ ಪುಸ್ತಕದ ತಯಾರಿಕಾ ವೆಚ್ಚ ಒಮ್ಮಿಂದೊಮ್ಮೆಲೇ ಏರಿಕೆಯಾಗಿ ಕೃತಿಗಳ ಬೆಲೆಗಳು ಹೆಚ್ಚಳವಾಗಲಿದ್ದು, ಇದು ಓದುಗರನ್ನು ಪುಸ್ತಕ ಖರೀದಿಯಿಂದ ದೂರ ಮಾಡಬಹುದು ಎಂಬ ಆತಂಕ ಪ್ರಕಾಶಕರನ್ನು ಕಾಡತೊಡಗಿದೆ.

ಹೊಸ ಜಿಎಸ್‌ಟಿ ದರಗಳಿಂದಾಗಿ ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ ಮತ್ತಿತರ ಬಹುವಲಯದ ಕೃತಿಗಳ ಬೆಲೆ ಏರಿಕೆಯಾಗಲಿದೆ. ಪ್ರಕಾಶಕರು ಅಂದಾಜಿಸಿರುವ ಪ್ರಕಾರ ಹೊಸ ಪರಿಷ್ಕೃತ ಜಿಎಸ್‌ಟಿ ದರದಿಂದಾಗಿ 100 ರೂ. ಇದ್ದ ಪುಸ್ತಕದ ಬೆಲೆ 140 ರೂ.ಗೆ ಏರಲಿದೆ. 150 ರೂ. ಇದ್ದ ಪುಸ್ತಕದ ಬೆಲೆ 210 ರೂ.ಗೆ ಮತ್ತು 200 ರೂ. ಇದ್ದ ಪುಸ್ತಕದ ಬೆಲೆ 270 ರೂ. ತನಕ ಹೆಚ್ಚಳವಾಗಲಿದೆ.

ಡಿಜಿಟಲ್ ಅಬ್ಬರದಿಂದಾಗಿ ಓದುವ ಸಂಸ್ಕೃತಿಗೆ ಸಂಬಂಧಿಸಿದ ಕೃತಿಗಳ ಬೆಲೆಯೂ ಅಧಿಕವಾದರೆ ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆಯಾಗುವುದು ಖಚಿತ ಎಂದು ಪ್ರಕಾಶಕರು ಹೇಳುತ್ತಿದ್ದಾರೆ. ಜಿಎಸ್‌ಟಿ ಏರಿಕೆಯು ಹೊಸ ಬರಹಗಾರರ ಪುಸ್ತಕ ಪ್ರಕಟಣೆಗೆ ಹೊಡೆತ ಕೊಡುವುದರ ಜತೆಗೆ ಭವಿಷ್ಯದಲ್ಲಿ ಪುಸ್ತಕಗಳ ಪ್ರಕಟಣೆಯ ಪ್ರಮಾಣದ ಕುಸಿತ ಹಾಗೂ ಪ್ರಕಾಶನ ಸಂಸ್ಥೆಗಳ ಮುಚ್ಚುವಿಕೆಗೂ ಕಾರಣವಾಗುವುದೆಂಬ ಆತಂಕ ಸೃಷ್ಟಿಯಾಗಿದೆ.

ಲೇಖಕರಿಗೆ ಪ್ರಕಾಶಕರು ನೀಡುವ ಗೌರವಧನದ ಮೇಲೂ ಈಗಾಗಲೇ ಶೇ 18ರಷ್ಟು ಜಿಎಸ್‌ಟಿ ಇದೆ. ಅದನ್ನು ಈ ಬಾರಿ ಜಿಎಸ್‌ಟಿ ಪರಿಷ್ಕರಣೆಯಲ್ಲಿ ಇಳಿಸಿಲ್ಲ. ಹೀಗಾಗಿ ಪುಸ್ತಕ ಪ್ರಕಟಣೆಯ ಮೇಲೆ ಒಟ್ಟಾರೆ ಶೇ 36ರಷ್ಟು ತೆರಿಗೆಯ ಹೊರೆ ಬೀಳಲಿದೆ.

“ಜಿಎಸ್‌ಟಿ ಪರಿಷ್ಕೃತ ದರ ಮೊದಲೇ ಸಮಸ್ಯೆಗಳಲ್ಲಿರುವ ಪ್ರಕಾಶಕರನ್ನು ಇನ್ನಷ್ಟು ಸಮಸ್ಯೆಗಳ ಪ್ರಪಾತಕ್ಕೆ ನೂಕಿದೆ. ಇಷ್ಟೆಲ್ಲಾ ಜಿಎಸ್‌ಟಿ ಪಾವತಿಸಿ ಪುಸ್ತಕಗಳ ಪ್ರಕಟಣೆ ಮಾಡಬೇಕೇ? ಎಂಬ ಪ್ರಶ್ನೆ ಮೂಡಿದೆ” ಎಂದು ರವಿಕುಮಾರ್, ಪ್ರಕಾಶಕರು, ಅಭಿನವ ಪ್ರಕಾಶನ ಹೇಳಿದ್ದಾರೆ.

“ಕೇಂದ್ರ ಸರ್ಕಾರದ ಹೊಸ ನಿಲುವು ನಮ್ಮ ಪಾಲಿಗೆ ಮರಣಶಾಸನದಂತಿದೆ. ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸುವ ಉಮೇದು ನಾಶವಾಗಲಿದ್ದು, ಇಡೀ ಪುಸ್ತಕೋ ದ್ಯಮವೇ ಕಂಗೆಡುವ ಸ್ಥಿತಿ ನಿರ್ಮಾಣವಾಗಿದೆ” ಎಂದು ಚಿ.ಎಸ್.ವಿದ್ಯಾರಣ್ಯ, ಪ್ರಕಾಶಕರು, ಚಾರುಮತಿ ಪ್ರಕಾಶನ ತಿಳಿಸಿದ್ದಾರೆ.

Previous articleDJ ನಿರ್ಬಂಧಿಸಲು ದಾವಣಗೆರೆಯೇನು ಶಾಮನೂರು ಕುಟುಂಬದ ಆಸ್ತಿಯಾ: ಪ್ರತಾಪ್ ಸಿಂಹ ವಾಗ್ದಾಳಿ
Next articleಕಲಬುರಗಿ: ಧಾರಾಕಾರ ಮಳೆಯಿಂದಾಗಿ ಸೇತುವೆ ಜಲಾವೃತ – ರೈಲು ಸಂಚಾರದಲ್ಲಿ ವ್ಯತ್ಯಯ

LEAVE A REPLY

Please enter your comment!
Please enter your name here