ತಾಲೂಕು ಕಛೇರಿಯಲ್ಲಿ ಸಿಗಲಿದ್ದಾರೆ ಜಿಲ್ಲಾಧಿಕಾರಿ, ಸರ್ಕಾರದ ಹೊಸ ಆದೇಶ

0
32

ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಇನ್ನು ಮುಂದೆ ಡಿಸಿ ಕಛೇರಿಗೆ ಭೇಟಿ ನೀಡಬೇಕಿಲ್ಲ. ತಾಲೂಕು ಕಛೇರಿಯಲ್ಲಿಯೇ ಅವರು ಸಿಗಲಿದ್ದಾರೆ. ಹೌದು ಈ ಕುರಿತು ಕರ್ನಾಟಕ ಸರ್ಕಾರ ಆದೇಶವನ್ನು ಹೊರಡಿಸಿದೆ.

ಈ ಕುರಿತು ನಾಗವೇಣಿ ಎಸ್.ಕೆ. ಸರ್ಕಾರದ ಉಪ ಕಾರ್ಯದರ್ಶಿ, ಕಂದಾಯ ಇಲಾಖೆ (ಸಮನ್ವಯ, ಸೇ-2 & ಮಂಡಳಿಗಳು & ಪ್ರಾಧಿಕಾರಗಳು) ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳ ಮಂಗಳವಾರದಂದು ಜಿಲ್ಲಾ ವ್ಯಾಪ್ತಿಯ ತಾಲ್ಲೂಕು ಕಚೇರಿಗೆ ಭೇಟಿ ನೀಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

ಸರ್ಕಾರದ ಆದೇಶ: ಸರ್ಕಾರಿ ಸೌಲಭ್ಯಗಳನ್ನು ಸುಲಭವಾಗಿ ಜನರು ಪಡೆಯುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಾರಂಭಿಸಿದ ‘ಜಿಲ್ಲಾಧಿಕಾರಿಗಳ ನಡೆ- ಹಳ್ಳಿಯ ಕಡೆ’ ಕಾರ್ಯಕ್ರಮವು ಜನಪ್ರಿಯವಾಗಿ ಯಶಸ್ಸು ಕಂಡಿದೆ. ಈ ಕಾರ್ಯಕ್ರಮದಿಂದ ಸಾವಿರಾರು ಜನರಿಗೆ ಅನುಕೂಲವಾಗಿದೆ ಹಾಗೂ ಜನರಿಂದ ಉತ್ತಮ ಪ್ರತಿಕ್ರಿಯೆ/ ಸ್ಪಂದನೆ ಲಭ್ಯವಾಗಿರುತ್ತದೆ ಎಂದು ಆದೇಶ ಹೇಳಿದೆ.

ರಾಜ್ಯದ ಅನೇಕ ಜಿಲ್ಲೆಗಳಲ್ಲಿ, ಜಿಲ್ಲಾಧಿಕಾರಿ ಕಛೇರಿ ತಾಲ್ಲೂಕು ಕೇಂದ್ರಗಳಿಂದ ಸುಮಾರು 80 ರಿಂದ 120 ಕಿ.ಮೀಗಳಷ್ಟು ದೂರವಿರುತ್ತದೆ. ವಯೋವೃದ್ಧರು, ವಿಕಲಚೇತನರು ಹಾಗೂ ಮಹಿಳೆಯರು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಅರ್ಜಿ ನೀಡುವುದಕ್ಕೆ ತೊಂದರೆಯಾಗುತ್ತಿದ್ದು, ಪ್ರತಿ ತಾಲ್ಲೂಕಿನಲ್ಲಿ ಅದರದೇ ಆದ ಸಮಸ್ಯೆಗಳಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ವಿವಿಧ ಇಲಾಖೆಗಳ ಹೂಂದಾಣಿಕೆಯ ಕೊರತೆಯಿಂದಲೂ ಅನೇಕ ಸಮಸ್ಯೆಗಳು ಉದ್ಬವಿಸಿರುತ್ತವೆ.

ಜಿಲ್ಲಾಧಿಕಾರಿಗಳು ತಾಲ್ಲೂಕು ಕಛೇರಿಗೆ ತೆರಳಿದಲ್ಲಿ ಜನರಿಗೆ ನಿರ್ದಿಷ್ಟ ಸಮಯದಲ್ಲಿ ಖುದ್ದು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಅವರ ತೊಂದರೆ/ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಅವರ ಅಹವಾಲುಗಳನ್ನು ಸಲ್ಲಿಸಲು ಸಹಾಯವಾಗುತ್ತದೆ. ತಾಲ್ಲೂಕು ಕಛೇರಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದಲ್ಲಿ ಅವುಗಳನ್ನು ಸರಿಪಡಿಸುವುದಕ್ಕೆ ಜಿಲ್ಲಾಡಳಿತಕ್ಕೆ ಹೆಚ್ಚಿನ ಅನುಕೂಲವಾಗಲಿದೆ.

ಆದ್ದರಿಂದ ಜಿಲ್ಲಾಧಿಕಾರಿಗಳ ನಡೆ -ಹಳ್ಳಿಯ ಕಡೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಎಲ್ಲಾ ಜಿಲ್ಲಾಧಿಕಾರಿಗಳು ವೇಳಾಪಟ್ಟಿಯಂತೆ ಪ್ರತಿ ತಿಂಗಳ ಎಲ್ಲಾ ಮಂಗಳವಾರಗಳಂದು ಮಧ್ಯಾಹ್ನ 11 ಗಂಟೆಯಿಂದ 2 ಗಂಟೆಯ ತನಕ ತಾಲ್ಲೂಕು ಕಛೇರಿಯಲ್ಲಿ ಲಭ್ಯವಿದ್ದು, ಜನಸಾಮಾನ್ಯರ ಕುಂದುಕೊರತೆಗಳನ್ನು ಬಗೆಹರಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ಹಾಗೂ ಕೈಗೊಂಡ ಕ್ರಮದ ಮಾಹಿತಿಯನ್ನು ಪ್ರತಿ ವಾರ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದೆ.

ಮುಂದುವರೆದು, ರಾಜ್ಯದಲ್ಲಿ ಚುನಾವಣೆಗಳು ಘೋಷಣೆಯಾದ ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳು ಕೇಂದ್ರ ಕಛೇರಿಗಳಲ್ಲಿದ್ದು, ಚುನಾವಣಾ ಪೂರ್ವ ಸಿದ್ಧತೆಯನ್ನು ಕೈಗೊಳ್ಳಬೇಕಾಗಿರುವುದರಿಂದ, ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳತಕ್ಕದ್ದು ಹಾಗೂ ಈ ಬಗ್ಗೆ ಸಾಕಷ್ಟು ಮುಂಚಿತವಾಗಿ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸತಕ್ಕದ್ದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

Previous articleನಕಲಿ ದಾಖಲೆ ಸೃಷ್ಟಿಸಿ ಮದುವೆ: ಯೂಟ್ಯೂಬರ್ ಮುಕಳೆಪ್ಪ ಸೇರಿ 7 ಜನರ ವಿರುದ್ಧ FIR!
Next articleಪಾಕ್‌ನಿಂದ ಪಾಕ್ ಮೇಲೇ ಸರ್ಜಿಕಲ್ ಸ್ಟ್ರೇಕ್: 30 ಬಲಿ

LEAVE A REPLY

Please enter your comment!
Please enter your name here