ಶುಶ್ರೂಷಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶವನ್ನು ಹೊರಡಿಸಿದೆ. ಇಲಾಖೆಯಲ್ಲಿ ಮಂಜೂರಾಗಿ ಖಾಲಿ ಇರುವ ಶುಶ್ರೂಷಾಧಿಕಾರಿ ಹುದ್ದೆಗಳನ್ನು ಗುತ್ತಿಗೆ (Contract) ಆಧಾರದ ಮೇಲೆ ಭರ್ತಿ ಮಾಡುವ ಬಗ್ಗೆ, ವೇತನ ವಿವರದ ಸಹಿತ ಮಾಹಿತಿ ನೀಡಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಪ್ರದೀಪ್ ಕುಮಾರ್ ಬಿ.ಎಸ್. ಸರ್ಕಾರದ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಸೇವೆಗಳು-1) ಆದೇಶವನ್ನು ಹೊರಡಿಸಿದ್ದಾರೆ.
ಪ್ರಸ್ತಾವನೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಒಂದು ಸಾರ್ವಜನಿಕ ಸೇವಾ ನಿರತ ಇಲಾಖೆಯಾಗಿದ್ದು, ಶುಶ್ರೂಷಾಧಿಕಾರಿ ಹುದ್ದೆಗಳನ್ನು ಒಳಗೊಂಡಂತೆ ವಿವಿಧ ವೃಂದದ ಅರೆ ವೈದ್ಯಕೀಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆಡಳಿತಾತ್ಮಕ ಅನುಮತಿಯನ್ನು ಕೋರುತ್ತಾ, ನೇರ ನೇಮಕಾತಿ ಮೂಲಕ ಅನುಮತಿ ನೀಡಿ ಭರ್ತಿ ಮಾಡುವವರೆಗೆ ಅಥವಾ ಒಂದು ವರ್ಷದ ಅವಧಿಗೆ ಸದರಿ ಖಾಲಿ ಹುದ್ದೆಗಳನ್ನು ಗುತ್ತಿಗೆ/ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅನುಮತಿ ನೀಡುವಂತೆ ಕೋರಿರುತ್ತಾರೆ.
ಆಯುಕ್ತಾಲಯದ ದಿನಾಂಕ 01/09/2023ರ ಪ್ರಸ್ತಾವನೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಂಜೂರಾಗಿ ಖಾಲಿ ಇರುವ 1205 ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹಾಗೂ 300 ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಗಳನ್ನು ಕೆಲವೊಂದು ಷರತ್ತಿಗೊಳಪಟ್ಟು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಿಕೊಳ್ಳಲು ಸರ್ಕಾರವು ಅನುಮತಿ ನೀಡಿ ಆದೇಶಿಸಲಾಗಿದೆ.
ಅದೇ ರೀತಿಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಎದುರಾಗಿ 400 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹಾಗೂ 400 ಫಾರ್ಮಸಿಸ್ಟ್ ಹುದ್ದೆಗಳನ್ನು ಕೆಲವೊಂದು ಷರತ್ತಿಗೊಳಪಟ್ಟು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಮಾತ್ರ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಿ ಆದೇಶಿಸಲಾಗಿದೆ.
ಮುಂದುವರೆದು, ಸಾರ್ವಜನಿಕರಿಗೆ/ ಜನ ಸಮುದಾಯಕ್ಕೆ ಉತ್ತಮ ಆರೋಗ್ಯ ಸೇವೆಯನ್ನು ಸಕಾಲದಲ್ಲಿ ನೀಡಲು ಅನುಕೂಲವಾಗುವಂತೆ ಇಲಾಖೆಯಲ್ಲಿ ಮಂಜೂರಾಗಿ ಪ್ರಸ್ತುತ ಖಾಲಿ ಇರುವ ಶುಶ್ರೂಷಾಧಿಕಾರಿ ವೃಂದದಲ್ಲಿನ ತೀವ್ರ ಅಗತ್ಯವಿರುವ ಖಾಲಿ ಸ್ಥಾನ/ ಹುದ್ದೆಗಳನ್ನು ಆದ್ಯತೆ ಮೇಲೆ ಭರ್ತಿ ಮಾಡಲು ಇಲಾಖೆಯಲ್ಲಿ ಖಾಲಿ ಇರುವ ಶುಶ್ರೂಷಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಲ್ಲಿ, ತಗಲುವ ಆರ್ಥಿಕ ವೆಚ್ಚದ ವಿವರವನ್ನು ರಾಜ್ಯ ವಲಯದ ಲೆಕ್ಕಶೀರ್ಷಿಕೆ ಅಡಿ ಭರಿಸಬಹುದಾಗಿದೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಂಜೂರಾಗಿ ಖಾಲಿ ಇರುವ 600 ಶುಶ್ರೂಷಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲು 600 ಶುಶ್ರೂಷಾಧಿಕಾರಿ ಹುದ್ದೆಗಳನ್ನು ಷರತ್ತುಗಳಿಗೊಳಪಟ್ಟು ಗುತ್ತಿಗೆ ಆಧಾರದ ಮೇಲೆ ಪಡೆಯಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ.
ಷರತ್ತುಗಳು
- ಇಲಾಖೆಯಲ್ಲಿ ನೇರ ನೇಮಕಾತಿ ಮುಖಾಂತರ ಶುಶ್ರೂಷಾಧಿಕಾರಿ ಹುದ್ದೆಗಳು ಭರ್ತಿಯಾದ ನಂತರ 600 ಶುಶ್ರೂಷಾಧಿಕಾರಿ ಹುದ್ದೆಗಳ ಗುತ್ತಿಗೆ ಸೇವೆಯನ್ನು ರದ್ದುಗೊಳಿಸತಕ್ಕದ್ದು.
- ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳುವಾಗ ಭವಿಷ್ಯದ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನಿನ ತೊಡಕುಗಳು ಉದ್ಭವಿಸದಂತೆ ಕ್ರಮವಹಿಸತಕ್ಕದ್ದು.
- ಗುತ್ತಿಗೆ ಆಧಾರದ ಮೇಲಿನ ಸಿಬ್ಬಂದಿಗಳ ಆಯ್ಕೆಯನ್ನು ಈ ಹಿಂದಿನ ಗುತ್ತಿಗೆ ಅವಧಿಯ ಸೇವೆಯನ್ನು ಪರಿಗಣಿಸದೆ, ಮತ್ತೆ ಹೊಸದಾಗಿ ಸೇವೆಗೆ ಸೇರಿಸಿಕೊಂಡಂತೆ ಪರಿಗಣಿಸಿ ಆಯ್ಕೆ ಮಾಡತಕ್ಕದ್ದು.
- ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರು ಶುಶ್ರೂಷಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಪೂರ್ವದಲ್ಲಿ ಜಿಲ್ಲಾವಾರು ಮತ್ತು ಸಿಬ್ಬಂದಿಗಳ ಕೊರತೆ ಇರುವ ಕೇಂದ್ರಗಳ ಮತ್ತು ಜಿಲ್ಲಾವಾರು ಮಾಹಿತಿಯನ್ನು ಮತ್ತು ಯಾವ ಜಿಲ್ಲೆ ಮತ್ತು ಕೇಂದ್ರಗಳಿಗೆ ಪ್ರಸ್ತಾಪಿತ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ತುಂಬುವ ಅವಶ್ಯಕತೆ ಇದೆ ಎಂಬುದರ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
ಶುಶ್ರೂಷಾಧಿಕಾರಿ ವೇತನ ವಿವರ
- ಬೇಸಿಕ್+ವಿಡಿಎ – 17,435
- ಇಪಿಎಫ್ ಶೇ 13 – 2,267
- ಇಎಸ್‌ಐ ಶೇ 3.25 – 567
- ಒಟ್ಟು – 20,268
- ಸರ್ವೀಸ್ ಚಾರ್ಜಸ್ ಶೇ 2 (ಮೈಟ್ ವೆರಿ) – 405
- ಒಟ್ಟು – 20,674
- ಜಿಎಸ್‌ಟಿ ಶೇ 18 – 3,721
- ಒಟ್ಟು (ಒಬ್ಬ ಅಭ್ಯರ್ಥಿಗೆ) – 24,395 ರೂ.ಗಳು.