ಸಚಿವ ಸಂಪುಟಕ್ಕೆ ಶೀಘ್ರದಲ್ಲೇ ಸರ್ಜರಿ: ಯಾರಿಗೆ ಒಲಿಯಲಿದೆ ಮಂತ್ರಿಗಿರಿ?

0
15

ಕರ್ನಾಟಕ ರಾಜಕೀಯದಲ್ಲಿ ಮತ್ತೆ ಸಚಿವ ಸಂಪುಟ ಪುನಾರಚನೆಯ ಮಾತುಗಳು ಮುನ್ನೆಲೆಗೆ ಬಂದಿವೆ. ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ಸಂಪುಟದಲ್ಲಿ ಮಹತ್ವದ ಬದಲಾವಣೆಗಳು ನಡೆಯುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಸಚಿವ ಸ್ಥಾನದ ಆಕಾಂಕ್ಷಿ ಸುಳಿವು ನೀಡಿದ್ದಾರೆ.

ದೆಹಲಿಯಲ್ಲಿ ಮಾತನಾಡಿರುವ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್, ಡಿಸೆಂಬರ್ ತಿಂಗಳ ಒಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಬಹುದು ಎಂದು ಸೂಚಿಸಿದ್ದಾರೆ. ನವೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಎರಡುವರೆ ವರ್ಷ ಪೂರ್ಣಗೊಳ್ಳುವುದರಿಂದ, ಈ ಸಂದರ್ಭದಲ್ಲಿ ಸಂಪುಟದಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.

ಈ ಮೂಲಕ ಅಧಿಕಾರ ಹಂಚಿಕೆ ಸೂತ್ರವನ್ನು ಅನುಷ್ಠಾನಗೊಳಿಸಲು ಹೈಕಮಾಂಡ್ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ಳುವ ಸಂದರ್ಭದಲ್ಲಿ ಆಡಳಿತಕ್ಕೆ ಹೊಸ ಚುರುಕು ನೀಡುವ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ಉದ್ದೇಶದಿಂದ ಹೈಕಮಾಂಡ್ ಈ ನಿರ್ಧಾರಕ್ಕೆ ಬರಬಹುದು ಎನ್ನಲಾಗಿದೆ.

ಕೆಲವು ಹಿರಿಯ ಸಚಿವರನ್ನು ಪಕ್ಷದ ಸಂಘಟನೆಗೆ ನಿಯೋಜಿಸಿ, ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಗಳಿವೆ. ಇದರಿಂದ ಪಕ್ಷದಲ್ಲಿ ಹೊಸ ನಾಯಕತ್ವ ಬೆಳೆಯಲು ಅವಕಾಶ ಸಿಗುವುದಲ್ಲದೆ, ಪ್ರಾದೇಶಿಕ ಮತ್ತು ಜಾತಿ ಸಮತೋಲನವನ್ನು ಕಾಯ್ದುಕೊಳ್ಳುವ ಪ್ರಯತ್ನವನ್ನೂ ಮಾಡಬಹುದು.

ಈ ಹಿಂದೆ, ಸರ್ಕಾರ ಎರಡು ವರ್ಷ ಪೂರೈಸಿದಾಗಲೂ ಸಂಪುಟ ಪುನಾರಚನೆಗೆ ಒತ್ತಾಯಗಳು ಕೇಳಿಬಂದಿದ್ದವು. ಆ ಸಮಯದಲ್ಲಿ ಕೆಲವು ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನಗಳಿದ್ದವು. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಶಾಸಕರು ಮತ್ತು ಸಚಿವರೊಂದಿಗೆ ನಡೆಸಿದ ಪ್ರತ್ಯೇಕ ಸಭೆಗಳಲ್ಲಿ ಆಂತರಿಕವಾಗಿ ಗಂಭೀರ ಚರ್ಚೆಗಳು ನಡೆದಿವೆ. ಸಚಿವರ ಕಾರ್ಯಕ್ಷಮತೆ ಮತ್ತು ಜನಪ್ರಿಯತೆ ಆಧಾರದ ಮೇಲೆ ಬದಲಾವಣೆಗಳು ಆಗಬಹುದು ಎನ್ನಲಾಗಿದೆ.

ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್, ಶಾಸಕರಾದ ನರೇಂದ್ರಸ್ವಾಮಿ, ಆಸೀಫ್ ಸೇಠ್, ಬಿ ನಾಗೇಂದ್ರ, ಅನಿಲ್ ಚಿಕ್ಕಮಾದು, ಟಿ ರಘುಮೂರ್ತಿ, ಬಿ ಆರ್ ಪಾಟೀಲ್, ಅಜಯ್ ಸಿಂಗ್, ತನ್ವೀರ್ ಸೇಠ್, ಬಿ.ಕೆ ಸಂಗಮೇಶ್, ವಿಜಯಾನಂದ ಕಾಶಪ್ಪನವರ್ ಮತ್ತು ಸಲೀಂ ಅಹ್ಮದ್ ಸೇರಿದಂತೆ ಹಲವರು ಮಂತ್ರಿಗಿರಿ ಮೇಲೆ ಕಣ್ಣಿಟ್ಟಿದ್ದಾರೆ.

ಯುವ ಶಾಸಕರಿಗೆ ಮತ್ತು ಪಕ್ಷಕ್ಕೆ ನಿಷ್ಠರಾಗಿರುವವರಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಅಂತಿಮವಾಗಿ ಹೈಕಮಾಂಡ್ ಯಾರಿಗೆಲ್ಲಾ ಅವಕಾಶ ನೀಡಲಿದೆ ಎಂಬುದು ಕುತೂಹಲಕಾರಿಯಾಗಿದೆ. ಈ ಸಂಪುಟ ಸರ್ಜರಿಯು ರಾಜ್ಯ ರಾಜಕೀಯದಲ್ಲಿ ಹೊಸ ಬದಲಾವಣೆಗಳಿಗೆ ನಾಂದಿ ಹಾಡಲಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳು ಸ್ಪಷ್ಟವಾಗಿ ಗೋಚರಿಸಲಿವೆ.

ಈಗಾಗಲೇ 2ಸೀಟ್ ಖಾಲಿ: ಕೆ. ಎನ್. ರಾಜಣ್ಣ ಈಗಾಗಲೇ ಸಚಿವ ಸ್ಥಾನದಿಂದ ಕೆಳಗಿಳಿದಿದ್ದಾರೆ. ಹಾಗೂ ಪರಿಶಿಷ್ಟ ಪಂಗಡಗಳ ಇಲಾಖೆ ಅಧೀನದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಹೈಕಮಾಂಡ್‌ ಸೂಚನೆ ಮೇರೆಗೆ ಯುವಜನ ಸೇವೆ, ಕ್ರೀಡೆ ಮತ್ತು ಎಸ್‌ಟಿ ಕಲ್ಯಾಣ ಸಚಿವ ಬಿ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಎರಡು ಸ್ಥಾನಗಳು ಇಗಾಗಲೆ ಖಾಲಿ ಇವೆ.

Previous articleಶುಶ್ರೂಷಾಧಿಕಾರಿ ಹುದ್ದೆಗಳ ಭರ್ತಿ: ಷರತ್ತು, ವೇತನ ವಿವರ
Next articleಆನ್‌ಲೈನ್ ಬೆಟ್ಟಿಂಗ್ ಹಗರಣ: ಯುವರಾಜ್ ಸಿಂಗ್ ಸೇರಿ ಹಲವರಿಗೆ ಇ.ಡಿ ವಿಚಾರಣೆ ಬಿಸಿ!

LEAVE A REPLY

Please enter your comment!
Please enter your name here