ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಹೊಸ ತೆರಿಗೆಯಾಗಿ ಟ್ರಾಫಿಕ್ ಬಂದಿದೆ ಎಂದು ಟೆಕ್ಕಿಯೊಬ್ಬರು ಹಂಚಿಕೊಂಡಿದ್ದ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜೆಪಿ ನಗರದದಲ್ಲಿ ನಾನು ವಾಸವಾಗಿದ್ದು ಕಚೇರಿ ಹೊರ ವರ್ತುಲ ರಸ್ತೆಯಲ್ಲಿದೆ. ವರ್ಷಕ್ಕೆ 28 ಲಕ್ಷ ರೂ. ಸಂಪಾದನೆಯಿದೆ. ಈ ಸಂಪಾದನೆಗೆ 6.5 ಲಕ್ಷ ರೂ. ಆದಾಯ ತೆರಿಗೆ ಪಾವತಿಸಲಾಗುತ್ತಿದೆ. ದೈನಂದಿನ ಖರ್ಚಿನ ಮೇಲೆ 1.4 ಲಕ್ಷ ರೂ. ಜಿಎಸ್‌ಟಿ ಪಾವತಿಸಲಾಗುತ್ತಿದೆ.
ಕಚೇರಿ 14 ಕಿ.ಮೀ ದೂರದಲ್ಲಿದೆ. ಮನೆಯಿಂದ ಕಚೇರಿಗೆ ತೆರಳಲು 30 ನಿಮಿಷ ತೆಗೆದುಕೊಳ್ಳಬೇಕು. ಆದರೆ ವಾಸ್ತವದಲ್ಲಿ 90 ನಿಮಿಷ ಪ್ರಯಾಣಿಸಬೇಕಾಗುತ್ತದೆ. ಟ್ರಾಫಿಕ್‌ನಲ್ಲಿ ಕಳೆದುಹೋದ ಸಮಯವನ್ನು ಸೇರಿಸಿದರೆ ವರ್ಷಕ್ಕೆ ಎರಡೂವರೆ ತಿಂಗಳು ಇದರಲ್ಲೇ ಕಳೆದುಹೋಗುತ್ತಿದೆ. ಮೊದಲ ಎರಡು ತೆರಿಗೆಯಲ್ಲಿ ಉತ್ತಮ ರಸ್ತೆಗಳು, ಸುಗಮ ಪ್ರಯಾಣ, ಸ್ಮಾರ್ಟ್ ನಗರಗಳನ್ನು ನಿರ್ಮಿಸಬೇಕಿತ್ತು. ಆದರೆ ಇದು ಸಾಧ್ಯವಾಗಿಲ್ಲ.
ಈ ಹಣ ಬೇರೆ ಕಡೆ ಹೋಗುತ್ತಿದೆ. ಈ ಗುಪ್ತ ತೆರಿಗೆಯ ಬಗ್ಗೆ ಆತ್ಮಾವಲೋಕನ ಮಾಡಲು ಸಹ ಸಮಯವಿಲ್ಲ. ನೀವು ಸಹ ಈ ರೀತಿಯ ತೆರಿಗೆ ಪಾವತಿಸುತ್ತಿದ್ದೀರಾ ಪಾವತಿಸಿದ್ದರೆ ಕಮೆಂಟ್ ಮಾಡಿ ಎಂದು ಹೇಳಿದ್ದಾರೆ. ಸರ್ಕಾರ ಯಾಕೆ ಬೆಂಗಳೂರು ಒಂದೇ ಜಾಗಕ್ಕೆ ಕಂಪನಿಗಳಿಗೆ ತೆರೆಯಲು ಅವಕಾಶ ನೀಡುತ್ತಿದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನು ಮುಂದೆ ರಾಜಧಾನಿಗಳನ್ನು ಬಿಟ್ಟು ಟಯರ್-2 ನಗರಗಳಲ್ಲಿ ಹೂಡಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಬರೆದಿದ್ದಾರೆ.
ಇನ್ನು ಕೆಲವರು ಸರ್ಕಾರಗಳು ಉಚಿತ ಕೊಡುಗೆ ನೀಡುವುದನ್ನು ನಿಲ್ಲಿಸಿ ಆ ಹಣವನ್ನು ಉತ್ತಮ ರಸ್ತೆ ನಿರ್ಮಾಣಗಳಿಗೆ ಬಳಸಬೇಕು. ರಸ್ತೆಗಳು ಸರಿಇಲ್ಲದ ಕಾರಣ ವಾಹನಗಳು ದೊಡ್ಡ ದೊಡ್ಡ ಗುಂಡಿಗಳಿಗೆ ಬಿದ್ದು ಹಾಳಾಗುತ್ತಿವೆ. ಹೇಗೆ ಮಕ್ಕಳ ಶಿಕ್ಷಣಕ್ಕೆ ಎಂದು ವರ್ಷಕ್ಕೆ ಹಣವನ್ನು ಮೀಸಲಿಡಲಾಗುತ್ತದೋ ಅದೇ ರೀತಿ ಇನ್ನು ಮುಂದೆ ವಾಹನ ಮಾಲೀಕರು ವಾಹನ ರಿಪೇರಿಗೆಂದು ವರ್ಷಕ್ಕೆ ದುಡ್ಡನ್ನು ಇಡಬೇಕಾಗುತ್ತದೆ. ಟ್ರಾಫಿಕ್ ಜಾಮ್‌ನಿಂದ ಉಂಟಾಗುವ ಹೊಗೆಯಿಂದ ಉಸಿರಾಟದ ಸಮಸ್ಯೆ ಸಹ ಬರುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.