ನಮ್ಮ ಮೆಟ್ರೋ ನಗರದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಬಹುನಿರೀಕ್ಷಿತ ನೀಲಿ ಮಾರ್ಗವು ಅಂತಿಮ ಹಂತದಲ್ಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಗರದ ಪ್ರಮುಖ ಐಟಿ ಹಬ್ ಆಗಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ಸಂಪರ್ಕಿಸುವ ಈ 58 ಕಿಲೋಮೀಟರ್ ಉದ್ದದ ಮಾರ್ಗವು, 2027ರ ಡಿಸೆಂಬರ್ ವೇಳೆಗೆ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.
ಈ ಮಹತ್ವದ ಯೋಜನೆಯನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಮೂರು ಹಂತಗಳಲ್ಲಿ ಪೂರ್ಣಗೊಳಿಸಲು ಸಿದ್ಧತೆ ನಡೆಸಿದೆ.
ಈ ಮಾರ್ಗವು ಹೊರ ವರ್ತುಲ ರಸ್ತೆಯ ಉದ್ದಕ್ಕೂ ಹಾದುಹೋಗಲಿದ್ದು, ಸಿಲಿಕಾನ್ ವ್ಯಾಲಿಯ ಟೆಕ್ಕಿಗಳಿಗೆ ಮತ್ತು ವಿಮಾನ ಪ್ರಯಾಣಿಕರಿಗೆ ಅಪಾರ ಪ್ರಯೋಜನಗಳನ್ನು ನೀಡಲಿದೆ. ಸುಮಾರು 9.5 ಲಕ್ಷ ಜನರು ಕೆಲಸ ಮಾಡುವ ಕೆ.ಆರ್. ಪುರದಿಂದ ಸಿಲ್ಕ್ ಬೋರ್ಡ್‌ವರೆಗಿನ ಟೆಕ್ ಕಾರಿಡಾರ್‌ಗೆ ಇದು ನೇರ ಸಂಪರ್ಕ ಕಲ್ಪಿಸುತ್ತದೆ.
ಇದು ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಿ, ಪ್ರಯಾಣದ ಸಮಯವನ್ನು ಗಣನೀಯವಾಗಿ ತಗ್ಗಿಸಲಿದೆ. ಇದರಿಂದ ನಗರದ ಐಟಿ ಉದ್ಯಮದಲ್ಲಿ ಉತ್ಪಾದಕತೆ ಹೆಚ್ಚುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಮೂರು ಹಂತಗಳಲ್ಲಿ ನೀಲಿ ಮಾರ್ಗ ಆರಂಭ:
ಹಂತ 1 (ಸೆಪ್ಟೆಂಬರ್ 2026): ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರ.
ಹಂತ 2 (ಜೂನ್ 2027): ಹೆಬ್ಬಾಳದಿಂದ ವಿಮಾನ ನಿಲ್ದಾಣ.
ಹಂತ 3 (ಡಿಸೆಂಬರ್ 2027): ಕೆ.ಆರ್. ಪುರದಿಂದ ಹೆಬ್ಬಾಳ.
₹15,131 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಗೆ ಹಲವು ಅಡೆತಡೆಗಳು ಎದುರಾಗಿದ್ದವು. ರಸ್ತೆಯಲ್ಲಿನ ಮರಗಳನ್ನು ಕಡಿಯಲು ಮತ್ತು ಸ್ಥಳಾಂತರಿಸಲು ನ್ಯಾಯಾಲಯದ ಅನುಮತಿ ವಿಳಂಬ, GAIL ಗ್ಯಾಸ್ ಪೈಪ್‌ಲೈನ್ ಸ್ಥಳಾಂತರ, ಹಾಗೂ ಹೆಬ್ಬಾಳದಲ್ಲಿ ರಸ್ತೆ ಸುರಂಗ ಯೋಜನೆಗಾಗಿ ಮರು ವಿನ್ಯಾಸದಂತಹ ಸವಾಲುಗಳು ಕಾಮಗಾರಿಯನ್ನು ತಡಗೊಳಿಸಿದವು.
ಈ ಮಾರ್ಗದಲ್ಲಿ ಒಟ್ಟು 30 ಮೆಟ್ರೋ ನಿಲ್ದಾಣಗಳಿವೆ.
- ಸಿಲ್ಕ್ ಬೋರ್ಡ್
 - ಎಚ್‌ಎಸ್‌ಆರ್ ಲೇಔಟ್
 - ಅಗರ
 - ಇಬ್ಬಲೂರು
 - ಬೆಳ್ಳಂದೂರು
 - ಕಾಡುಬೀಸನಹಳ್ಳಿ
 - ಕೋಡಿಬಿಸನಹಳ್ಳಿ
 - ಮಾರತಹಳ್ಳಿ
 - ಇಸ್ರೋ
 - ದೊಡ್ಡನೆಕುಂದಿ
 - ಡಿಆರ್‌ಡಿಒ ಕ್ರೀಡಾ ಸಂಕೀರ್ಣ
 - ಸರಸ್ವತಿ ನಗರ
 - ಕೆಆರ್ ಪುರಂ
 - ಕಸ್ತೂರಿ ನಗರ
 - ಹೊರಮಾವು
 - ಎಚ್.ಆರ್.ಬಿ ಆರ್ ಲೇಔಟ್
 - ಕಲ್ಯಾಣ್ ನಗರ
 - ಎಚ್.ಬಿ.ಆರ್ ಲೇಔಟ್
 - ನಾಗವಾರ
 - ವೀರಣ್ಣ ಪಾಳ್ಯ
 - ಕೆಂಪಾಪುರ
 - ಹೆಬ್ಬಾಳ
 - ಕೊಡಿಗೇಹಳ್ಳಿ
 - ಜಕ್ಕೂರು ಕ್ರಾಸ್
 - ಯಲಹಂಕ
 - ಬಾಗಲೂರು ಕ್ರಾಸ್
 - ಬೆಟ್ಟಹಲಸೂರು
 - ದೊಡ್ಡಜಾಲ
 - ವಿಮಾನ ನಿಲ್ದಾಣ ನಗರ
 - ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್
 
                
























