ಬಳ್ಳಾರಿಗೆ ತಪ್ಪಿದ 60,000 ಕೋಟಿ ರೂ. ಬಂಡವಾಳ: ಆರ್ಸೆಲರ್ ಮಿತ್ತಲ್ ಆಂಧ್ರಕ್ಕೆ ಶಿಫ್ಟ್!

0
28

ಬಳ್ಳಾರಿ: ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಆಶಾಕಿರಣವಾಗಿದ್ದ ಆರ್ಸೆಲರ್ ಮಿತ್ತಲ್ ಕಂಪನಿಯ 60,000 ಕೋಟಿ ರೂ. ಬಂಡವಾಳ ಹೂಡಿಕೆ ಯೋಜನೆ ಈಗ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಪಾಲಾಗಿದೆ. 2010ರಲ್ಲಿ ಬಳ್ಳಾರಿಯ ಕುಡತಿನಿ ಬಳಿ ಕೈಗಾರಿಕೆ ಸ್ಥಾಪನೆಗಾಗಿ 2643 ಎಕರೆ ಜಮೀನು ಪಡೆದಿದ್ದ ಕಂಪನಿ, 15 ವರ್ಷಗಳ ಬಳಿಕವೂ ಯಾವುದೇ ಕೆಲಸ ಆರಂಭಿಸದೆ ಈಗ ಯೋಜನೆಯಿಂದ ಸಂಪೂರ್ಣವಾಗಿ ಹಿಂದೆ ಸರಿದಿರುವುದಾಗಿ ಘೋಷಿಸಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ತೋರಣಗಲ್‌ನ ಜಿಂದಾಲ್ ಕಂಪನಿ ಸಮೀಪ ಕಬ್ಬಿಣ, ಉಕ್ಕು ಹಾಗೂ ಇತರೆ ಕೈಗಾರಿಕೆಗಳ ವಿಸ್ತರಣೆಗಾಗಿ ಕೆಐಎಡಿಬಿ ಮೂಲಕ ಸುಮಾರು 12,500 ಎಕರೆಗೂ ಹೆಚ್ಚು ಜಮೀನನ್ನು ಅತ್ಯಂತ ಕಡಿಮೆ ದರದಲ್ಲಿ ಭೂಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಆರ್ಸೆಲರ್ ಮಿತ್ತಲ್ ಪಾಲಿಗೆ ಬಂದ ಜಮೀನಿನಲ್ಲಿ ಯಾವುದೇ ಕೈಗಾರಿಕೆ ಸ್ಥಾಪನೆಯಾಗದೆ, ಇದೀಗ ಆ ಬೃಹತ್ ಹೂಡಿಕೆ ಆಂಧ್ರ ಪ್ರದೇಶಕ್ಕೆ ಸ್ಥಳಾಂತರಗೊಂಡಿರುವುದು ಬಳ್ಳಾರಿ ಜನರಲ್ಲಿ ನಿರಾಸೆ ಮೂಡಿಸಿದೆ.

ಆರ್ಸೆಲರ್ ಮಿತ್ತಲ್ ಕಂಪನಿ ಕೈ ಎತ್ತಿದ ಕಾರಣ, ಈಗ ಉಳಿದಿರುವ ಜಮೀನನ್ನು ಬೇರೆ ಕಂಪನಿಗಳಿಗೆ ಅಥವಾ ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಎಂಡಿಸಿಗೆ ಹಂಚಿಕೆ ಮಾಡಿ ಕೈಗಾರಿಕೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಸರ್ಕಸ್ ನಡೆಸುತ್ತಿದೆ ಎನ್ನಲಾಗಿದೆ. ಈಗಾಗಲೇ 2850 ಎಕರೆ ಜಮೀನು ಹೊಂದಿರುವ ಎನ್‌ಎಂಡಿಸಿ, ಮಿತ್ತಲ್ ಕೈಬಿಟ್ಟ 2643 ಎಕರೆ ಜಮೀನಿನಲ್ಲೂ ಕೈಗಾರಿಕೆ ಆರಂಭಿಸುವ ಸವಾಲಿಗೆ ಮುಂದಾಗಿದೆ.

ರಾಜ್ಯದವರೇ ಆದ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಮೇಲೆ ಈಗ ನಿರೀಕ್ಷೆಗಳು ಹೆಚ್ಚಾಗಿವೆ. ಎನ್‌ಎಂಡಿಸಿ ಮೂಲಕವಾದರೂ ಈ ಬೃಹತ್ ಜಮೀನನ್ನು ಸದುಪಯೋಗಪಡಿಸಿಕೊಂಡು ಬಳ್ಳಾರಿಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಚಾಲನೆ ನೀಡಬೇಕು ಎಂಬುದು ಜಿಲ್ಲೆಯ ಜನರ ಪ್ರಮುಖ ಆಶಯವಾಗಿದೆ.

ಈ ಘಟನೆಯು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕೈಗಾರಿಕಾ ಸ್ನೇಹಿ ನೀತಿಗಳನ್ನು ರೂಪಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.

ರೆಡ್ಡಿ ಕಳವಳ, ಎನ್‌ಎಂಡಿಸಿ ಮೇಲೆ ಭರವಸೆ: ಈ ಕುರಿತು ಇಂದಿನ (ಗುರುವಾರ) ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಆರ್ಸೆಲರ್ ಕಂಪನಿಯು ಕುಡತಿನಿ ಬಳಿ 5000 ಎಕರೆ ಜಮೀನಿನಲ್ಲಿ ಕಾರ್ಖಾನೆ ಸ್ಥಾಪಿಸಲು ಆಸಕ್ತಿ ತೋರಿತ್ತು. ಆದರೆ, ನಂತರ ಬಂದ ಕಾಂಗ್ರೆಸ್ ಸರ್ಕಾರದ ಕೈಗಾರಿಕಾ ವಿರೋಧಿ ನೀತಿಗಳಿಂದಾಗಿ ಕಂಪನಿಯು ತನ್ನ ಕಾರ್ಖಾನೆಯನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಿತು. ಇದರಿಂದ ರೈತರು ತಮ್ಮ ಜಮೀನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೆಡ್ಡಿ ಹೇಳಿದ್ದಾರೆ. ಇದು ರಾಜ್ಯದ ಆರ್ಥಿಕತೆಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಎನ್‌ಎಂಡಿಸಿ ವಾರ್ಷಿಕವಾಗಿ 14 ಮಿಲಿಯನ್ ಟನ್ ಕಬ್ಬಿಣದ ಅದಿರು ತೆಗೆಯುತ್ತಿರುವುದರಿಂದ, ಈ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಂಡು, ಕುಡತಿನಿ ಬಳಿಯ ಜಾಗದಲ್ಲಿ 7 ಮಿಲಿಯನ್ ಟನ್ ಸಾಮರ್ಥ್ಯದ ಉಕ್ಕಿನ ಕಾರ್ಖಾನೆ ಸ್ಥಾಪಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ರೆಡ್ಡಿ ಸಲಹೆ ನೀಡಿದ್ದಾರೆ.

ಈ ಕುರಿತು ರಾಜ್ಯ ಸರ್ಕಾರವು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿ, ಎನ್‌ಎಂಡಿಸಿ ಮೂಲಕ ತಕ್ಷಣ ಉಕ್ಕಿನ ಕಾರ್ಖಾನೆ ತೆರೆಯಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಕುಮಾರಸ್ವಾಮಿ ಈ ವಿಷಯದಲ್ಲಿ ಮುತುವರ್ಜಿ ವಹಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಕ್ಷಣ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೆಡ್ಡಿ ಒತ್ತಾಯಿಸಿದ್ದಾರೆ.

Previous articleಕರ್ನಾಟಕದಲ್ಲಿ ಒಟ್ಟು 21, 794 ರೌಡಿಶೀಟರ್‌ಗಳು!
Next articleಸಂಪಾದಕೀಯ: ಯುಕೆಪಿ ರೈತರಿಗೆ ಪರಿಹಾರ ತ್ವರಿತಗತಿಯ ವಿತರಣೆ ಅಗತ್ಯ

LEAVE A REPLY

Please enter your comment!
Please enter your name here