ಗ್ರೇಟರ್ ಬೆಂಗಳೂರು: ರಸ್ತೆ ಗುಂಡಿ ಗಂಡಾಂತರ

0
57

ಗ್ರೇಟರ್ ಬೆಂಗಳೂರು ಈಗ ರಸ್ತೆ ಗುಂಡಿಯ ಕಾರಣಕ್ಕೆ ಸುದ್ದಿ ಮಾಡುತ್ತಿದೆ. ಗುಂಡಿಯಲ್ಲಿ ರಸ್ತೆ ಹುಡುಕುವ ಪರಿಸ್ಥಿತಿ ಬಂದಿದ್ದು, ಅಪಘಾತಗಳು ಸಂಭವಿಸಿದ್ರೂ ಕ್ಯಾರೆ ಎನ್ನದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ.

ಐಟಿ-ಬಿಟಿ ಕ್ಷೇತ್ರದಲ್ಲಿ ಜಾಗತಿಕ ಭೂಪಟದಲ್ಲಿ ತನ್ನದೇ ಆದ ಹೆಸರನ್ನು ಪಡೆದಿರುವ ಬೆಂಗಳೂರಿಗೆ ರಸ್ತೆ ಗುಂಡಿಗಳೇ ಶಾಪವಾಗಿ ಪರಿಣಮಿಸುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ರಸ್ತೆಗುಂಡಿಗಳಿಂದ ಬೇಸತ್ತ ನಗರದಲ್ಲಿನ ಉದ್ಯಮಗಳ ಮಾಲೀಕರು ಊರು ಬಿಟ್ಟು ಹೋಗುತ್ತೇವೆ ಎಂದು ಹೇಳುತ್ತಿದ್ದಾರೆ. ಇದರ ಲಾಭ ಪಡೆಯಲು ನೆರೆಯ ರಾಜ್ಯಗಳು ಕಾಯುತ್ತಿವೆ. ನಮ್ಮ ಕಡೆ ಬನ್ನಿ ಎಂದು ಮುಕ್ತ ಆಹ್ವಾನ ನೀಡುತ್ತಿವೆ. ಇದರಿಂದ ಬೆಂಗಳೂರಿನ ಬೆಳವಣಿಗೆ ಹೇಗೆ ಸಾಧ್ಯ? ಎಂಬ ಪ್ರಶ್ನೆ ಸಾರ್ವಜನಿಕರದ್ದು.

ಹೆಜ್ಜೆಹೆಜ್ಜೆಗೂ ಗುಂಡಿಗಳು: ಬೆಂಗಳೂರಿನಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳು ಕಣ್ಣಿಗೆ ರಾಚುತ್ತಿವೆ. ವಾಹನ ಸವಾರರು ರಸ್ತೆಯಲ್ಲಿ ಸರ್ಕಸ್ ರೀತಿ ಸಂಚರಿಸುವಂತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನವನ್ನು ಗುಂಡಿಗಳು ಹರಾಜು ಹಾಕುತ್ತಿವೆ.

ಬಿಬಿಎಂಪಿಯಿಂದ ಗ್ರೇಟರ್ ಬೆಂಗಳೂರು ಆಗಿ ಬದಲಾದ್ರೂ ರಸ್ತೆ ಗುಂಡಿಗಳ ಹಾವಳಿ ತಪ್ಪುತ್ತಿಲ್ಲ. ಗ್ರೇಟರ್ ಬೆಂಗಳೂರು ರಸ್ತೆಗುಂಡಿಗಳಲ್ಲೂ ಗ್ರೇಟಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆಮಧ್ಯದ ಗುಂಡಿಯಿಂದಾಗಿ ಅನೇಕ ಸಾವುನೋವುಗಳು ಸಂಭವಿಸಿವೆ. ಆದರೂ ಇನ್ನೂ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸ.

ಉದ್ಯಮಿಗಳ ಆಕ್ರೋಶ: ಬೆಂಗಳೂರು ನಗರದ ರಸ್ತೆ ಗುಂಡಿಗಳ ಬಗ್ಗೆ ಸಣ್ಣ ಮಕ್ಕಳೂ ಸಹ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆ ಮಟ್ಟಿಗೆ ನರಕಯಾತನೆ ಬೆಂಗಳೂರಿನ ಜನ ಅನುಭವಿಸುತ್ತಿದ್ದಾರೆ. ಈಗ ರಸ್ತೆ ಗುಂಡಿಗಳಿಂದಾಗಿ ಎಂಎನ್‌ಸಿ ಕಂಪನಿಗಳು ಬೆಂಗಳೂರಿನಿಂದ ದೂರ ದೂರ ಆಗುವ ಆತಂಕ ಮೂಡಿದೆ. ಇದಕ್ಕೆ ಕಾರಣವಾಗಿದ್ದು ಬ್ಲಾಕ್ ಬಕ್ ಕಂಪನಿ ಸಿಇಒ ರಾಜೇಶ್ ಯಬಜಿ ಎಕ್ಸ್ ಖಾತೆಯಲ್ಲಿ ಮಾಡಿದ ಒಂದು ಟ್ವಿಟ್.

ದಿನದ ಅರ್ಧ ದಿನ ನಮ್ಮ ಕಂಪನಿ ಸಿಬ್ಬಂದಿ ಔಟರ್ ರಿಂಗ್ ರಸ್ತೆಗಳಲ್ಲಿ ರಸ್ತೆಯಲ್ಲೇ ಕಳೆಯುವಂತಾಗಿದೆ. ಈಗ ರಸ್ತೆಗುಂಡಿ, ಧೂಳು, ಟ್ರಾಫಿಕ್ ಜಾಮ್ ಇವೆಲ್ಲದರಿಂದ ಶಿಫ್ಟ್ ಆಗುವಂತಾಗಿದೆ. ಕಳೆದ 5 ವರ್ಷದಿಂದ ಯಾವುದೇ ಬದಲಾವಣೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಉದ್ಯಮಿ ಕಿರಣ್ ಮಜುಂದಾರ್ ಶಾ, ಉದ್ಯಮಿ ಮೋಹನ್‌ದಾಸ್ ಪೈ ಸಹ ಟ್ವಿಟ್ ಮಾಡಿ ರಸ್ತೆ ಗುಂಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

“ನಮಗೆ ಯಾರಿಗೂ ತೊಂದರೆ ಕೊಡುವ ಉದ್ದೇಶವಿಲ್ಲ. ನವೆಂಬರ್ ಒಳಗಾಗಿ ರಸ್ತೆಯ ಗುಂಡಿಗಳನ್ನು ಮುಚ್ಚುವಂತೆ ಅಂತಿಮ ಗಡುವು ನೀಡಲಾಗಿದೆ. ಸ್ವಚ್ಛ ಬೆಂಗಳೂರು, ಸುಗಮ ಸಂಚಾರವೇ ನಮ್ಮ ಸರ್ಕಾರದ ಗುರಿಯಾಗಿದೆ. ಯಾರೂ ಚಿಂತಿಸುವ ಅಗತ್ಯವಿಲ್ಲ. ಆದಷ್ಟು ಬೇಗನೇ ನಗರದ ರಸ್ತೆಗಳು ಸರಿಯಾಗಲಿವೆ” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇದು ಗಂಭೀರ ಸಮಸ್ಯೆ ಈ ಸಮಸ್ಯೆಯನ್ನು ಬಗೆಹರಿಸಲು ತುರ್ತು ಕ್ರಮಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳಿಗೂ ಟ್ಯಾಗ್ ಮಾಡಿದ್ದಾರೆ ಉದ್ಯಮಿ ಕಿರಣ್ ಮುಜುಂದರ್ ಷಾ.

“ಇದು ಬೆಂಗಳೂರಿನಲ್ಲಿ ಭಾರಿ ಆಡಳಿತ ವೈಫಲ್ಯದ ಪ್ರತೀಕ. ಈ ಕೂಡಲೇ ರಾಜ್ಯ ಸರ್ಕಾರ ತ್ವರಿತವಾಗಿ ಮಧ್ಯಪ್ರವೇಶ ಮಾಡಬೇಕು. ಹದಗೆಟ್ಟೆಇರುವ ರಸ್ತೆ ಗುಂಡಿಗಳನ್ನು ಆದಷ್ಟು ಬೇಗ ಸರಿಪಡಿಸಬೇಕು, ಅಪಘಾತಗಳನ್ನು ತಪ್ಪಿಸಬೇಕು” ಎಂದು ಉದ್ಯಮಿ ಮೋಹನ್‌ದಾಸ್ ಪೈ ಹೇಳಿದ್ದಾರೆ.

“ಔಟರ್ ರಿಂಗ್ ರಸ್ತೆಯಲ್ಲಿ ಸಮಸ್ಯೆಗಳಿವೆ. ಮೆಟ್ರೋ ಕಾಮಗಾರಿಯಿಂದ ಗುಂಡಿ ಮುಚ್ಚಲು ಸಮಸ್ಯೆ ಆಗುತ್ತಿದೆ. ಮಳೆ ಬಂದಾಗ ಪ್ರತಿ ಬಾರಿ ಸಮಸ್ಯೆ ಆಗಿಯೇ ಆಗುತ್ತೆ. ಎಲ್ಲೆಲ್ಲಿ ಸಮಸ್ಯೆ ಇದೆ ಚರ್ಚಿಸಿ ಗುಂಡಿ ಮುಚ್ಚುವ ಕೆಲಸ ಆಗುತ್ತಿದೆ. ಮೆಟ್ರೋ ಕಾಮಗಾರಿ ಮುಗಿಯುವ ತನಕ ತೊಂದರೆಯಾಗುತ್ತೆ. ನಂತರ ತಕ್ಷಣ ರಸ್ತೆಗಳು ಸರಿಯಾಗುತ್ತದೆ” ಎಂದು ಜಿಬಿಎ ಆಯುಕ್ತ ಮಹೇಶ್ವರರಾವ್ ತಿಳಿಸಿದ್ದಾರೆ.

ರಸ್ತೆಗುಂಡಿಯಲ್ಲಿ ನಿಂತು ಪ್ರತಿಭಟನೆ: ಈ ರಸ್ತೆಗುಂಡಿಯಿಂದಾಗಿ ನಮಗೆ ಸಾಕು ಸಾಕಾಗಿ ಹೋಗಿದೆ ಎಂದು ವೃದ್ಧರೊಬ್ಬರು ಗುಂಡಿಯಲ್ಲಿಯೇ ನಿಂತು ಪ್ರತಿಭಟನೆ ನಡೆಸಿದರು. ಎರಡು ದಿನಗಳ ಹಿಂದಷ್ಟೇ ರಸ್ತೆಗುಂಡಿಯಿಂದಾಗಿ ಶಾಲಾಬಸ್ಸಿನ ಟಯರ್ ಗುಂಡಿಯಲ್ಲಿ ಸಿಲುಕಿ ಹಾಕಿಕೊಂಡಿತ್ತು. ಹರಸಹಾಸದಿಂದ ಮಕ್ಕಳನ್ನು ಬಸ್ಸಿನಿಂದ ಇಳಿಸಲಾಯಿತು. ಸ್ವಲ್ಪ ವ್ಯತ್ಯಾಸವಾಗಿದ್ದರೂ ಮಕ್ಕಳ ಗತಿಯೇನು? ಎಂದು ಸಾರ್ವಜನಿಕರು ಹಿಡಿಶಾಪ ಹಾಕಿದರು. ಆದಾಗ್ಯೂ ಸಹ ಯಾರೂ ಎಚ್ಚೆತ್ತುಕೊಳ್ಳಲಿಲ್ಲ.

Previous articleGovernment Employee: ಪಿಂಚಣಿ ಪಡೆಯುವವರಿಗೆ ಬ್ಯಾಂಕ್ ಅಪ್‌ಡೇಟ್
Next articleಕೋರ್ಟ್‌ ಕೊಟ್ಟರೂ ಜೈಲು ಕೊಡಲಿಲ್ಲ: ಹಾಸಿಗೆ, ದಿಂಬಿಗಾಗಿ ದರ್ಶನ್‌ ಮತ್ತೆ ಕೋರ್ಟ್‌ಗೆ

LEAVE A REPLY

Please enter your comment!
Please enter your name here