ಧರ್ಮಸ್ಥಳ: ಬಂಗ್ಲೆಗುಡ್ಡೆಯಲ್ಲಿ ಆರಂಭವಾಗದ ಅವಶೇಷ ಹುಡುಕುವ ಕಾರ್ಯ

0
17

ಮಂಗಳೂರು: ಧರ್ಮಸ್ಥಳ ಅಸಹಜ ಸಾವುಗಳ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ, ಬಂಗ್ಲೆಗುಡ್ಡ ಪ್ರದೇಶದಲ್ಲಿ ಶೋಧ ನಡೆಸಲು ಮುಂದಾಗಿತ್ತಾದರೂ ಈ ಕುರಿತು ಇನ್ನೂ ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.

ಸದ್ಯ ಪ್ರಕರಣ ಕುರಿತು ಹೈಕೋರ್ಟ್‌ನಲ್ಲಿ ರಿಟ್ ದಾಖಲಾಗಿದೆ. ಜೊತೆಗೆ ಬಂಗ್ಲೆಗುಡ್ಡ ಅರಣ್ಯದಲ್ಲಿ ಅಗೆತ ಕಾವ್ಯಕ್ಕೆ ಅರಣ್ಯ ಇಲಾಖೆಯ ಅನುಮತಿ ಇನ್ನೂ ದೊರೆಯಬೇಕಿದೆ. ಈ ಕಾರಣಗಳಿಂದಾಗಿ ತನಿಖಾ ತಂಡ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ.

ಚಿನ್ನಯ್ಯ ಎಸ್‌ಐಟಿಗೆ ನೀಡಿದ್ದ ಬುರುಡೆಯನ್ನು ಬಂಗ್ಲೆಗುಡ್ಡ ಪ್ರದೇಶದಿಂದ ತರಲಾಗಿತ್ತೆಂದು ಸೌಜನ್ಯ ಮಾವ ವಿಠಲ ಗೌಡ ಹೇಳಿದ್ದರು.ಹೀಗಾಗಿ ಹೆಚ್ಚುವರಿ ಅವಶೇಷಗಳನ್ನು ವಶಕ್ಕೆ ಪಡೆಯಲು ಇಲ್ಲಿ ಅಗೆತಕ್ಕೆ ಎಸ್‌ಐಟಿ ಮುಂದಾಗಿತ್ತು. ಅಲ್ಲದೇ ಸ್ಥಳ ಮಹಜರು ಸಂದರ್ಭ ಹಲವಾರು ಅಸ್ಥಿಪಂಜರಗಳಿದ್ದನ್ನು ಗಮನಿಸಿರುವುದಾಗಿಯೂ ಗೌಡ ನೀಡಿದ್ದ ಹೇಳಿಕೆ ಒತ್ತಡ ಸೃಷ್ಟಿಸಿತ್ತು. ಈ ಕಾರಣದಿಂದಾಗಿ ಅಗೆತಕ್ಕೆ ಮುಂದಾಗುವ ಅನಿವಾರತೆಗೆ ಎಸ್‌ಐಟಿ ಸಿಲುಕಿದೆ ಎನ್ನಲಾಗುತ್ತಿದೆ.

ದೊರೆಯದ ಅನುಮತಿ: ಬಂಗ್ಲೆಗುಡ್ಡ ಅರಣ್ಯದಲ್ಲಿ ಮಹಜರು ಹಾಗೂ ಅಗೆತ ಕಾರ್ಯಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ. ಸದ್ಯ ಸರ್ವೇ ವರದಿ ಕೇಳಲಾಗಿದ್ದು ಅನುಮತಿ ಸಿಕ್ಕಿದ ಬಳಿಕವಷ್ಟೇ ಮುಂದಿನ ಬೆಳವಣಿಗೆಗಳು ನಡೆಯಲಿವೆ ಎಂದು ಬಿಂಬಿಸಲಾಗುತ್ತಿದೆ.

ಹೈಕೋರ್ಟ್ ರಿಟ್: ಪ್ರಕರಣಕ್ಕೆ ಸಂಬಂಧಿಸಿ ಪುರಂದರಗೌಡ ಮತ್ತು ತುಕಾರಾಂಗೌಡ ಅವರು ಸಲ್ಲಿಸಿರುವ ರಿಟ್ ಚರ್ಚೆಗೆ ಕಾರಣವಾಗಿದೆ. ಆಸಹಜ ಸಾವಿನ ಹೆಸರಿನಲ್ಲಿ ಶವಗಳನ್ನು ಹೂಳಿರುವ ಕಡೆ ಎಸ್‌ಐಟಿ ಅಗೆತ ನಡೆಸಿ ಅವಶೇಷಗಳನ್ನು ಹೊರತೆಗೆಯಬೇಕೆಂಬ ಬೇಡಿಕೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ತಳೆಯುವ ನಿಲುವು ಕುತೂಹಲ ಮೂಡಿಸಿದೆ. ಸದ್ಯ ಹೈಕೋರ್ಟ್ ಸಹ ಪ್ರಕರಣದತ್ತ ಗಮನ ಹರಿಸಿರುವುದರಿಂದ ಅರ್ಜಿದಾರರು ಹೇಳಿದ ಕಡೆ ಆಗೆತ ನಡೆಸುವುದು ಎಸ್‌ಐಟಿಗೆ ಅನಿವಾರ್ಯವಾಗಬಹುದು.

ಚಿನ್ನಯ್ಯ ಜಾಮೀನು ಅರ್ಜಿ ವಜಾ: ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಸಾಕ್ಷಿದಾರ ಹಾಗೂ ಆರೋಪಿ ಚಿನ್ನಯ್ಯನ ಜಾಮೀನು ಅರ್ಜಿಯನ್ನು ಮಂಗಳವಾರ ಬೆಳ್ತಂಗಡಿ ನ್ಯಾಯಾಲಯ ವಜಾಗೊಳಿಸಿದೆ. ಚಿನ್ನಯ್ಯ ಕುರಿತಾದ ಪ್ರಕರಣ ಗಂಭೀರವಾದುದು. ಪ್ರಕರಣದ ತನಿಖೆ ಪೂರ್ಣಗೊಂಡಿಲ್ಲ, ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಎಸ್‌ಐಟಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಧೀಶರಾದ ವಿ ಜಯೇಂದ್ರ ಜಾಮೀನು ಅರ್ಜಿ ವಜಾಗೊಳಿಸಿದರು.

Previous articleಬಿಡದಿ ಟೌನ್ ಶಿಪ್ ಯೋಜನೆ ರದ್ದು, ಬಿಜೆಪಿ ಭರವಸೆ
Next articleಸಂಪಾದಕೀಯ: ಮತ್ತೆ ಮುನ್ನೆಲೆಗೆ ಜಾತಿ ಸಮೀಕ್ಷೆ, ಜೇನುಗೂಡಿಗೆ ಮತ್ತೊಂದು ಕಲ್ಲು

LEAVE A REPLY

Please enter your comment!
Please enter your name here