ಕೊಪ್ಪಳ: ಎಂಬಿಬಿಎಸ್ ಸೀಟಿಗೆ ನಕಲಿ ಅಂಗವಿಕಲ ಪ್ರಮಾಣ ಪತ್ರ!

0
12

ಅನಿಲ ಬಾಚನಹಳ್ಳಿ

ಎಂಬಿಬಿಎಸ್ ಸೀಟಿಗಾಗಿ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದವರಿಗೂ ಅಂಗವಿಕಲ ಪ್ರಮಾಣಪತ್ರ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೊಪ್ಪಳ, ಹೊಸಪೇಟೆ, ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಕಲಿ ಯುಡಿಐಡಿ ಕಾರ್ಡ್ ನೀಡುವ ಜಾಲ ಸಕ್ರಿಯವಾಗಿರುವುದು ಪತ್ತೆಯಾಗಿದೆ.

ರಾಜ್ಯದಲ್ಲಿ ಎಂಬಿಬಿಎಸ್ ಸೀಟುಗಳಿಗೆ ಬಹಳಷ್ಟು ಬೇಡಿಕೆ ಇದ್ದು, ಕೋಟ್ಯಾನುಗಟ್ಟಲೆ ಹಣ ನೀಡಿದರೂ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳು ದೊರೆಯುತ್ತಿಲ್ಲ. ಸರ್ಕಾರ ಅಂಗವಿಕಲರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಉದ್ಯೋಗ ಹಾಗೂ ಶೈಕ್ಷಣಿಕ ಮೀಸಲಾತಿ ನೀಡಿದೆ. ಅದನ್ನೇ ಬಂಡವಾಳ ಮಾಡಿಕೊಂಡ ವಿದ್ಯಾರ್ಥಿಗಳ ಪಾಲಕರು ನಕಲಿ ಅಂಗವಿಕಲ ಪ್ರಮಾಣಪತ್ರ ಮತ್ತು ಯುಡಿಐಡಿ ಕಾರ್ಡ್ ಗಿಟ್ಟಿಸಿಕೊಂಡಿರುವುದು ಬಯಲಾಗಿದೆ. ಇದರಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಸುಧಾಕ‌ರ್ ಹೆಸರು ಕೇಳಿಬಂದಿದೆ.

ಜಿಲ್ಲೆಯ ನೇತ್ರಾಧಿಕಾರಿ ಸುಧಾಕರ್ ಎನ್ನುವವರು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಅಂಗವಿಕಲ ಪ್ರಮಾಣಪತ್ರ ಮಾಡಿಕೊಟ್ಟಿರುವ ಆರೋಪವಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆ ಪೊಲೀಸರು ಕಳೆದವಾರ ಕೊಪ್ಪಳ ಜಿಲ್ಲೆಗೆ ಬಂದು ಸುಧಾಕರನನ್ನು ವಶಕ್ಕೆ ಪಡೆದಿದ್ದರು. ಈಗಾಗಲೇ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಅಲ್ಲದೇ ಸುಧಾಕರನನ್ನು ಕರೆದುಕೊಂಡು ಬಂದು ಹೊಸಪೇಟೆ ಸೇರಿದಂತೆ ವಿವಿಧ ಕಡೆ ಸ್ಥಳ ಮಹಜರು, ಪಂಚನಾಮೆ ಪ್ರಕ್ರಿಯೆ ಮಾಡಿದ್ದಾರೆ.

ಪೊಲೀಸರು ಜಾಲದಲ್ಲಿ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ. ಉದ್ಯೋಗಕ್ಕೂ ನಕಲಿ ಯುಡಿಐಡಿ ಕಾರ್ಡ್ ನೀಡಲಾಗಿದೆಯೇ ಎಂಬುದು ಪೊಲೀಸ್ ಕಾರ್ಯಾಚರಣೆಯಿಂದ ಬಹಿರಂಗವಾಗಬೇಕಿದೆ.

ಬಯಲಿಗೆ ಬಂದಿದ್ದು ಹೇಗೆ?: ಎಂಬಿಬಿಎಸ್ ಸೀಟುಗಳಿಗೆ ಅರ್ಜಿ ಕರೆದಿದ್ದು, ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಸಮಾಲೋಚನೆಗೆ ಹೋಗಿದ್ದಾರೆ. ಕೆಲವು ವಿದ್ಯಾರ್ಥಿಗಳು ಅಂಗವಿಕಲ ಕೋಟಾ ಆಡಿ ಅರ್ಜಿ ಸಲ್ಲಿಸಿದ್ದಾರೆ. ಆಯ್ಕೆ ಪಟ್ಟಿಯಲ್ಲಿ ಹೆಸರು ಬಂದಿದೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ದಾಖಲಾತಿ ಪರಿಶೀಲನೆಗೆ ಆಹ್ವಾನಿಸಿದ್ದಾರೆ.

ಅಂಗವಿಕಲ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ಮತ್ತು ಸಮಾಲೋಚನೆ(ಕೌನ್ಸೆಲಿಂಗ್) ಪ್ರಕ್ರಿಯೆ ವೇಳೆ ಅಂಗವಿಕಲ ಪ್ರಮಾಣಪತ್ರ ಮತ್ತು ಯುಡಿಐಡಿ ಕಾರ್ಡ್ಗಳಲ್ಲಿ ಒಂದೇ ರೀತಿ ಸಹಿಗಳಿರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ. ಇದರಿಂದ ಅನುಮಾನ ಬಂದಿದ್ದು, ಇದೇ ರೀತಿಯಾಗಿ ಎಷ್ಟು ಜನರ ಸಹಿಗಳಿವೆ ಎಂಬುದನ್ನು ಪರಿಶೀಲಿಸಿದಾಗ 21 ವಿದ್ಯಾರ್ಥಿಗಳಿರುವುದು ಪತ್ತೆಯಾಗಿದೆ. ನಂತರ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಿದಾಗ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಸುಧಾಕರ್ ಕೊಡಿಸಿರುವ ಆರೋಪ ಕೇಳಿಬಂದಿದೆ.

ಧಿಕಾರಿ ರಿಯಾಕ್ಷನ್‌: ಕುಕನೂರು ತಾಲೂಕಿನ ಮಂಗಳೂರುಪ್ರಾಥಮಿಕ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಸುಧಾಕರ್ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಅಂಗವಿಕಲರ ಪ್ರಮಾಣಪತ್ರ ನೀಡಿರುವ ಬಗ್ಗೆ ಮಾಹಿತಿ ಗೊತ್ತಿಲ್ಲ. ಆ. 10ರಂದು ವಶಕ್ಕೆ ಪಡೆದು, ಪ್ರಾಥಮಿಕ ತನಿಖೆ ಮಾಡಿದ್ದಾರೆ. ಹಾಗಾಗಿ ಸುಧಾಕರನನ್ನು ಅಮಾನತಿನಲ್ಲಿಟ್ಟಿದ್ದೇವೆ ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಲಿಂಗರಾಜು ಹೇಳಿದ್ದಾರೆ.

Previous articleಬೆಳ್ತಂಗಡಿ : ಬಂಗ್ಲಗುಡ್ಡದಲ್ಲಿ ಮತ್ತೆ ಕಳೇಬರಕ್ಕಾಗಿ ಕಾರ್ಯಾಚರಣೆ ಆರಂಭ
Next articleಬಿಡದಿ ಟೌನ್ ಶಿಪ್ ಯೋಜನೆ ರದ್ದು, ಬಿಜೆಪಿ ಭರವಸೆ

LEAVE A REPLY

Please enter your comment!
Please enter your name here