ಸೆಪ್ಟೆಂಬರ್ 17 ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ. ಈ ಹಿನ್ನಲೆಯಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕುರಿತು ಡಾ.ಗುರುಪ್ರಸಾದ ರಾವ್ ಹವಲ್ದಾರ್ ಬರೆದಿರುವ ವಿಶೇಷ ಲೇಖನ.
1947ರ ಆಗಸ್ಟ್ 15ರಂದು ಇಡೀ ದೇಶವೇ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದರೆ ಕಲ್ಯಾಣ ಕರ್ನಾಟಕ ಪ್ರದೇಶ ಮಾತ್ರ ಇನ್ನೂ ಗುಲಾಮಗಿರಿ ಎಂಬ ನರಕದಲ್ಲಿ ಇತ್ತು. ಹೈದರಾಬಾದ್ ನಿಜಾಮನ ಆಳ್ವಿಕೆ ಈ ಜನರ ಬದುಕನ್ನು ದುರ್ಭರವಾಗಿಳಿಸಿತ್ತು. ವಂದೇ ಮಾತರಂ ಹೇಳುವುದು, ತ್ರಿವರ್ಣ ಧ್ವಜ ಹಾರಿಸುವುದು ಅಪರಾಧವಾಗಿತ್ತು. ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಚಳವಳಿ ನಿಜಾಮನ ನಿರಂಕುಶ ಪ್ರಭುತ್ವ ಹಾಗೂ ಸ್ವಾತಂತ್ರ್ಯ ದ ಹೋರಾಟವಾಗಿತ್ತು.
1948ರ ಸೆಪ್ಟೆಂಬರ್ 17ರಂದು ಭಾರತದ ಒಕ್ಕೂಟಕ್ಕೆ ಸೇರಿದಕ್ಕೆ ಇಂದು 77 ವರ್ಷ ತುಂಬುತ್ತದೆ. ಇದರ ಹಿಂದೆ ಸಾವಿರಾರು ದೇಶಭಕ್ತರು ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರ ಹೋರಾಟದ ಶ್ರಮವಿದೆ. ಸ್ವಾತಂತ್ರ್ಯ ಲಭಿಸಿ 78ವರ್ಷ ಕಳೆದರೂ ಕರ್ನಾಟಕದ ಬೇರೆ ಭಾಗಗಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಲ್ಲಿ ತುಂಬಾ ಹಿಂದಿದೆ. ಈ ಭಾಗದ ಅನೇಕ ನೀರಾವರಿ ಯೋಜನೆಗಳಿಗೆ ಸಮಯೋಚಿತ ಹಣ ಮಂಜೂರಾಗದೆ ಬಹಳಷ್ಟು ಅಪೂರ್ಣವಾಗಿಯೇ ಉಳಿದಿವೆ. ಈ ಕಾರಣಕ್ಕಾಗಿಯೇ ನೀರಾವರಿಯಿಂದ ಈ ಪ್ರದೇಶ ವಂಚಿತಗೊಂಡು, ಬರದ ನಾಡಾಗಿ ಉಳಿದಿದೆ.
ಆಗ ನಿಜಾಮನ ವಿರುದ್ಧ ಹೋರಾಟವಾದರೆ ಈಗ ಬದುಕಿಗಾಗಿ ಆಗಿದೆ .ಸ್ವತಂತ್ರ ಪೂರ್ವ ದಲ್ಲಿ ಮೈಸೂರು ಪ್ರಾಂತಕ್ಕೆ ಹೋಲಿಸಿದರೆ ನಿಜಾಮ ಆಡಳಿತ ಪ್ರಗತಿಗೆ ಪೂರಕ ಮತ್ತು ಜನಾನುರಾಗಿ ಆಗಿರಲಿಲ್ಲ. ಮೈಸೂರು ಮಹಾರಾಜರು ಶಿಕ್ಷಣ, ನೀರಾವರಿ, ರಸ್ತೆ ಸೇರಿದಂತೆ ಕಲ್ಯಾಣ ರಾಜ್ಯಕ್ಕೆ ಹೆಚ್ಚು ಒತ್ತು ಕೊಟ್ಟರು. ಆದರೆ, ಹೈದರಾಬಾದ್ ನಿಜಾಮನ ಆಡಳಿತ ಅಭಿವೃದ್ಧಿ ಕೇಂದ್ರಿತವಾಗಿರಲಿಲ್ಲ. ಮೈಸೂರು ಸಂಸ್ಥಾನಕ್ಕಿಂತಲೂ ಹೈದರಾಬಾದ್ ಸಂಸ್ಥಾನ ಹೆಚ್ಚು ಶ್ರೀಮಂತ ಇದ್ದರೂ, ಜನಕಲ್ಯಾಣ ಯೋಜನೆ ಜಾರಿಯಾಗಲಿಲ್ಲ.ಮೈಸೂರು ಸೀಮೆ ಅರಸರಂಥ ದೂರದೃಷ್ಟಿಯ ದೊರೆಗಳನ್ನೂ ದಿವಾನರನ್ನೂ ಪಡೆದು ಯೋಜನೆಗಳಿಂದ ಪರಿಪುಷ್ಟವಾಗಿ ಶ್ರೀಮಂತವಾದಂತೆ, ಈ ಭಾಗ ಆಗಲಿಲ್ಲ.
ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ವಿಜಯನಗರ ಸೇರಿ ಏಳು ಜಿಲ್ಲೆಗಳಲ್ಲಿರುವ ಜನಸಂಖ್ಯೆ ಒಟ್ಟು 1.3 ಕೋಟಿ ಯಷ್ಟು, ಈ ಏಳು ಜಿಲ್ಲೆಗಳಲ್ಲಿ ಸಾಕ್ಷರತೆ ಪ್ರಮಾಣ, ಉನ್ನತ ಶಿಕ್ಷಣಕ್ಕೆ ದಾಖಲಾಗುವವರ ಪ್ರಮಾಣ ನಿರಾಶಾದಾಯಕವಾಗಿಯೇ ಮುಂದುವರಿದಿವೆ. ಅತ್ಯಂತ ಕಷ್ಟಪಟ್ಟು ಪಡೆದ 371(ಜೆ) ಕಲಂ ತಿದ್ದುಪಡಿಯಿಂದ ಪ್ರದೇಶಕ್ಕೆ ಆಗಿರುವ ಪ್ರಯೋಜನಗಳ ಅಷ್ಟಕಷ್ಟೇ.
ಈಗಲೂ ಕೆಲಸ ಹುಡುಕಿಕೊಂಡು ಜನರು ಗುಳೆ ಹೋಗುವ ಕಷ್ಟ ತಪ್ಪಿಲ್ಲ. ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಡಾ. ಡಿ.ಎಂ.ನಂಜುಂಡಪ್ಪ ನೇತೃತ್ವದ ಸಮಿತಿ ರಚನೆಗೊಂಡು ಎರಡು ದಶಕ ಪೂರೈಸುವ ಹೊಸ್ತಿಲಲ್ಲಿದ್ದರೂ, ಅದು ನೀಡಿದ ಶಿಫಾರಸುಗಳ ಅನುಷ್ಠಾನ ಇನ್ನೂ ಪರಿಪೂರ್ಣವಾಗಿ ಆರೂ ಜಿಲ್ಲೆಗಳಲ್ಲಿ ಆಗಿಲ್ಲ. ಸಮಿತಿಯ ಶಿಫಾರಸಿನಂತೆ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಬಿಡುಗಡೆಯಾದ ಕೋಟ್ಯಂತರ ರೂಪಾಯಿ ಅನುದಾನದ ಸಮರ್ಪಕ ಬಳಕೆಯಾಗುತ್ತಿಲ್ಲ. ಜನತೆಗೆ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳು, ವಿಶೇಷ ಅನುದಾನಗಳನ್ನು ರಾಜ್ಯ ,ಕೇಂದ್ರ ಸರ್ಕಾರಗಳು ನೀಡುತ್ತಿವೆ,ಅಲ್ಲದೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದು ಹನ್ನೊಂದು ವರ್ಷಗಳು ಕಳೆದಿವೆ. ಅಭಿವೃದ್ಧಿ ಮಂಡಳಿ ಮೂಲಕ ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡಲಾಗಿದೆ.
ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದಾಗಿನಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರತೀ ವರ್ಷಕ್ಕೆ ಐದು ಸಾವಿರ ಕೋಟಿ ಅನುದಾನ ನೀಡುತ್ತಿದ್ದಾರೆ. ಇಷ್ಟೆಲ್ಲ ಹಣ ಖರ್ಚಾಗಿಯೂ ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳು ರಾಜ್ಯದ ಅಭಿವೃದ್ಧಿ ಹೊಂದಿದ ಜಿಲ್ಲೆಗಳಿಗೆ ಹೋಲಿಸಿದರೆ ಇನ್ನೂ ಹಿಂದುಳಿದಿವೆ. ಸೂಕ್ತ ಅನುದಾನ ನೀಡುತ್ತಿದ್ದರೂ ಮೂಲಸೌಕರ್ಯ ವಿಸ್ತರಣೆ ವಿಷಯದಲ್ಲಿ ಹೆಚ್ಚೇನು ಸುಧಾರಣೆಯಾಗಿಲ್ಲ. 2013-14ರಿಂದ 2023-24ರವರೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 14,878 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದ್ದು, 13000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
2023–24ನೇ ಸಾಲಿನಲ್ಲಿ ಕೆಕೆಆರ್‌ಡಿಬಿಗೆ ರಾಜ್ಯ ಸರ್ಕಾರ ₹3 ಸಾವಿರ ಕೋಟಿ ಹಂಚಿಕೆ ಮಾಡಿತ್ತು. ಮಂಡಳಿಯು ₹2,969.20 ಕೋಟಿಯ ಕ್ರಿಯಾಯೋಜನೆಗೆ ಅನುಮೋದನೆ ನೀಡಿತ್ತು. ಅದರಲ್ಲಿ ₹1,459.37 ಕೋಟಿಯಷ್ಟೆ (ಶೇ 49) ವೆಚ್ಚವಾಗಿದೆ. ಒಟ್ಟು 6,182 ಕಾಮಗಾರಿಗಳಲ್ಲಿ ಕೇವಲ 1,940 ಕಾಮಗಾರಿಗಳು ಪೂರ್ಣಗೊಂಡಿದ್ದು, 3,870 ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ. 372 ಕಾಮಗಾರಿಗಳು ಆರಂಭವೇ ಆಗಿಲ್ಲ ಎಂದು ಕೆಕೆಆರ್‌ಡಿಬಿ ಮೂಲಗಳು ತಿಳಿಸಿವೆ. ಪ್ರಸಕ್ತ 2025-26ನೇ ಸಾಲಿಗೆ ₹5,000 ಕೋಟಿ ಅನುದಾನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ನೀಡಿದ್ದು, ಅಷ್ಟು ಹಣ ಖರ್ಚು ಮಾಡಿ ಅಭಿವೃದ್ಧಿ ಮಾಡಬೇಕಿದೆ .
ಸಚಿವ ಸಂಪುಟ ಸಭೆ: ಕಳೆದ ಕಲಬುರಗಿ ಸಚಿವ ಸಂಪುಟ ಸಭೆಯಲ್ಲಿ ₹857 ಕೋಟಿ ವೆಚ್ಚದ ಆರೋಗ್ಯ ಆವಿಷ್ಕಾರ ಯೋಜನೆಗಳಿಗೆ ಅನುಮೋದನೆ ನೀಡಿದ್ದರಿಂದ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಒಟ್ಟಾರೆ ₹411.88 ಕೋಟಿ ವೆಚ್ಚದಲ್ಲಿ ಹೊಸದಾಗಿ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 1 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 2 ತಾಲೂಕು ಆಸ್ಪತ್ರೆಗಳ ನಿರ್ಮಾಣಕ್ಕೆ, 6 ಪ್ರಾಥಮಿಕ ಅರೋಗ್ಯ ಕೇಂದ್ರದಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ, 30 ಹಾಸಿಗೆಗಳಿಂದ 50 ಹಾಸಿಗೆಗೆ ಮೇಲ್ದರ್ಜೆಗೆ ಏರಿಸುವ 16 ಸಮುದಾಯ ಆರೋಗ್ಯ ಕೇಂದ್ರಗಳು, 1 ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 100 ಹಾಸಿಗೆಯ ತಾಲೂಕಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದು, 100 ಹಾಸಿಗೆ ಸಾಮರ್ಥ್ಯದ 3 ತಾಲೂಕು ಆಸ್ಪತ್ರೆ 150 ಹಾಸಿಗೆಗೆ ಮೇಲ್ದರ್ಜೆಗೇರಿಸುವ ಯೋಜನೆಗೆ ಇಂದಿಲ್ಲಿ ಚಾಲನೆ ದೊರೆತಿದೆ. ಒಟ್ಟಾರೆಯಾಗಿ 41 ಕಾಮಗಾರಿಗಳಿಗೆ ₹411.88 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಇದರಲ್ಲಿ ಕೆ.ಕೆ.ಆರ್.ಡಿ.ಬಿ ಮಂಡಳಿ ₹208.94 ಕೋಟಿ ಅನುದಾನ ನೀಡುವ ಮೂಲಕ ಪ್ರದೇಶದ ಅಭಿವೃದ್ಧಿಗೆ ಮುಂದಾಗಿದೆ.
ಬಂಡವಾಳ ಹೂಡಿಕೆ, ಕೈಗಾರಿಕೆಗಳ ಸ್ಥಾಪನೆ, ಉದ್ಯೋಗಸೃಷ್ಟಿ ಕಡತಗಳಿಗೆ ಸೀಮಿತಗೊಂಡಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ. ಸರ್ಕಾರಿ ಹುದ್ದೆಗಳು ಭರ್ತಿಯಾಗದೆ ಆಡಳಿತಯಂತ್ರ ಕುಂಟುತ್ತ ಸಾಗಿದೆ. ಈ ಜಿಲ್ಲೆಗಳಿಂದ ಆ ಅನುದಾನ ಹಲವು ಬಾರಿ ವಾಪಸು ಹೋಗಿದೆ. ಕಳೆದ ವರ್ಷ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಯ್ತಾದರೂ ಉತ್ತರ ಕರ್ನಾಟಕದಲ್ಲಿ ಬರುವ 6 ಜಿಲ್ಲೆಗಳ ವ್ಯಾಪ್ತಿಯ 1.25 ಕೋಟಿ ಜನ ವಸತಿ ಹೊಂದಿರುವ ಕಲ್ಯಾಣ ಕರ್ನಾಟಕವನ್ನೇ ಈ ಸಮಾವೇಶದಲ್ಲಿ ಅಲಕ್ಷಸಿದ್ದು ಯಾಕೆ? ಎಂಬುದೇ ಉತ್ತರ ಸಿಗದ ಪ್ರಶ್ನೆ.
ಮೊದಲೇ ಕೈಗಾರಿಕೆ ಬರ ಕಾಡುತ್ತಿರುವ ಕಲ್ಯಾಣ ಕರ್ನಾಟಕದಲ್ಲಿ ಬಂಡವಾಳ ಹರಿದು ಬಂದರೆ ತಾನೆ ಈ ಸಮಸ್ಯೆಗೆ ಪರಿಹಾ ದೊರಕೋದು? ಬಂಡವಾಳ ಹೂಡಿಕೆದಾರರು ಈ ನೆಲದತ್ತ ಕಣ್ಣು ಹಾಯಿಸಿಲಿ ಎಂಬ ಕಾರಣಕ್ಕಾಗಿ ಕಲಬುರಗಿ ಬೀದರ್ ನಲ್ಲಿ ವಿಮಾನಯಾನ ಸೇವೆ ಶುರುವಾಗಿದೆ. ಇದಲ್ಲದೆ ಬೀದರ್ ನ ರಕ್ಷಣಾ ಉದ್ದೇಶದ ವಿಮಾನ ನಿಲ್ದಾಣ ನಾಗರಿಕ ವಿಮಾನಯಾನಕ್ಕೆ ಅನುಮತಿ ನೀಡಿದ್ದರ ಹಿಂದಿನ ಉದ್ದೇಶ ಆಗಿತ್ತು. ವಿಮಾನಯಾನ ಸೇವೆ ಆರಂಭವಾಗಿ ಸ್ಥಗಿತಗೊಂಡಿದೆ. ಇನ್ನೂ ವಿಜಯಪುರ ವಿಮಾನ ನಿಲ್ದಾಣ ಕುಂಟುತ್ತಾ ಸಾಗಿದರೆ, ರಾಯಚೂರಿನಲ್ಲಿ ವಿಮಾನ ನಿಲ್ದಾಣ ಇಲ್ಲವೇ ಇಲ್ಲ, ಇನ್ನೂ ಬಳ್ಳಾರಿ ಕೊಪ್ಪಳ ದಲ್ಲಿ ಖಾಸಗಿ ಯವರ ನಿಲ್ದಾಣ ವನ್ನು ನೆಚ್ಚಿಕೊಂಡು ಕೂತಿದೆ. ಇಲ್ಲಿನ ಕೈಗಾರಿಕೆ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ
ಬೇಕಿದೆ ಐಟಿ ಮತ್ತು ಬಿಟಿ ಹಬ್: ಬೆಂಗಳೂರಿನಲ್ಲಿ ಐಟಿ ಮತ್ತು ಬಿಟಿ ವಲಯಗಳು ಪ್ರಮುಖ ಮಾರುಕಟ್ಟೆ ಶಕ್ತಿಯಾಗಿ ಹೊರಹೊಮ್ಮಿವೆ. ಇವುಗಳು 30 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ. ಈ ಕ್ಷೇತ್ರವನ್ನು ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ಕಡೆ ವಿಸ್ತರಿಸುವ ಮೂಲಕ ಐಟಿ ಬಿಟಿ ಹಬ್ ರಾಜ್ಯಸರ್ಕಾರದಲ್ಲಿ ಈಭಾಗದವರೇ ಐಟಿಬಿಟಿ ಸಚಿವರಾಗಿದ್ದಾರೆ , ಈಕ್ಷೇತ್ರದ ಅಭಿವೃದ್ಧಿ ಶ್ರಮಿಸುತ್ತಿರುವ ಸಚಿವರಿಗೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹೂಡಿಕೆ,ಕಂಪನಿಗಳ ಸ್ಥಾಪನೆಗೆ ಪ್ರಯತ್ನಿಸಿದರೆ ಬಹುದೊಡ್ಡ ಉದ್ಯೋಗ ಸೃಷ್ಟಿಯ ಜೊತೆಗೆ ಅಭಿವೃದ್ಧಿಯಾಗುತ್ತದೆ.
ಈ ಭಾಗದಲ್ಲಿ ಐಟಿ ಹಬ್‌ಗಳನ್ನು , ಬಿಸಿನೆಸ್ ಪಾರ್ಕ್‌ಗಳನ್ನು ಸ್ಥಾಪಿಸಬೇಕು ಇದರಿಂದ ಕಂಪನಿಗಳು ತಮ್ಮ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಅನುಕೂಲವಾಗುತ್ತದೆ.ಜೊತೆಗೆ ಈಗ, ತಂತ್ರಜ್ಞಾನ ಕಂಪನಿಗಳು ಸ್ಥಳಾಂತರಿಸಲು ಬಯಸಿದರೆ, ಅವರಿಗೆ ಕಚೇರಿ ಸ್ಥಳ ಲಭ್ಯವಿಲ್ಲ. ಇದು ನಿಜಕ್ಕೂ ಒಂದು ಶೋಚನೀಯ ಪರಿಸ್ಥಿತಿ. ಇದರ ಜೊತೆಗೆ, ಸರ್ಕಾರವು AI, ರೋಬೋಟಿಕ್ಸ್, ಕ್ವಾಂಟಮ್ ಕಂಪ್ಯೂಟಿಂಗ್, ಮತ್ತು ಜೈವಿಕ ತಂತ್ರಜ್ಞಾನದಂತಹ ಹೈಟೆಕ್ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ನಿಧಿಗಳನ್ನು ಹಂಚಬೇಕು, ಇದರಿಂದ ನಗರ ಮತ್ತು ರಾಜ್ಯ ಹೆಚ್ಚು ಸ್ಪರ್ಧಾತ್ಮಕವಾಗುತ್ತವೆ.
ಕರ್ನಾಟಕದ ಬಹುತೇಕ ಕೈಗಾರಿಕೆಗಳು ಮತ್ತು ಕಂಪನಿಗಳು ದಕ್ಷಿಣ ಭಾಗದಲ್ಲಿ ಕೇಂದ್ರೀಕೃತವಾಗಿವೆ, ಇದರಿಂದಾಗಿ ಕಲ್ಯಾಣ ಕರ್ನಾಟಕದಲ್ಲಿ ಕಡಿಮೆ ಉದ್ಯೋಗ ಸೃಷ್ಟಿ ಮತ್ತು ಕಾರ್ಮಿಕರ ಹೆಚ್ಚಳದಿಂದ ಬಳಲುತ್ತಿದೆ. ಇದಕ್ಕೆ ಪರಿಹಾರವೆಂದರೆ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು .ಈ ಕೈಗಾರಿಕೆಗಳು ತಮ್ಮ ನೌಕರರಿಗೆ ಇಎಸ್‌ಐ ಮತ್ತು ಪಿಎಫ್ ಅನ್ನು ಸಹ ಒದಗಿಸಬೇಕು. ಕೇಂದ್ರ ಸರ್ಕಾರವು ಇಎಸ್‌ಐ ಮತ್ತು ಪಿಎಫ್ ಹಣವನ್ನು ಮರುಪಾವತಿಸುತ್ತದೆ, ಇದು ಉತ್ತರ ಕರ್ನಾಟಕಕ್ಕೆ ಅನೇಕ ಕಾರ್ಮಿಕ-ತೀವ್ರ ಕೈಗಾರಿಕೆಗಳನ್ನು ಆಕರ್ಷಿಸಲು ಉತ್ತೇಜನ ನೀಡುತ್ತದೆ.
ರಸ್ತೆ ಅಭಿವೃದ್ಧಿ: ರಾಜ್ಯದ ಒಳಗೆ ಮತ್ತು ಸುತ್ತಮುತ್ತಲಿನ ಕಳಪೆ ರಸ್ತೆಗಳಿಂದಾಗಿ, ಪ್ರಸ್ತುತ ಹೆಚ್ಚಿನ ಸರಕುಗಳನ್ನು ಆಂದ್ರ,ತಮಿಳು ನಾಡು ಬಂದರುಗಳ ಮೂಲಕ ರಫ್ತು ಮಾಡಲಾಗುತ್ತಿದೆ. ಬೀದರ್‌ನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಆರುಪಥಗಳ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಬೇಕಿದೆ., ಇದು ಕಲ್ಯಾಣ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ. ಕರ್ನಾಟಕದಲ್ಲಿ ಉತ್ಪಾದಿಸಿದ ಸರಕುಗಳನ್ನು ಮಂಗಳೂರು ಬಂದರು ಮೂಲಕ ರಫ್ತು ಮಾಡಲು ಅನುಕೂಲವಾಗುವಂತೆ ಶಿರಡಿ ಘಾಟಿನಲ್ಲಿ ಸುರಂಗದ ಮೂಲಕ ಕಾರವಾರಕ್ಕೆ ಮತ್ತು ಮತ್ತೊಂದು ಮಾರ್ಗವನ್ನು ಮಂಗಳೂರಿಗೆ ಸಂಪರ್ಕಿಸಹಾಗೆ ಮಾಡಬೇಕಿದೆ.
ಕೇವಲ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಮಾತ್ರವಲ್ಲದೆ, ಇದು ಕೈಗಾರಿಕಾ ಎಸ್ಟೇಟ್‌ಗಳ ಅಭಿವೃದ್ಧಿಗೂ ಕಾರಣವಾಗಬಹುದು ಎಂದು ಪೈ ಭಾವಿಸುತ್ತಾರೆ. ಬೀದರ್, ಯಾದಗಿರಿ, ರಾಯಚೂರು, ಕಡೆಯಿಂದ ಈ ಎಕ್ಸ್‌ಪ್ರೆಸ್‌ವೇಯಲ್ಲಿ, ಜಿಲ್ಲಾ , ತಾಲ್ಲೂಕು ಕೇಂದ್ರ ದ ಹತ್ತಿರ 5,000 ಎಕರೆಗಳ ಕೈಗಾರಿಕಾ ವಲಯ ಸ್ಥಾಪಿಸಿ , ಎಲ್ಲಾ ಸೌಲಭ್ಯಗಳನ್ನು ಒದಗುವಂತೆ ಮಾಡಿದರೆ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತವೆ ಇದರಿಂದಾಗಿ ಯುವಕರು ಮಹಾನಗರಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆಯಲು ಸಾಧ್ಯವಾಗುತ್ತದೆ.
ಕಲಂ 371 ಜೆ ಅನುಷ್ಠಾನಗೊಂಡು ದಶಕ ಕಳೆದಿದೆ ದಿ. ಧರಂಸಿಂಗ್, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ಇನ್ನೂ ಅನೇಕ ಮಹನೀಯರ ಶ್ರಮದಿಂದ ಈ ಸಂವಿಧಾನದ ವಿಶೇಷ ಕಲಂ ನಮಗೆ ದೊರಕಿದೆ. ವೃತ್ತಿ ಶಿಕ್ಷಣ, ಉದ್ಯೋಗ, ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ. ಅದರೆ ಈ ಅವಕಾಶ ಇಲ್ಲಿನ ಜನರಿಗೆ ದೊರೆತು ಅಭಿವೃದ್ಧಿ ಹೊಂದಿದಾಗ ಮಾತ್ರ ಜನರ ಬದುಕು ಹಸನಾಗಲು ಸಾಧ್ಯ ಕೇಂದ್ರ ಸರ್ಕಾರ 371J ಎಂಬ ವಿಶೇಷ ಸ್ಥಾನಮಾನ ನೀಡಿದೆ,ಇಷ್ಟೆಲ್ಲ ಇದ್ದರೂ ಅಭಿವೃದ್ಧಿ ಎನ್ನುವುದು ಪೂರ್ಣ ಪ್ರಮಾಣದಲ್ಲಿ ಆಗದೇ ಇರುವುದು ದುರದೃಷ್ಟಕರ.
ಮತ್ತು ಸ್ವತಂತ್ರ ನಂತರದ ದಶಕಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿ ಯಾಗಲೇ ಇಲ್ಲ,ಅಭಿವೃದ್ಧಿ ಮೂಲಭೂತ ಸೌಕರ್ಯಗಳಿಗಾಗಿ ಕೂಗು ಹಲವು ದಶಕಗಳಿಂದಲೂ ಬಲಗೊಳ್ಳುತ್ತಲೇ ಇದೆ. ಈ ಹಿಂದೆ ಪ್ರತ್ಯೇಕ ರಾಜ್ಯದ ಬೇಡಿಕೆಯೂ ಬಲಗೊಂಡಿತ್ತು. ಕಲ್ಯಾಣ ಭಾಗಕ್ಕೆ ಹೆಚ್ಚುವರಿ ಅನುದಾನ ನೀಡಿ ಅಭಿವೃದ್ಧಿಪಡಿಸಿ ಪ್ರಾದೇಶಿಕ ಅಸಮತೋಲನೆ ನಿವಾರಿಸಬೇಕು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ವಿಶೇಷ ಸಂಪುಟ ಸಭೆ ಭಾಗದಲ್ಲಿ ಮಾಡಿ ಈ ಭಾಗದ ಸಮಸ್ಯೆಗಳ ಬಗ್ಗೆಯೇ ಚರ್ಚಿಸಿ ಪರಿಹಾರ ಕಲ್ಪಿಸಬೇಕು, ಕೈಗಾರಿಕೆ, ಕೃಷಿ, ನೀರಾವರಿ, ಶಿಕ್ಷಣ ಕ್ಷೇತ್ರದಲ್ಲಿ ಸಮೃದ್ಧ ಬದಲಾವಣೆಯಾಗಿ ಪ್ರಾದೇಶಿಕ ಅಸಮತೋಲನೆ ನಿವಾರಣೆಯಾಗಬೇಕು .
ಪ್ರತೀ ವರ್ಷ ಐದು ಸಾವಿರ ಕೋಟಿ ಅನುದಾನ ಸಿಗುತ್ತಿದ್ದರೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೊಂದುತ್ತಿಲ್ಲವೆಂದರೆ ಆ ಭಾಗದ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು.ಕಲ್ಯಾಣ(ಹೈದ್ರಾಬಾದ)ಕರ್ನಾಟಕ ಪ್ರದೇಶದ ತಾಲ್ಲೂಕುಗಳ ಪೈಕಿ 22 ತಾಲ್ಲೂಕುಗಳನ್ನು ಅತ್ಯಂತ ಹಿಂದುಳಿದ,5 ತಾಲ್ಲೂಕುಗಳನ್ನು ಅತಿ ಹಿಂದುಳಿದ ಮತ್ತು 2 ತಾಲ್ಲೂಕುಗಳನ್ನು ಹಿಂದುಳಿದ ತಾಲ್ಲೂಕುಗಳೆಂಬುದಾಗಿ ವರ್ಗೀಕೃತಗೊಳಿಸಿ ಹೇಳುವ ಮಂಡಳಿ, ಸರ್ಕಾರ, ಜನಪ್ರತಿನಿಧಿಗಳು ಅಭಿವೃದ್ಧಿ ಗೊಳಿಸುವುದು ಯಾವಾಗ?
ಎಲ್ಲಿಯವರೆಗೆ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು, ಮಂತ್ರಿಗಳು ಹಣದ ವ್ಯಾಮೋಹ ತೊರೆದು ಅಭಿವೃದ್ಧಿ ಮಂತ್ರ ಜಪಿಸುವುದಿಲ್ಲವೋ ಅಲ್ಲಿಯವರೆಗೆ ಹಿಂದುಳಿದ ಹಣೆಪಟ್ಟಿಯಿಂದ ಬಿಡುಗಡೆಯಿಲ್ಲ. ಗುತ್ತಿಗೆದಾರರು, ಅಧಿಕಾರಿಗಳು ಅಭಿವೃದ್ಧಿ ಯೋಜನೆಗಳನ್ನು ನುಂಗಲು ಕಾಯುತ್ತಿರುವರಿಂದ ಅಭಿವೃದ್ಧಿ ಸಾಧ್ಯವೇ?. ಈ ಪ್ರದೇಶದಲ್ಲಿ ಜನರ ಜೀವನಮಟ್ಟ ಬದಲಾಗಬೇಕು. ಮೂಲಸೌಕರ್ಯಗಳ ಕೊರತೆ ನೀಗಿ ಶಿಕ್ಷಣ, ಉದ್ಯೋಗ, ಅಭಿವೃದ್ಧಿ ಪಥದಲ್ಲಿ ಅದು ರಾಜ್ಯದ ಇತರ ಪ್ರದೇಶಗಳಿಗೆ ಸರಿಸಮನಾಗಿ ನಿಲ್ಲಲು ಮಹತ್ವದ, ದೂರದೃಷ್ಟಿಯುಳ್ಳ ಕಾರ್ಯಕ್ರಮಗಳೂ ರೂಪುಗೊಳ್ಳಬೇಕು.