ಮೈಸೂರು: ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ತೀರ್ಪುನ್ನು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸ್ವಾಗತಿಸಿದ್ದಾರೆ. ಸುದ್ದಿಗೋಷ್ಠಿ.ಯಲ್ಲಿ ಮಾತನಾಡಿ, ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಅದು ವಜಾಗೊಂಡಿದೆ. ನ್ಯಾಯಾಲಯ ಆದೇಶವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೊಮ್ಮಾಯಿ ಸಿಎಂ ಆಗಿದ್ದಾಗ ಕುಲ ಶಾಸ್ತ್ರೀಯ ಅಧ್ಯಯನವನ್ನು ಮಾಡಿಸಿದ್ದರು. ಈಗಲೂ ಕಾನೂನು ಪ್ರಕಾರವಾಗಿ ಕೇಂದ್ರ ಸರಕಾರಕ್ಕೆ ಈ ನಿರ್ಣಯವನ್ನು ರಾಜ್ಯ ಸರಕಾರ ಕಳಿಸಿಲ್ಲ. ಸಿದ್ದರಾಮಯ್ಯಗೆ ಈಗ ಕಷ್ಟಕಾಲ. ಸಂತೋಷವಿದ್ದಾಗ ಕುರುಬರನ್ನು ಒದ್ದಿದ್ದಾರೆ. ಕಷ್ಟ ಬಂದಾಗ ಕುರುಬರ ನೆನಪಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯಗೆ ಈಗ ಕುರುಬರ ನೆನಪು: ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಕುರುಬ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಪ್ರಕ್ರಿಯೆ ನಡೆದಿತ್ತು. ಸಿದ್ದರಾಮಯ್ಯ ಇದಕ್ಕೆ ಎಂದು ಪರವಾಗಿರಲಿಲ್ಲ. ಕಷ್ಟಕಾಲ ಬಂದಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕುಟುಂಬ ಜನಾಂಗದ ಮೇಲೆ ಪ್ರೀತಿ ಹೆಚ್ಚಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಲೇವಡಿ ಮಾಡಿದರು. ಸಿಎಂ ಕುರ್ಚಿ ಹತ್ತಿರಕ್ಕೆ ಡಿಕೆ ಶಿವಕುಮಾರ್ ಬಂದಿದ್ದಾರೆ. ಹೀಗಾಗಿ ಕುರುಬರನ್ನು ತಮ್ಮ ರಕ್ಷಣೆಗೆ ಸಿದ್ದರಾಮಯ್ಯ ಕರೆಯುತ್ತಿದ್ದಾರೆ.
ಕಾಗಿನೆಲೆ ಮಹಾ ಸಂಸ್ಥಾನ ಕಟ್ಟುವಾಗ ಸಿದ್ದರಾಮಯ್ಯ ಯಾವುದಕ್ಕೂ ಸಹಕಾರ ಕೊಡಲಿಲ್ಲ. ಕುರುಬ ಸಮುದಾಯದ ನಾಯಕತ್ವವನ್ನು ಸಿದ್ದರಾಮಯ್ಯ ತುಳಿದರು. ಕುರುಬ ಜನಾಂಗಕ್ಕೆ ಸಿದ್ದರಾಮಯ್ಯ ಏನು ಮಾಡಲಿಲ್ಲ. ಅವರ ಕೊಡುಗೆ ಶೂನ್ಯ. ನಾಯಕ ಸಮುದಾಯವನ್ನು ಎಸ್.ಟಿ. ಗೆ ಸೇರಿಸಿದ್ದು ಎಚ್.ಡಿ. ದೇವೇಗೌಡರು ಹೊರತು ಬೇರೆ ಯಾರು ಅಲ್ಲ. ಹಿಂದುಳಿದ ವರ್ಗಕ್ಕೆ ಸಿದ್ದರಾಮಯ್ಯ ಯಾವ ಸಹಾಯವೂ ಮಾಡಿಲ್ಲ.ಸುಮ್ಮನೆ ಹಿಂದುಳಿದ ನಾಯಕ ಎಂದು ಹೇಳಿ ಕೊಳ್ಳುತ್ತಾರೆ. ಸಿದ್ದರಾಮಯ್ಯಗೆ ತಮ್ಮ ಮಗ ಬಿಟ್ಟರೆ ಇನ್ನೂ ಯಾರು ಕಾಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಪರ ನಿಂತರ ಕಾಗಿನೆಲೆ ಸ್ವಾಮೀಜಿ ತಲೆದಂಡ: ಕಾಗಿನೆಲೆ ಸ್ವಾಮೀಜಿ ಸಮುದಾಯದ ಗುರುಗಳೆ ಹೊರತು ಸಿದ್ದರಾಮಯ್ಯ ಅಡಿಯಾಳು ಅಲ್ಲ. ಸಿಎಂ ಪರ ನಿಂತರ ಸ್ವಾಮೀಜಿ ತಲೆದಂಡವಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಎಚ್ಚರಿಕೆ ನೀಡುವ ಮೂಲಕ ವಿವಾದವನ್ನು ಎಳೆದುಕೊಂಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಗಿನೆಲೆ ಸ್ವಾಮೀಜಿಗಳೆ ನಿಮ್ಮನ್ನು ಸ್ವಾಮೀಜಿ ಮಾಡಿದ್ದು ಇದೇ ವಿಶ್ವನಾಥ್. “ಸ್ವಾಮೀಜಿಗಳೆ ನಿಮ್ಮನ್ನು ಛೂ ಬಿಡುತ್ತಾರೆ. ನೀವು ಸಿದ್ದರಾಮಯ್ಯ ಪರ ಬೀದಿಗೆ ಬಂದರೆ ಹುಷಾರ್. ಅದು ಚೆನ್ನಾಗಿ ಇರಲ್ಲ. ಸ್ವಾಮೀಜಿಗಳೆ ನೀವು ಸಿದ್ದರಾಮಯ್ಯರ ಅಡಿಯಾಳು ಅಲ್ಲ. ಸಿದ್ದರಾಮಯ್ಯ ಪರ ರಸ್ತೆಗೆ ಇಳಿದರೆ ಸ್ವಾಮೀಜಿ ತಲೆದಂಡ ಮಾಡ್ತಿವಿ ಹುಷಾರ್. ಎಚ್ಚರಿಕೆ ಇರಲಿ ಸ್ವಾಮೀಜಿ” ಎಂದು ಖಾರವಾಗಿ ಹೇಳಿದರು.
ಕಾಗಿನೆಲೆ ಪೀಠ ಸಿದ್ದರಾಮಯ್ಯ ಪೀಠ ಅಲ್ಲ. ಅದು ಸಮುದಾಯ ಪೀಠ: ಸಿದ್ದರಾಮಯ್ಯ ಕುರುಬ ಸಮುದಾಯದ ಯುವಕರಿಗೆ ಒಂಥರ ಇಂಗ್ಲಿಷ್ ಸಿನಿಮಾ ಹೀರೋ ಥರ ಕಾಣುತ್ತಾರೆ. ಇಂಗ್ಲಿಷ್ ಸಿನಿಮಾ ಅರ್ಥ ಆಗದಿದ್ದರು ಶಿಳ್ಳೆ ಹೊಡೆದಂತೆ ಸಿದ್ದರಾಮಯ್ಯ ಏನೂ ಮಾಡದಿದ್ದರು ಶಿಳ್ಳೆ ಹೊಡೆಯುತ್ತಾರೆ ಎಂದು ಛೇಡಿಸಿದರು.
ಉಳ್ಳವರು ಮೀಸಲಾತಿ ಬಿಟ್ಟು ಕೊಡಬೇಕು. ಮೀಸಲಾತಿ ಮೂಲಕ ಮೇಲೆ ಬಂದವರು ಆ ಮೀಸಲಾತಿ ಬಿಟ್ಟು ಕೊಡಲಿ. ಖರ್ಗೆ ಮಗನಿಗೂ ಮೀಸಲಾತಿ ಊರಲ್ಲಿ ತಮಟೆ ಹೊಡೆಯುವ ದಲಿತನಿಗೂ ಮೀಸಲಾತಿ.ವಿಶ್ವನಾಥ್ ಮಗನಿಗೂ ಮೀಸಲಾತಿ. ಕುರಿ ಕಾಯುವವ ಮಗನಿಗೂ ಮೀಸಲಾತಿ. ಸಿದ್ದರಾಮಯ್ಯ ಮಗನಿಗೂ ಮೀಸಲಾತಿ ಬಡ ಕುರುಬರಿಗೂ ಮೀಸಲಾತಿ. ಇದು ಸರಿನಾ ಎಂದು ಪ್ರಶ್ನಿಸಿದರಲ್ಲದೆ ಉಳ್ಳವರಿಗೆ ಮೀಸಲಾತಿ ತೆಗೆದು ಹಾಕುವ ಕಾಯ್ದೆ ಸರಕಾರ ಮಾಡುವಂತೆ ಒತ್ತಾಯಿಸಿದರು.