ಚಿತ್ರದುರ್ಗ: ಕೋಟೆಗೆ ಧ್ವನಿ ಮತ್ತು ಬೆಳಕು, ಯೋಜನೆ ವಿವರ

0
41

ಚಿತ್ರದುರ್ಗ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಚಿತ್ರದುರ್ಗದ ಕೋಟೆಗೆ ಪ್ರತಿ ತಿಂಗಳು ಸುಮಾರು 35 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಈಗ 28.40 ಕೋಟಿ ರೂ. ವೆಚ್ಚದಲ್ಲಿ ಚಿತ್ರದುರ್ಗ ಕೋಟೆಯಲ್ಲಿ ಧ್ವನಿ ಮತ್ತು ಬೆಳಕು ಹಾಗೂ ಮೂಲಸೌಕರ್ಯ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು.

“ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಚಿತ್ರದುರ್ಗದ ಕೋಟೆಯಲ್ಲಿ 28.40 ಕೋಟಿ ರೂ. ವೆಚ್ಚದಲ್ಲಿ ಧ್ವನಿ ಬೆಳಕು ವ್ಯವಸ್ಥೆ, ಕೋಟೆಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ವಿವಿಧ ಮೂಲ ಸೌಕರ್ಯ ಒದಗಿಸಿ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗಿದೆ” ಎಂದರು.

“ಚಿತ್ರದುರ್ಗದ ಪ್ರಮುಖ ಪ್ರವಾಸಿ ತಾಣವಾಗಿರುವ ಕೋಟೆಯನ್ನು ಇನ್ನಷ್ಟು ಆಕರ್ಷಕವಾಗಿಸಿ, ಇಲ್ಲಿನ ಇತಿಹಾಸ ಕುರಿತು ವ್ಯಾಪಕ ಪ್ರಚಾರ ನೀಡುವ ನಿಟಿನಲ್ಲಿ ಕೋಟೆಯಲ್ಲಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ” ಎಂದು ಹೇಳಿದರು.

“ಇದಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಅನುಮತಿ ಪಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕೂಡ ಕ್ರಮ ವಹಿಸಿದ್ದಾರೆ. ಇದರ ಜೊತೆಗೆ ಕೋಟೆಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

“ಚಿತ್ರದುರ್ಗ ಕೋಟೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕೆಫೆಟೇರಿಯಾ ನಿರ್ಮಿಸಿ ಸೌಲಭ್ಯ ಒದಗಿಸುವುದು, ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವತಿಯಿಂದ ವಸ್ತು ಸಂಗ್ರಹಾಲಯ ನಿರ್ಮಾಣ ಹಾಗೂ ಕೋಟೆಯೊಳಗಡೆ ಪ್ರಮುಖ ತಾಣಗಳಿಗೆ ಪ್ರವಾಸಿಗರು ತಲುಪಲು ಸಮಸ್ಯೆ ಇರುವ ಸ್ಥಳಗಳಲ್ಲಿ ರೈಲಿಂಗ್ಸ್ ಅಳವಡಿಸುವುದು ಸೇರಿದಂತೆ 5 ಕೋಟಿ ರೂ.ಗಳ ವೆಚ್ಚದ ವಿವಿಧ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸುವಂತೆ” ಜಿಲ್ಲಾಧಿಕಾರಿಗಳು ಸೂಚಿಸಿದರು.

ಒತ್ತುವರಿ ತೆರವಿಗೆ ಕ್ರಮ: ಚಿತ್ರದುರ್ಗದ ಕೋಟೆಗೆ ಪ್ರತಿ ತಿಂಗಳು ಸುಮಾರು 35 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರು ತಮ್ಮ ವಾಹನಗಳಲ್ಲಿ ತಲುಪಲು ಸೂಕ್ತ ರಸ್ತೆ ಇಲ್ಲ, ಇರುವ ರಸ್ತೆಗಳೂ ಕೂಡ ಒತ್ತುವರಿಯ ಕಾರಣದಿಂದಾಗಿ ಕಿರಿದಾಗಿದೆ, ಹೀಗಾಗಿ ವಾಹನಗಳ ಮೂಲಕ ಕೋಟೆಗೆ ತೆರಳುವುದು ತ್ರಾಸದಾಯಕವಾಗಿದೆ. ಕೋಟೆಯ ಮುಂಭಾಗದಲ್ಲಿಯೂ ವಾಹನಗಳನ್ನು ನಿಲ್ಲಿಸಲು ತೀವ್ರ ಸಮಸ್ಯೆಯಾಗುತ್ತಿದೆ.

ಹೀಗಾಗಿ ಚಿತ್ರದುರ್ಗ ನಗರದ ಗಾಂಧಿ ವೃತ್ತದಿಂದ ಕೋಟೆಗೆ ತೆರಳುವ ಮಾರ್ಗಗಳ ರಸ್ತೆ ಹಾಗೂ ಕೋಟೆಯ ಸುತ್ತಮುತ್ತ ಅಕ್ರಮವಾಗಿ ಆಗಿರುವ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ಮತ್ತು ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶೀಘ್ರ ಸಭೆ ನಿಗದಿಪಡಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ.

ಈ ಹಿಂದೆ ಎನ್‍ಹೆಚ್-4 ರಸ್ತೆಯಿಂದ, ಕೋಟೆಗೆ ತಲುಪುವ ರೀತಿ ಸುಮಾರು 3.5 ಕಿ.ಮೀ. ರಿಂಗ್ ರಸ್ತೆ ನಿರ್ಮಾಣ ಕುರಿತಂತೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪ್ರಸ್ತಾವನೆ ಸಲ್ಲಿಕೆಯಾಗಿ, ಲೋಕೋಪಯೋಗಿ ಇಲಾಖೆಯು ಯೋಜನೆ ಜಾರಿ ಕುರಿತಂತೆ ಆಸಕ್ತಿ ತೋರಲಿಲ್ಲ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆಯೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಚಿತ್ರದುರ್ಗದ ಕೋಟೆ ಆವರಣ ಹಾಗೂ ಒಳಗಡೆಯ ಆವರಣದಲ್ಲಿ ಸ್ವಚ್ಛತೆಯ ಕೊರತೆಯಿದೆ, ಮೂಲ ಸೌಕರ್ಯಗಳ ಕೊರತೆ ಕೂಡ ಇದೆ ಎಂಬುದಾಗಿ ಬಹಳಷ್ಟು ದೂರುಗಳು ಕೇಳಿಬರುತ್ತಿದೆ. ಆದರೆ ಈ ನಿಟ್ಟಿನಲ್ಲಿ ಕೋಟೆಯ ಆವರಣ ನಿರ್ವಹಣೆ ಮಾಡುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಯಾವುದೇ ಕ್ರಮ ವಹಿಸುತ್ತಿಲ್ಲದಿರುವುದು ಬೇಸರದ ಸಂಗತಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

Previous articleಧರ್ಮಸ್ಥಳ: ಸೆ.14 ರಿಂದ ಭಜನಾ ಕಮ್ಮಟ
Next articleಒಟಿಟಿಗೆ ಬರಲಿದೆ ‘ಎಕ್ಕ’: ಬ್ಯಾಂಗಲ್ ಬಂಗಾರಿ ನೋಡುವುದು ಎಲ್ಲಿ?

LEAVE A REPLY

Please enter your comment!
Please enter your name here