ಬೆಂಗಳೂರು ನಗರದ ಜನರಿಗೆ ಕಾವೇರಿ ನೀರಿನ ವಿಚಾರದಲ್ಲಿ ಅಪ್‌ಡೇಟ್ ಇದೆ. ಕೆಆರ್‌ಎಸ್ ತುಂಬಿ ಹರಿಯುತ್ತಿದ್ದರೂ ನಗರದಲ್ಲಿ ಮೂರು ದಿನಗಳ ಕಾಲ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಜಲಮಂಡಳಿ ಈ ಕುರಿತು ಮಾಹಿತಿ ನೀಡಿದೆ. ಕಾವೇರಿ ನೀರು ಸರಬರಾಜು ಯೋಜನೆಯಲ್ಲಿ ಕೈಗೊಳ್ಳಲಿರುವ ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15, 16 ಮತ್ತು 17 ರಂದು ನಗರದ ಹಲವು ಭಾಗಗಳಲ್ಲಿ ಕಾವೇರಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಈ ಬಗ್ಗೆ ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಿದ್ದು, ನೀರನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಮನವಿ ಮಾಡಿದ್ದಾರೆ. ಬೆಂಗಳೂರು ನಗರಕ್ಕೆ ಯಾವುದೇ ಅಡೆತಡೆಯಿಲ್ಲದೆ ಕುಡಿಯುವ ನೀರು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು, ಕಾವೇರಿ ನೀರು ಸರಬರಾಜು ಯೋಜನೆಯ ಮೋಟಾರ್ ಯಂತ್ರಾಗಾರಗಳು ಮತ್ತು ಮುಖ್ಯ ಕೊಳವೆ ಮಾರ್ಗಗಳನ್ನು ಸುಸ್ಥಿತಿಯಲ್ಲಿಡುವುದು ಅತ್ಯಗತ್ಯವಾದಿದರಿಂದ ಜಲಮಂಡಳಿಯು ನಿಯಮಿತ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ.
ಈ ಕಾಮಗಾರಿಗಳ ಭಾಗವಾಗಿ, ಮೋಟಾರ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗಿ ಬಂದಿದೆ. ಇದರ ಪರಿಣಾಮವಾಗಿ, ನಗರದ ವಿವಿಧ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ನಾಗರಿಕರು ವ್ಯಯಕ್ತಿಕ ಹಾಗೂ ದೈನಂದಿನ ಅವಶ್ಯಕತೆಗಳಿಗಾಗಿ ನೀರನ್ನು ಬಳಸುವಂತೆ ಸಲಹೆ ನೀಡಲಾಗಿದೆ.
ದಿನಾಂಕ ಮತ್ತು ಸಮಯ: ಕಾವೇರಿ 5ನೇ ಹಂತದ ಪ್ರದೇಶಗಳಲ್ಲಿ ಸೆಪ್ಟೆಂಬರ್ 15ರ ಬೆಳಗ್ಗೆ 1 ಗಂಟೆಯಿಂದ ಸೆಪ್ಟೆಂಬರ್ 17ರ ಮಧ್ಯಾಹ್ನ 1 ಗಂಟೆಯವರೆಗೆ ನೀರು ಪೂರೈಕೆ ಇರುವುದಿಲ್ಲ. ಕಾವೇರಿ ಹಂತ 1, 2, 3, ಮತ್ತು 4ರ ಪ್ರದೇಶಗಳಲ್ಲಿ ಸೆಪ್ಟೆಂಬರ್ 16ರ ಬೆಳಗ್ಗೆ 6 ಗಂಟೆಯಿಂದ ಸೆಪ್ಟೆಂಬರ್ 17 ರ ಬೆಳಗ್ಗೆ 6 ಗಂಟೆಯವರೆಗೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಪ್ರದೇಶಗಳ ನಾಗರಿಕರು ಮುಂಜಾಗ್ರತೆಯಾಗಿ ಅಗತ್ಯವಿರುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಕೋರಿದ್ದಾರೆ.
ಈ ಮೂರು ದಿನಗಳ ಕಾಲ ನೀರಿನ ಮಿತಬಳಕೆ ಮಾಡಿ, ಅನಗತ್ಯ ಖರ್ಚುಗಳನ್ನು ತಪ್ಪಿಸುವ ಮೂಲಕ ಸಹಕರಿಸಲು ಮನವಿ ಮಾಡಲಾಗಿದೆ. ಈ ಕಾಮಗಾರಿಯು ನಗರದ ನೀರಿನ ಪೂರೈಕೆ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ನಾಗರಿಕರು ಈ ತಾತ್ಕಾಲಿಕ ಅನಾನುಕೂಲತೆಯನ್ನು ಸಹಿಸಿಕೊಳ್ಳುವಂತೆ ಜಲಮಂಡಳಿ ಮನವಿ ಮಾಡಿದೆ.