ಗಂಗೂಬಾಯಿ ಹಾನಗಲ್ ಸಂಗೀತ ವಿವಿಗೆ ಗುತ್ತಿಗೆ ಗ್ರಹಣ

0
40

ರಾಜು ಮಳವಳ್ಳಿ

ಕರ್ನಾಟಕ ರಾಜ್ಯದ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಹಿಡಿದಿರುವ ಹೊರಗುತ್ತಿಗೆಯ ‘ಗ್ರಹಣ’ಕ್ಕೆ ದಶಕಗಳಾದರೂ ಇನ್ನೂ ಮೋಕ್ಷ ಸಿಗದೇ ಆಡಳಿತಕ್ಕೆ ಗರಬಡಿದಿದೆ.

2009ರಲ್ಲಿ ಅಂದಿನ ಯಡಿಯೂರಪ್ಪ ಸರ್ಕಾರ ಮೈಸೂರಿನಲ್ಲಿ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತ್ತು. ಇದೀಗ ಈ ವಿವಿ ಬರೋಬ್ಬರಿ 16ನೇ ವರ್ಷಕ್ಕೆ ಕಾಲಿರಿಸಿದ್ದರೂ ಇನ್ನೂ ಕಾಯಂ ಸಿಬ್ಬಂದಿಯ ಭಾಗ್ಯವೇ ಇಲ್ಲವಾಗಿದೆ..!

ಕುಲಪತಿಯ ಸ್ಥಾನ ಬಿಟ್ಟರೆ ವಿವಿಯ ಮಿಕ್ಕೆಲ್ಲ ಬೋಧಕ ಮತ್ತು ಬೋಧಕೇತರ ಹುದ್ದೆಗಳಲ್ಲಿ ದಶಕದಿಂದಲೂ ಗುತ್ತಿಗೆ ವ್ಯವಸ್ಥೆಯೇ ಜಾರಿಯಲ್ಲಿದೆ. 2012ರಲ್ಲಿ ಏಳು ಅಧ್ಯಾಪಕರು, ಮೂವರು ಪ್ರಾಧ್ಯಾಪಕರು, ಐವರು ಪ್ರವಾಚಕರಂತೆ ಒಟ್ಟು 15 ಬೋಧಕ, ಕುಲಸಚಿವರು, ಅಧೀಕ್ಷಕರು ಸೇರಿದಂತೆ ಒಟ್ಟು 19 ಬೋಧಕೇತರ ಹುದ್ದೆಗಳನ್ನು ಸೃಜಿಸಲಾಗಿತ್ತು. ಆದರೆ, ಯುಜಿಸಿ ಮಾರ್ಗಸೂಚಿಯನ್ವಯ ವೃಂದ ಮತ್ತು ನೇಮಕಾತಿಯ ಪರಿನಿಯಮಾವಳಿಗಳು ರೂಪಗೊಂಡಿರಲಿಲ್ಲ.

2019ರಲ್ಲಿ ಕುಲಪತಿ ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ ಅವರು ಎರಡೂ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ಪರಿನಿಯಮಾವಳಿಗಳನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಆ ಪೈಕಿ ಬೋಧಕ ಹುದ್ದೆಗಳ ಪರಿನಿಯಮಾವಳಿಗಳಿಗೆ ಮಾತ್ರ ಅನುಮೋದನೆ ದೊರೆತಿದ್ದು, ಬೋಧಕೇತರ ಹುದ್ದೆಗಳ ನಿಯಮಾವಳಿಗಳಿಗೆ ಉನ್ನತ ಶಿಕ್ಷಣ ಪರಿಷತ್‌ನಿಂದ ಇನ್ನೂ ಅನುಮೋದನೆಯೇ
ಸಿಕ್ಕಿಲ್ಲ..!

ಹಣಕಾಸು ಇಲಾಖೆಯ ಅಡ್ಡಗಾಲು: ವಿವಿ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಯ ಅನುಮೋದನೆ ಅತ್ಯಗತ್ಯ. ಆದರೆ, ಕಳೆದ ಹದಿಮೂರು ವರ್ಷಗಳಿಂದ ಈ ಸಂಬಂಧ ಪ್ರಯತ್ನಗಳು ನಡೆದರೂ ಆರ್ಥಿಕ ಇಲಾಖೆ ಮಾತ್ರ ಇನ್ನೂ ತುಟಿಕ್‌ ಪಿಟಿಕ್ ಎನ್ನುತ್ತಿಲ್ಲ. ಪರಿಣಾಮ ವಿವಿಯಲ್ಲಿ ಗುತ್ತಿಗೆ ವ್ಯವಸ್ಥೆ ಅಬಾಧಿತವಾಗಿ ಮುಂದುವರೆದು ಶೈಕ್ಷಣಿಕ, ಆಡಳಿತಾತ್ಮಕ ಚಟುವಟಿಕೆಗಳಿಗೆ ಬಿಗಿ ಇಲ್ಲದಂದಾಗಿದೆ.

ಹೊರಗುತ್ತಿಗೆ ಸಿಬ್ಬಂದಿಗಳಿಗೆ ಯಾವುದೇ ಹಕ್ಕು-ಬಾಧ್ಯತೆ, ಜವಾಬ್ದಾರಿಗಳಿರುವುದಿಲ್ಲ. ನಿರ್ದಿಷ್ಟ ಆರ್ಥಿಕ-ಶೈಕ್ಷಣಿಕ ನಿರ್ಧಾರ ಕೈಗೊಳ್ಳುವ ಅಧಿಕಾರವೂ ಇರುವುದಿಲ್ಲ. ಹಣಕಾಸು ಇಲಾಖೆ ಇನ್ನಾದರೂ ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಬೇಕು ಎಂದು ಪ್ರೊ.ನಾಗೇಶ್.ಬಿ.ಬೆಟ್ಟಕೋಟೆ ಹಂಗಾಮಿ ಕುಲಪತಿ, ಸಂಗೀತ ವಿವಿ ಹೇಳಿದ್ದಾರೆ.

ಈ ಮಧ್ಯೆ ವಿವಿಗೆ ಸುಸಜ್ಜಿತ ಸ್ವಂತ ಕಟ್ಟಡದ ಭಾಗ್ಯವೂ ಇಲ್ಲ. ಮೈಸೂರಿನ ಹೊರವಲಯದ ನಾಗನಹಳ್ಳಿಯಲ್ಲಿ ಮಂಜೂರಾಗಿರುವ 55 ಎಕರೆ ಭೂಮಿಯಲ್ಲಿ ಕೆಲ ತರಗತಿ ಕಟ್ಟಡಗಳು ಮಾತ್ರ ತಲೆ ಎತ್ತಿದ್ದು ಆಡಳಿತ ಕಚೇರಿ ಇನ್ನಷ್ಟು ನಿರ್ಮಾ ಣವಾಗಬೇಕಿದೆ. ಸದ್ಯ ಮೈಸೂರಿನ ಬಲ್ಲಾಳ್ ವೃತ್ತದಲ್ಲಿನ ಕಿರುಜಾಗವೇ ವಿವಿಯ ಆಡಳಿತ ಕೇಂದ್ರವಾಗಿದೆ..!

ಅರ್ಹ ಅರ್ಜಿದಾರರ ಕೊರತೆಯಿಂದ ಪ್ರೊ.ನಾಗೇಶ್ ಬೆಟ್ಟಕೋಟೆ ಅವರು ಹಂಗಾಮಿ ಕುಲಪತಿಯಾಗಿ ಮುಂದುವರಿದಿರುವುದರಿಂದ ಅತ್ತ ಕಾಯಂ ಕುಲಪತಿಯೂ, ಇತ್ತ ಕಾಯಂ ನೌಕರರೂ ಇಲ್ಲದೇ ಇಡೀ ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಗೆ ಗರ ಬಡಿದಿದ್ದು ‘ಹೊರಗುತ್ತಿಗೆ ಗ್ರಹಣ’ಕ್ಕೆ ಮೋಕ್ಷ ಸಿಗುವುದೆಂತು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.

Previous articleಹಿಮಾಚಲ ಪ್ರದೇಶ: ಮಳೆ, ಪ್ರವಾಹ, ಭೂಕುಸಿತ, ಮೋದಿ ವೈಮಾನಿಕ ಸಮೀಕ್ಷೆ
Next articleAsia Cup 2025: ಟಿ20 ಕ್ರಿಕೆಟ್ ಟೂರ್ನಿ ಇಂದಿನಿಂದ ಆರಂಭ

LEAVE A REPLY

Please enter your comment!
Please enter your name here