ಕರ್ನಾಟಕದ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಈ ಬಾರಿಯ ದಸರಾ ರಜೆ ಇಲ್ಲ. ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ಕ್ಕೆ ವೇದಿಕೆ ಸಿದ್ಧವಾಗಿದೆ. ‘ನಮ್ಮ ಸಮೀಕ್ಷೆ-ನಮ್ಮ ಜವಾಬ್ದಾರಿ’ ಎಂಬ ಹೆಸರಿನಲ್ಲಿ ಮನೆ ಮನೆ ಸಮೀಕ್ಷೆ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರ ತನಕ ನಡೆಯಲಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎನ್ನುವುದು ರಾಜ್ಯದ ಎಲ್ಲಾ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಂಡು ರಾಜ್ಯದ ನೀತಿ ನಿರೂಪಣೆಯನ್ನು ಕೈಗೊಳ್ಳಲು ಆಧಾರವಾಗಿರುತ್ತದೆ. ಸಮೀಕ್ಷೆ ಕಾರ್ಯವೂ ಈ ನಾಡಿನ ಸೇವೆಯ ಭಾಗವಾಗಿದೆ. ಸಮೀಕ್ಷಾ ಕಾರ್ಯವೂ ಅನುಷ್ಠಾನವಾಗುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಿಂದಲೂ ಹೌದು.
ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2025 ಮನೆ ಮನೆ ಸಮೀಕ್ಷೆ ಇದೇ ತಿಂಗಳು ಸೆಪ್ಟೆಂಬರ್ 22ನೇ ತಾರೀಖಿನಿಂದ ಪ್ರಾರಂಭವಾಗಿ ಅಕ್ಟೋಬರ್ 7 ರವರೆಗೆ ನಡೆಯಲಿದೆ. ಸಮೀಕ್ಷೆಯಲ್ಲಿ ಸುಮಾರು 60 ಪ್ರಶ್ನೆಗಳಿದ್ದು, ಸಮೀಕ್ಷೆ ಕಾರ್ಯವನ್ನು ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆಯ ಆಧಾರದ ಮೇಲೆ ಸಮೀಕ್ಷಾದಾರರು ಸಮೀಕ್ಷೆ ಮಾಡುವುದರಿಂದ, ಸಮೀಕ್ಷಾದಾರರು ಮನೆಗೆ ಭೇಟಿ ನೀಡಿದಾಗ ನೀವು ಪಡಿತರ ಚೀಟಿ, ಆಧಾರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಸಂಖ್ಯೆ, ವಿಕಲಚೇತನರಾಗಿದ್ದರೆ ಯುಐಡಿ ಕಾರ್ಡ್ ಅಥವಾ ಅಂಗವಿಕಲ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ ಸಿದ್ದ ಮಾಡಿ ಇಟ್ಟುಕೊಂಡಿದ್ದರೆ ಸಮೀಕ್ಷೆ ಸುಲಭವಾಗುತ್ತದೆ ಮತ್ತು ವೇಗವಾಗುತ್ತದೆ.
ಕುಟುಂಬದ ಎಲ್ಲಾ ಸದಸ್ಯರಗಳ ಆಧಾರ್ ಕಾರ್ಡ್‌ಗಳು ಯಾವ ಮೊಬೈಲ್ ನಂಬರ್‌ಗಳಿಗೆ ಲಿಂಕ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಸಮೀಕ್ಷೆ ಸಮಯದಲ್ಲಿ ಇ-ಕೆವೈಸಿ ಮಾಡುವಾಗ ಆ ಸದಸ್ಯರ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರಿಗೆ ಒಟಿಪಿ ಬರುತ್ತದೆ. ಸಮೀಕ್ಷೆ ಸಂದರ್ಭದಲ್ಲಿ ಅವರ ಮನೆಯಲ್ಲಿ ಇಲ್ಲದಿದ್ದರೆ ಆ ಸಂದರ್ಭದಲ್ಲಿ ಮನೆಯಲ್ಲಿ ಇರುವ ಸದಸ್ಯರು ಮನೆಯಲ್ಲಿ ಇಲ್ಲದಿರುವ ಸದಸ್ಯರಿಗೆ ಪೋನ್ ಮಾಡಿ ಒಟಿಪಿ ಪಡೆದು ಮಾಹಿತಿ ನೀಡಬೇಕಾಗುತ್ತದೆ.
6 ವರ್ಷ ಮೇಲ್ಪಟ್ಟು ಪಡಿತರ ಚೀಟಿ ಇಲ್ಲದಿರುವ ಮತ್ತು ಪಡಿತರ ಚೀಟಿಯಲ್ಲಿ ಹೆಸರು ಇಲ್ಲದಿರುವ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಆಧಾರ್ ಕಾರ್ಡ್ ಇಲ್ಲದಿದ್ದಲ್ಲಿ ಹತ್ತಿರದ ಆಧಾರ್ ಎನ್ರೊಲ್ ಮೆಂಟ್ ಸೆಂಟರ್ ಗೆ ಭೇಟಿ ನೀಡಿ ನೋಂದಣಿ ಮಾಡಿಸಿ ನೋಂದಣಿ ಸಂಖ್ಯೆಯನ್ನು ಪಡೆಯಬೇಕಿರುತ್ತದೆ.
ಆಧಾರ್ ಕಾರ್ಡ್ ಇದ್ದು ಲಿಂಕ್ ಆಗಿರುವ ಮೊಬೈಲ್ ಪೋನ್ ನಂಬರ್ ಇಲ್ಲದಿದ್ದರೆ ಹತ್ತಿರದ ಆಧಾರ್ ಎನ್ರೊಲ್ ಮೆಂಟ್ ಸೆಂಟರ್‌ಗೆ ಭೇಟಿ ನೀಡಿ ಈಗ ಬಳಸುತ್ತಿರುವ ಮೊಬೈಲ್ ನಂಬರ್ ಗೆ ಲಿಂಕ್ ಮಾಡಿಸಿಕೊಳ್ಳುವುದು. ಪ್ರಶ್ನಾವಳಿಯಲ್ಲಿ ಪ್ರತಿ ಸದಸ್ಯರ ವಿದ್ಯಾರ್ಹತೆ, ಕೌಶಲ್ಯ ತರಬೇತಿಯ ಅಗತ್ಯತೆ, ಆದಾಯ, ಕುಟುಂಬದ ಸ್ಥಿರ ಮತ್ತು ಚರಾಸ್ತಿ ವಿವರಗಳು ಧರ್ಮ, ಜಾತಿ, ಉಪಜಾತಿ ಹಾಗೂ ಕುಲಕಸುಬು ಮುಂತಾದ ವಿಷಯಗಳು ಸೇರಿದಂತೆ ಎಲ್ಲಾ ಪ್ರಶ್ಣೆಗಳಿಗೂ ಕುಟುಂಬದ ಸದಸ್ಯರು ಸರಿಯಾದ ಮಾಹಿತಿಯನ್ನು ನೀಡಲು ತಯಾರಿರಬೇಕಿರುತ್ತದೆ.
ಸಮೀಕ್ಷೆಯ ಪ್ರಶ್ನಾವಳಿ ಬಗ್ಗೆ ಅರಿವು ಮೂಡಿಸಲು ಪದವಿ ವಿಧ್ಯಾರ್ಥಿಗಳ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2025ರ ಸಮೀಕ್ಷಾ ಪೂರ್ವ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿ ಅಗತ್ಯವಿದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ ಅಥವಾ Website ವಿಳಾಸ https://kscbc.karnataka.gov.in ನೋಡಬಹುದಾಗಿದೆ.