ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ: ನೇಮಕಾತಿಗೆ ಪರಿಷ್ಕೃತ ರೋಸ್ಟರ್‌ ನಿಗದಿ

0
43

ಪರಿಶಿಷ್ಟ ಜಾತಿ ಒಳ ಮೀಸಲಾತಿ ಕಲ್ಪಿಸುವ ಕುರಿತು ಆದೇಶವನ್ನು ಹೊರಡಿಸಿದೆ. ಆದ್ದರಿಂದ ಈಗ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಗಳಿಗೆ ಚಾಲನೆ ದೊರೆಯಲಿದೆ. ಒಳ ಮೀಸಲಾತಿ ಕಲ್ಪಿಸಿರುವ ಪರಿಣಾಮವಾಗಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಪರಿಷ್ಕೃತ ಮೀಸಲಾತಿ ರೋಸ್ಟರ್‌ ನಿಗದಿಪಡಿಸಲಾಗಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಚಂದ್ರಶೇಖರ್ ಸರ್ಕಾರದ ವಿಶೇಷ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವಾ ನಿಯಮಗಳು) ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸಿರುವ ಪರಿಣಾಮವಾಗಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಪರಿಷ್ಕೃತ ಮೀಸಲಾತಿ ರೋಸ್ಟರ್‌ ಅನ್ನು ನಿಗದಿಪಡಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಪ್ರಸ್ತಾವನೆ: ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನಿಗದಿಪಡಿಸಲಾದ ಹೆಚ್ಚಿನ ಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ನೇರ ನೇಮಕಾತಿ ಮುಖಾಂತರ ಭರ್ತಿ ಮಾಡುವ ರಿಕ್ತ ಸ್ಥಾನಗಳಿಗೆ ಸಂಬಂಧಿಸಿದಂತೆ ದಿನಾಂಕ 28.12.2022ರ ಸರ್ಕಾರದ ಆದೇಶದಲ್ಲಿ 100 ಬಿಂದುಗಳ ಪರಿಷ್ಕೃತ ರೋಸ್ಟರ್‌ರನ್ನು ನಿಗದಿಪಡಿಸಿ ಆದೇಶಿಸಲಾಗಿರುತ್ತದೆ.

ಪರಿಶಿಷ್ಟ ಜಾತಿಗಳಲ್ಲಿರುವ 101 ಜಾತಿಗಳನ್ನು ಪವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿಗಳೆಂದು 3 ಪ್ರವರ್ಗಗಳಾಗಿ ವರ್ಗೀಕರಿಸಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಗಳಿಗೆ ಪ್ರಸ್ತುತ ಜಾರಿಯಲ್ಲಿರುವ ಶೇಕಡ 17 ಮೀಸಲಾತಿಯನ್ನು, ಪ್ರವರ್ಗ- ಎ ರಲ್ಲಿನ ಸಮುದಾಯಗಳಿಗೆ ಶೇಕಡ 6, ಪ್ರವರ್ಗ-ಬಿ ರಲ್ಲಿನ ಸಮುದಾಯಗಳಿಗೆ ಶೇಕಡ 6 ಮತ್ತು ಪ್ರವರ್ಗ-ಸಿ ರಲ್ಲಿನ ಸಮುದಾಯಗಳಿಗೆ ಶೇಕಡ 5 ರಷ್ಟು ಮೀಸಲಾತಿಯನ್ನು ದಿನಾಂಕ 25.08.2025ರ ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿ ಆದೇಶಿಸಲಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ದಿನಾಂಕ 28.12.2022ರ ಸರ್ಕಾರದ ಆದೇಶದ ಅನುಬಂಧದಲ್ಲಿ ನಿಗದಿಪಡಿಸಿದ 100 ಬಿಂದುಗಳ ಮೀಸಲಾತಿ ರೋಸ್ಟರಿನಲ್ಲಿ ಪರಿಶಿಷ್ಟ ಜಾತಿಗಳಿಗೆ ಗುರುತಿಸಲಾಗಿರುವ 17 ಬಿಂದುಗಳನ್ನು ಪರಿಶಿಷ್ಟ ಜಾತಿಗಳಲ್ಲಿ ವರ್ಗೀಕರಿಸಿರುವ ಪವರ್ಗ-ಎ, ಪ್ರವರ್ಗ-ಬಿ ಮತ್ತು ಪವರ್ಗ-ಸಿ ಎಂದು ಪುನರ್ ವರ್ಗೀಕರಿಸುವ ಸಂದರ್ಭ ಒದಗಿ ಬಂದಿರುತ್ತದೆ ಅದರಂತೆ, ಈ ಕೆಳಕಂಡ ಆದೇಶ.

ಸರ್ಕಾರಿ ಆದೇಶ: ಪರಿಶಿಷ್ಟ ಜಾತಿಗಳಲ್ಲಿರುವ 101 ಜಾತಿಗಳನ್ನು ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪವರ್ಗ-ಸಿ ಗಳೆಂದು 3 ಪ್ರವರ್ಗಗಳಾಗಿ ವರ್ಗೀಕರಿಸಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಗಳಿಗೆ ಪ್ರಸ್ತುತ ಜಾರಿಯಲ್ಲಿರುವ ಶೇಕಡ 17ರಷ್ಟು ಮೀಸಲಾತಿಯನ್ನು, ಪವರ್ಗ-ಎ ರಲ್ಲಿನ ಸಮುದಾಯಗಳಿಗೆ ಶೇಕಡ 6, ಪ್ರವರ್ಗ-ಬಿ ರಲ್ಲಿನ ಸಮುದಾಯಗಳಿಗೆ ಶೇಕಡ 6 ಮತ್ತು ಪವರ್ಗ-ಸಿ ರಲ್ಲಿನ ಸಮುದಾಯಗಳಿಗೆ ಶೇಕಡ 5ರಷ್ಟು ಮೀಸಲಾತಿಯನ್ನು ದಿನಾಂಕ 25.08.2025ರ ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿ ಆದೇಶಿಸಿರುವ ಹಿನ್ನೆಲೆಯಲ್ಲಿ ದಿನಾಂಕ 28.12.2022ರ ಸರ್ಕಾರದ ಆದೇಶದ ಅನುಬಂಧದಲ್ಲಿ ಪರಿಶಿಷ್ಟ ಜಾತಿಗಳಿಗೆ ಗುರುತಿಸಲಾಗಿರುವ 17 ಬಿಂದುಗಳನ್ನು ಮಾತ್ರ ಈ ಆದೇಶದ ಅನುಬಂಧದಲ್ಲಿರುವಂತೆ ಪುನರ್ ವರ್ಗೀಕರಿಸಿ ಆದೇಶಿಸಲಾಗಿದೆ.

ಉಳಿದಂತೆ, ದಿನಾಂಕ 28.12.2022 ರ ಸರ್ಕಾರದ ಆದೇಶದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಈ ಆದೇಶವು ತಕ್ಷಣದಿಂದ ಜಾರಿಗೆ ಬರುತ್ತದೆ. ಯಾವುದೇ ವೃಂದದ ಹುದ್ದೆಗಳಿಗೆ ನೇರ ನೇಮಕಾತಿಯ ಪ್ರಕ್ರಿಯೆಯನ್ನು ದಿನಾಂಕ 28.12.2022ರ ಸದರಿ ಆದೇಶದ ಅನುಬಂಧದಲ್ಲಿ ನಿಗದಿಪಡಿಸಿರುವ 100 ಬಿಂದುಗಳ ರೋಸ್ಟರ್‌ ಅನ್ನು ಅನುಸರಿಸಿ, ರಿಕ್ತ ಸ್ಥಾನಮಾನಗಳನ್ನು ವರ್ಗೀಕರಣ ಮಾಡಿ ಈಗಾಗಲೇ ಪ್ರಾರಂಭಿಸಿದ್ದಲ್ಲಿ ರೋಸ್ಟರಿನ ಯಾವ ಬಿಂದುವಿನವರೆಗೆ ಜಾರಿಗೊಳಿಸಲಾಗಿದೆಯೋ, ಆ ನಂತರದ ರೋಸ್ಟರ್ ಬಿಂದುವಿನಿಂದ ಪ್ರಾರಂಭಿಸಿ ಈ ಆದೇಶದ ಅನುಬಂಧದಲ್ಲಿ ನಿಗದಿಪಡಿಸಿರುವ ರೋಸ್ಟರ್ ಬಿಂದುಗಳನ್ನು ಅನುಸರಿಸಿ ಮುಂದಿನ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳತಕ್ಕದ್ದು.

Previous articleದಾವಣಗೆರೆ-ಬೀದರ್ ರಾಜಹಂಸ ಬಸ್: ಮಾರ್ಗ, ವೇಳಾಪಟ್ಟಿ, ದರ
Next articleಯಡಿಯೂರಪ್ಪ: CKR-45 ಕಾರಿನ ಭಾವನಾತ್ಮಕ ಸಂಬಂಧ ನೆನೆದ ವಿಜಯೇಂದ್ರ‌

LEAVE A REPLY

Please enter your comment!
Please enter your name here