ಚಿತ್ರದುರ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಣೆ ಕ್ರಮಕ್ಕೆ ಚಿತ್ರದುರ್ಗ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು. “ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮತ್ತು ಗ್ರಾಮೀಣ ರಸ್ತೆಗಳಲ್ಲಿ ಹಾಗೂ ಬ್ಲಾಕ್ ಸ್ಪಾಟ್‍ಗಳಲ್ಲಿ ಅಗತ್ಯ ರಸ್ತೆ ಸುರಕ್ಷತಾ ಕ್ರಮಗಳಾದ ಸೂಚನಾ ಫಲಕಗಳು, ಹಂಪ್ಸ್, ರಂಬಲ್ ಸ್ಟ್ರೀಪ್ಸ್, ಕ್ಯಾಟ್ ಐಸ್ ಮತ್ತು ಬ್ಲಿಂಕರ್ಸ್ ಅಳವಡಿಕೆ ಸೇರಿದಂತೆ ಅಗತ್ಯ ರಸ್ತೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಟೋಲ್ ಸಂಗ್ರಹ: “ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಒಪ್ಪಂದದ ಅನುಸಾರ ಟೋಲ್ ಅನ್ನು ಸಂಗ್ರಹಿಸಲಾಗುತ್ತಿದೆ. ಕೆಲವೆಡೆ ರಸ್ತೆಗಳು ಬಹಳಷ್ಟು ಹಾಳಾಗಿದ್ದು, ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ” ಎಂದರು.
“ರಸ್ತೆ ಕಾಮಗಾರಿಗಳಿಗಾಗಿ ಮಾರ್ಗ ಬದಲಾಯಿಸಿ, ಸಂಚಾರ ದಟ್ಟಣೆ ಹಾಗೂ ಅಪಘಾತಗಳು ಕೂಡ ಸಂಭವಿಸುತ್ತಿವೆ. ಟೋಲ್ ಸಂಗ್ರಹಣೆ ಕೇಂದ್ರಗಳ ಪೈಕಿ ಅರ್ಧದಷ್ಟು ಕೇಂದ್ರಗಳನ್ನು ಬಂದ್ ಮಾಡಿ, ಕೇವಲ ಒಂದೆರಡು ಕೇಂದ್ರಗಳನ್ನು ಮಾತ್ರ ತೆರೆಯುವುದರಿಂದ, ವಾಹನ ದಟ್ಟಣೆ ಉಂಟಾಗುತ್ತಿದೆ” ಎಂದು ಸಭೆಯಲ್ಲಿ ತಿಳಿಸಿದರು.
“ವಿಐಪಿ, ಅಂಬ್ಯುಲೆನ್ಸ್ ವಾಹನಗಳು ಸಂಚರಿಸುವ ಮಾರ್ಗದಲ್ಲಿ ಲಾರಿ, ಟ್ರಕ್‍ಗಳು ಕೂಡ ಪ್ರವೇಶ ಮಾಡುತ್ತಿವೆ. ಇದರಿಂದಾಗಿ ವಿಐಪಿ, ಅಂಬ್ಯುಲೆನ್ಸ್ ಟೋಲ್ ಮಾರ್ಗ ಪ್ರವೇಶಿಸಲು ಕಾಯುವಂತಹ ಸ್ಥಿತಿ ಇರುತ್ತದೆ” ಎಂದರು.
“ರಸ್ತೆಗಳು ಸಮರ್ಪಕವಾಗಿ ಇಲ್ಲದೇ ಇರುವ ಸಂದರ್ಭಗಳಲ್ಲಿ ಟೋಲ್ ಸಂಗ್ರಹ ಮಾಡಬಾರದು ಎಂಬುದಾಗಿ ಇತ್ತೀಚೆಗೆ ನ್ಯಾಯಾಲಯ ತೀರ್ಪು ನೀಡಿದೆ. ಹೀಗಿದ್ದಾಗ, ರಸ್ತೆ ಸರಿ ಇಲ್ಲದ ಕಡೆಗಳಲ್ಲಿ ಟೋಲ್ ಏಕೆ ಸಂಗ್ರಹಿಸುತ್ತೀರಿ?” ಎಂದು ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಸಂಚಾರ ದಟ್ಟಣೆ: “ಹಿರಿಯೂರು ನಗರಕ್ಕೆ ಒಳ ಬರುವ ಮತ್ತು ಹೊರ ಹೋಗುವ ರಸ್ತೆಯ ಎರಡು ಬದಿಗಳಲ್ಲಿ ಅನಧಿಕೃತ ಅಂಗಡಿಗಳು ಇರುವುದರಿಂದ ಲಾರಿಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ವಾಹನಗಳ ಅಡಚಣೆ ಉಂಟಾಗುತ್ತಿದ್ದು, ಈ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲು ಕ್ರಮವಹಿಸಬೇಕು” ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
“ಅದೇ ರೀತಿ ಜಿಲ್ಲಾ ವ್ಯಾಪ್ತಿಯೊಳಗಿನ ರಾಷ್ಟ್ರೀಯ ಹೆದ್ದಾರಿಯ ಟೋಲ್ ಸಂಗ್ರಹಣಾ ಸ್ಥಳಗಳ ಎರಡೂ ಬದಿಗಳಲ್ಲಿ ಅನಧಿಕೃತವಾಗಿ ಗೂಡಂಗಡಿಗಳು ನಿರ್ಮಾಣಗೊಂಡಿದ್ದು, ಇಲ್ಲಿ ಕೂಡ ವಾಹನಗಳು ಪಾರ್ಕಿಂಗ್ ಮಾಡಿ, ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿವೆ” ಎಂದರು.
“ಈ ಅಂಗಡಿಗಳಿಗೆ ಯಾವುದೇ ಅನುಮತಿ ಇಲ್ಲ. ಹೀಗಾಗಿ ಕೂಡಲೇ ಇಂತಹ ಅಂಗಡಿಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕ್ರಮ ಕೈಗೊಳ್ಳಬೇಕು. ರಸ್ತೆ ಬದಿಯಲ್ಲಿ ನಿಲ್ಲಿಸುತ್ತಿರುವ ಲಾರಿಗಳು ಪಾರ್ಕಿಂಗ್ ಮಾಡದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಂತೆ ಉಪ ಸಮಿತಿ ರಚನೆ ಮಾಡಿ, ಪಾರ್ಕಿಂಗ್ ಮಾಡುತ್ತಿರುವ ಲಾರಿಗಳನ್ನು ವಶಪಡಿಸಿಕೊಳ್ಳುವುದು, ಅನಧಿಕೃತ ಅಂಗಡಿಗಳ ಲೈಸೆನ್ಸ್ ಪರಿಶೀಲಿಸಿ, ನೀರು ಮತ್ತು ವಿದ್ಯುತ್ ಸರಬರಾಜು ತಡೆಹಿಡಿಯುವಂತೆ” ಅಧಿಕಾರಿಗಳಿಗೆ ತಿಳಿಸಿದರು.