ಬೆಂಗಳೂರು: 3000 ಬಿಎಂಟಿಸಿ ಬಸ್‌ಗಳ ವೇಳಾಪಟ್ಟಿ ಪರಿಷ್ಕರಣೆ

0
60

ಬೆಂಗಳೂರು ನಗರದ ಜನರ ಜೀವನಾಡಿ ಬಿಎಂಟಿಸಿ ಬಸ್‌. ಅಪಘಾತಗಳ ಕಾರಣಕ್ಕೆ ಈಗ ಬಿಎಂಟಿಸಿ ಸದಾ ಸುದ್ದಿಯಲ್ಲಿದೆ. ಆದ್ದರಿಂದ ಚಾಲಕರ ಮೇಲಿನ ಒತ್ತಡ ಕಡಿಮೆ ಮಾಡಲು ಕ್ರಮ ಕೈಗೊಂಡಿದ್ದು, ಅಪಘಾತರಹಿತ ಚಾಲನೆ ಮಾಡಿದವರಿಗೆ ಪುರಸ್ಕಾರವನ್ನು ಘೋಷಣೆ ಮಾಡಲಾಗಿದೆ.

ಬಿಎಂಟಿಸಿ ಬಸ್‌ ಅಪಘಾತಗಳಿಂದಾಗಿ 2024ರಿಂದ ಇದುವರೆಗೂ ಸುಮಾರು 80 ಜನರು ಮೃತಪಟ್ಟಿದ್ದು ಅಪಘಾತ ತಡೆಗಟ್ಟಲು ಮತ್ತು ಚಾಲಕರ ಮೇಲಿನ ಒತ್ತಡ ಕಡಿಮೆ ಮಾಡಲು ನಿಗಮವು ಸುಮಾರು 3,000 ಬಿಎಂಟಿಸಿ ಬಸ್ ಮಾರ್ಗಗಳವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ.

ಕೆಲಸದ ಸಮಯದಲ್ಲಿ ಬದಲಾವಣೆ ಇಲ್ಲದಿರುವುದು ಮತ್ತು ಕರ್ತವ್ಯದ ಸಮಯ ಮೀರಿ ಕೆಲಸ ಮಾಡುತ್ತಿರುವುದು ಚಾಲಕರಿಗೆ ಒತ್ತಡ ಹೆಚ್ಚಾಗುವಂತೆ ಮಾಡಿದ್ದು ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ ಎಂದು ಚಾಲಕರು ಹಾಗೂ ಕಾರ್ಮಿಕ ಸಂಘಟನೆಗಳು ತಿಳಿಸಿವೆ.

ಬೆಳಗ್ಗೆ 6 ಗಂಟೆಗೆ ಕರ್ತವ್ಯ ಪ್ರಾರಂಭಿಸುವ ಚಾಲಕನನ್ನು ಮಧ್ಯಾಹ್ನ 3 ಗಂಟೆಗೆ ಕರ್ತವ್ಯದಿಂದ ಬಿಡುಗಡೆ ಮಾಡಬೇಕು. ಆದರೆ, ನಿಯೋಜಿಸಲಾದ ಒಟ್ಟು ಟ್ರಿಪ್‌ಗಳನ್ನು ಪೂರ್ಣಗೊಳಿಸಲು ಆತ ಇನ್ನು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಬೇಕಾಗಿ ಬರುತ್ತಿದೆ. ಹೀಗಾಗಿ ಚಾಲಕರು ಟ್ರಿಪ್‌ಗಳನ್ನು ಬೇಗನೆ ಮುಗಿಸುವ ಒತ್ತಡದ ಲ್ಲಿದ್ದು, ಅಪಘಾತಗಳಿಗೆ ಕಾರಣವಾಗುತ್ತದೆ. ನಿಗಮವು ಚಾಲಕ ಒತ್ತಡ ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದು, ಇದುವರೆಗೂ ಯಾವ ಕ್ರಮವು ಕೈಗೊಂಡಿಲ್ಲ ಎಂದು ನಿಗಮದ ವಿರುದ್ಧ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಹಾರ ನೀಡಬೇಕು: ಕಾರ್ಮಿಕರ ಕಾಯ್ದೆಯ ಪ್ರಕಾರ ಚಾಲಕನಿಗೆ ಕೇವಲ 8 ಗಂಟೆಗಳ ಕೆಲಸ ಮಾತ್ರ ನೀಡಬೇಕು. ಕೆಲಸದ ಸಮಯ ಎಂಟು ಗಂಟೆ ಮೀರಿದರೆ ಹೆಚ್ಚುವರಿ ಗಂಟೆಗಳಿಗೆ ಚಾಲಕನಿಗೆ ಪರಿಹಾರ ನೀಡಬೇಕು. ಆದರೆ, ನಿಗಮವು ಸಮಯವನ್ನು ಲೆಕ್ಕಿಸದೆ ಟ್ರಿಪ್‌ಗಳಿಗೆ ಅನುಸಾರ ವೇತನ ನೀಡುತ್ತದೆ. ಚಾಲಕರು ಕನಿಷ್ಟ 2 ಗಂಟೆಗಳ ಕಾಲ ಹೆಚ್ಚುವರಿ ಕೆಲಸ ಮಾಡುತ್ತಾರೆ. ಆದರೆ, ಅವರಿಗೆ ಇದಕ್ಕೆ ಯಾವುದೇ ಹಣ ನೀಡುವುದಿಲ್ಲ ಎಂದು ವಿಜಯ ಭಾಸ್ಕರ್, ಕಾರ್ಮಿಕರ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಆರೋಪಿಸಿದ್ದಾರೆ.

ಚಾಲಕರ ಬೇಡಿಕೆಗಳು ಏನೇನು?: ರಸ್ತೆ, ಮೆಟ್ರೋ ಕಾಮಗಾರಿಗಳು, ಗುಂಡಿಗಳು, ವೇಗ ತಡೆಗಳ ಸಂಖ್ಯೆ, ಬಸ್‌ನಿಲ್ದಾಣಗಳ ಸಂಖ್ಯೆ ಮತ್ತು ಬಸ್‌ಗಳ ಲೋಡ್ ಸೇರಿದಂತೆ ಮುಂತಾದ ಎಲ್ಲಾ ಅಂಶಗಳನ್ನು ಪರಿಗಣಿಸಿ, ಫಾರ್ಮ್ 4ರ ನಿಯತಕಾಲಿಕ ವೈಜ್ಞಾನಿಕ ಪರಿಷ್ಕರಣೆ ಮತ್ತು ಚಾಲಕರು ಎಂಟು ಗಂಟೆಗಳಲ್ಲಿ ತಮ್ಮ ಕರ್ತವ್ಯ ಪೂರ್ಣಗೊಳಿಸುವ ರೀತಿಯಲ್ಲಿ ಟ್ರಿಪ್‌ಗಳ ಸಂಖ್ಯೆಯನ್ನು ನೀಡಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ.

ಸಮಯ ಹೆಚ್ಚಳ: ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ರಸ್ತೆ ಮತ್ತು ಮೆಟ್ರೋ ಕಾಮಗಾರಿಗಳು, ರಸ್ತೆ ತಿರುವುಗಳು ಪ್ರಯಾಣದ ಸಮಯವನ್ನು ಹೆಚ್ಚಿಸಿದ್ದು, ಅದಕ್ಕೆ ಅನುಗುಣವಾಗಿ, ಸುಮಾರು 3,000 ಬಸ್‌ಗಳ ವೇಳಾಪಟ್ಟಿಗಳನ್ನು ಪರಿಷ್ಕರಿಸಲಾಗಿದೆ. ಬಸ್‌ಗಳಲ್ಲಿ ಅಳವಡಿಸಲಾದ ಸ್ವಯಂಚಾಲಿತ ವಾಹನ ಟ್ರಾಕಿಂಗ್ ವ್ಯವಸ್ಥೆ ಆಧರಿಸಿ ಸಮಯ ಪರಿಷ್ಕರಿಸಲಾಗಿದೆ ಎಂದು ಪ್ರಭಾಕರ್ ರೆಡ್ಡಿ, ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಹೇಳಿದ್ದಾರೆ.

ಬಿಎಂಟಿಸಿ ಬಸ್‌ಗಳಿಂದ 2024ರಲ್ಲಿ 190 ಅಪಘಾತವಾಗಿದ್ದು, 42 ಜನರು ಸಾವನ್ನಪ್ಪಿದ್ದಾರೆ. 32 ಜನರಿಗೆ ಗಾಯವಾಗಿದೆ. 2025ರಲ್ಲಿ 121 ಅಪಘಾತಗಳಾಗಿದ್ದು, 38 ಜನರು ಸಾವನ್ನಪ್ಪಿದ್ದಾರೆ, 91 ಜನರು ಗಾಯಗೊಂಡಿದ್ದಾರೆ.

Previous articleರಾಯಚೂರು: ಲಾರಿ ಹರಿದು ವ್ಯಕ್ತಿ ಸಾವು
Next articleಮಡಿಕೇರಿ ದಸರಾ 2025; ಹೇಗೆ ನಡೆಯುತ್ತಿದೆ ತಯಾರಿ?

LEAVE A REPLY

Please enter your comment!
Please enter your name here