GST ದರ ಕಡಿತ: ಪರಿಹಾರಕ್ಕೆ ಕರ್ನಾಟಕ ಸೇರಿ 8 ರಾಜ್ಯಗಳ ಬೇಡಿಕೆಗಳು

0
50

GST ದರವನ್ನು ಕಡಿತ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಜಿಎಸ್‍ಟಿ ತೆರಿಗೆ ದರದ ತರ್ಕಬದ್ದಗೊಳಿಸುವಿಕೆಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಶುಕ್ರವಾರ ಮಹತ್ವದ ಸಮಾಲೋಚನಾ ಸಭೆ ನಡೆಯಿತು.

ವಿರೋಧ ಪಕ್ಷಗಳು ಆಡಳಿತದಲ್ಲಿರುವ ದೇಶದ ಕರ್ನಾಟಕ ಸೇರಿ 7 ರಾಜ್ಯಗಳ ಪ್ರತಿನಿಧಿಗಳು ಜಿಎಸ್‌ಟಿ ತೆರಿಗೆ ದರವನ್ನು ತರ್ಕಬದ್ದಗೊಳಿಸುವಿಕೆಗೆ ಸಂಬಂಧಿಸಿದಂತೆ ನಡೆದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಹಿಮಾಚಲ ಪ್ರದೇಶ, ಜಾರ್ಖಂಡ್‌, ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಮಂತ್ರಿಗಳು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ರಾಜ್ಯಗಳ ಬೇಡಿಕೆಗಳನ್ನು ಸಲ್ಲಿಕೆ ಮಾಡಿದರು.

ಸಭೆಯಲ್ಲಿ ಹಾಜರಿದ್ದ ಎಲ್ಲಾ ಮಂತ್ರಿಗಳು ಮತ್ತು ಪ್ರತಿನಿಧಿಗಳು, ಕೇಂದ್ರ ಸರ್ಕಾರದ ಪ್ರಸ್ತುತ ಪ್ರಸ್ತಾವನೆಯಿಂದ ರಾಜ್ಯಗಳಿಗೆ ಉಂಟಾಗಬಹುದಾದ ಗಣನೀಯ ಪ್ರಮಾಣದ ರಾಜಸ್ವ ನಷ್ಟದ ಬಗ್ಗೆ ತೀವ್ರ ಕಳಕಳಿಯನ್ನು ವ್ಯಕ್ತಪಡಿಸಿದರು, ಪರಿಹಾರಕ್ಕಾಗಿ ಬೇಡಿಕೆ ಇಟ್ಟರು. 8 ರಾಜ್ಯ ಸರ್ಕಾರಗಳ ಕರಡು ಪ್ರಸ್ತಾವನೆಯ ಕುರಿತು ವಿವರವಾದ ಚರ್ಚೆ ನಡೆಯಿತು. ರಾಜ್ಯಗಳ ರಾಜಸ್ವದ ಹಿತಾಸಕ್ತಿಗಳನ್ನು ಕಾಪಾಡುವ ಜೊತೆಗೆ ಜಿಎಸ್‍ಟಿ ದರ ತರ್ಕಬದ್ದ ಗೊಳಿಸುವಿಕೆಯನ್ನು ಸಾಧಿಸಲು ಈ ಕರಡು ಪ್ರಸ್ತಾವನೆ ಸಹಾಯಕವಾಗುತ್ತದೆ ಎಂಬ ಒಮ್ಮತದ ಅಭಿಪ್ರಾಯಕ್ಕೆ ಬರಲಾಯಿತು.

ಎಲ್ಲಾ ಭಾಗೀದಾರರಿಗೆ ಪರಸ್ಪರ ಅನುಕೂಲಕರ ಪರಿಣಾಮ ಉಂಟಾಗುವ ದೃಷ್ಟಿಯಿಂದ, 8 ರಾಜ್ಯಗಳು ಕೇಂದ್ರ ಸರ್ಕಾರ ಮತ್ತು ಇತರೆ ರಾಜ್ಯ ಸರ್ಕಾರಗಳೊಂದಿಗೆ ಸಹಕರಿಸಲು ಉತ್ಸುಕವಾಗಿವೆ. ಮುಂಬರುವ ಜಿಎಸ್‍ಟಿ ಮಂಡಳಿಯ ಸಭೆಯ ಕಾರ್ಯಕಲಾಪದಲ್ಲಿ ಇದನ್ನು ಸೇರಿಸಲು ಮತ್ತು ಇತರೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರವು ಈ ಪ್ರಸ್ತಾವನೆಗೆ ಬೆಂಬಲ ನೀಡುವಂತೆ ಕೋರಲು ಸಭೆಯಲ್ಲಿ ಜಂಟಿಯಾಗಿ ತೀರ್ಮಾನಿಸಲಾಗಿದೆ.

ರಾಜ್ಯಗಳಿಗಿರುವ ಆತಂಕದ ಅಂಶಗಳು

  • ರಾಜ್ಯಗಳು ಜಿಎಸ್‌ಟಿಯನ್ನೇ ತಮ್ಮ ಆದಾಯದ ಮೂಲ ಆಧಾರವಾಗಿ ಹೆಚ್ಚಾಗಿ ಅವಲಂಬಿಸಿವೆ. ಆದರೆ ಕೇಂದ್ರ ಸರ್ಕಾರದ ಸ್ಥಿತಿ ಹಾಗಲ್ಲ. ಅದಕ್ಕೆ ನೇರ ತೆರಿಗೆ, ಸಾರ್ವಜನಿಕ ಉದ್ದಿಮೆಗಳ ಡಿವಿಡೆಂಡ್ (ಲಾಭಾಂಶ), ಕಸ್ಟಮ್ಸ್ ಮತ್ತು ಅಬಕಾರಿ ಸುಂಕಗಳು, ಸೆಸ್ ಮತ್ತು ಸರಛಾರ್ಜ್ ತರಹದ ಹಲವು ಆದಾಯದ ಮೂಲಗಳಿವೆ.
  • ಕೇಂದ್ರದ ಜಿಎಸ್‌ಟಿ ಸಂಗ್ರಹಗಳು ಅದರ ಸ್ವಂತ ತೆರಿಗೆ ಆದಾಯದ ಸುಮಾರು ಶೇಕಡ 28ರವರೆಗೆ ಹೊಂದಿವೆ. ಆದರೆ ರಾಜ್ಯಗಳು ಜಿಎಸ್‌ಟಿಯನ್ನು ಹೆಚ್ಚಾಗಿ ಅವಲಂಬಿಸಿವೆ. ಇದು ಅವುಗಳ ಸ್ವಂತ ತೆರಿಗೆ ಆದಾಯದ ಅರ್ಧದಷ್ಟು ಭಾಗವನ್ನು ಹೊಂದಿರಬಹುದು. ಆದ್ದರಿಂದ, ದರಗಳಲ್ಲಿ ಕಡಿತವು ರಾಜ್ಯಗಳ ಆದಾಯ ಸ್ವೀಕೃತಿಗಳಲ್ಲಿ ಮಹತ್ವದ ಅನಿಶ್ಚಿತತೆಯನ್ನು ಉಂಟುಮಾಡುತ್ತದೆ ಮತ್ತು ಅವುಗಳ ಹಣಕಾಸು ಸ್ಥಿರತೆಯನ್ನು ಹದಗೆಡಿಸುತ್ತದೆ.
  • ಜಿಎಸ್‌ಟಿ ದರ ತರ್ಕಬದ್ಧಗೊಳಿಸುವಿಕೆಯ ಜಾರಿ ಮತ್ತು ಪರಿಹಾರ ಸೆಸ್‍ನಲ್ಲಿಸುವುದರಿಂದ ಉಂಟಾಗಬಹುದಾದ ಆದಾಯ ನಷ್ಟದ ಅಂದಾಜನ್ನು ಭಾರತ ಸರ್ಕಾರ ನೀಡಿಲ್ಲ. ಹಲವು ಹಣಕಾಸು ಸಂಶೋಧನಾ ಕೇಂದ್ರಗಳು ನೀಡಿರುವ ಅಂದಾಜಿನ ಮಾಹಿತಿಯಂತೆ ಇದು ವಾರ್ಷಿಕವಾಗಿ ರೂ.85,000 ಕೋಟಿಗಳಿಂದ ರೂ.2,00,000 ಕೋಟಿಗಳಿಗೂ ಮೀರುತ್ತದೆ. ರಾಜ್ಯಗಳಿಗೆ ಅವುಗಳ ಹಣಕಾಸು ಯೋಜನೆ ಮತ್ತು ಆರ್ಥಿಕ ನಿಯಂತ್ರಣದ ಮೇಲೆ ಗಮನಾರ್ಹ ಅನಿಶ್ಚಿತತೆಯನ್ನು ಈ ಅಸ್ಪಷ್ಟತೆಯು ತಂದೊಡ್ಡಿದೆ.

ಜಿಎಸ್‌ಟಿ ಹಿನ್ನೆಲೆ: ದೇಶಾದ್ಯಂತ ಏಕೀಕೃತ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಪ್ರಾರಂಭಿಸುವ ಉದ್ದೇಶದಿಂದ ಜುಲೈ 2017ರಲ್ಲಿ ಜಿಎಸ್‌ಟಿಯನ್ನು ಜಾರಿಗೆ ತರಲಾಯಿತು. ಆದಾಯ ತಟಸ್ಥತೆಯ ತತ್ವವು ಈ ವಿನ್ಯಾಸದ ಕೇಂದ್ರ ಬಿಂದುವಾಗಿತ್ತು. 5 ವರ್ಷಗಳ ಅವಧಿಗೆ ಯಾವುದೇ ಆದಾಯದ ಕೊರತೆಯ ಎದುರು ರಾಜ್ಯಗಳಿಗೆ ಆದಾಯ ರಕ್ಷಣೆಯನ್ನು ಖಾತರಿಪಡಿಸಲು ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ಕಾಯ್ದೆ, 2017 ಅನ್ನು ಜಾರಿಗೆ ತರಲಾಯಿತು.

ರಾಜ್ಯಗಳ ಹಣಕಾಸಿನ ಅಧಿಕಾರಗಳನ್ನು ಗಮನಾರ್ಹವಾಗಿ ಜಿಎಸ್‌ಟಿಯು ತನ್ನೊಳಗೆ ವಿಲೀನಗೊಳಿಸಿಕೊಳ್ಳುತ್ತದೆ ಮತ್ತು ಸಹಕಾರಿ ಒಕ್ಕೂಟವನ್ನು ಸಂರಕ್ಷಿಸಲು ಪರಿಹಾರ ಕಾರ್ಯವಿಧಾನವು ಅತ್ಯಗತ್ಯವಾಗಿ ಬೇಕಾಗುತ್ತದೆ ಎಂಬ ಅಂಶವು ಆಗಲೇ ಸ್ಪಷ್ಟವಾಗಿತ್ತು. ಜಿಎಸ್‌ಟಿ ಜಾರಿಯಾದಾಗಿನಿಂದ ಹಲವಾರು ಬಾರಿ ದರಗಳ ತರ್ಕಬದ್ಧ ಗೊಳಿಸುವಿಕೆಯಾಗಿರುತ್ತದೆ. ಕೇಂದ್ರ ಸರ್ಕಾರದ ಈಗಿನ ಪ್ರಸ್ತಾವನೆಯು ದರ ಹಂತಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದು ಮತ್ತು ಹಲವು ಬಾಬ್ತುಗಳನ್ನು ಕೆಳಹಂತಗಳಿಗೆ ತರುವ ಪ್ರಕ್ರಿಯೆಗೆ ಸಂಬಂಧಿಸಿದ್ದು ಒಟ್ಟಾರೆ ಜಿಎಸ್‌ಟಿ ದರಗಳ ಸಂರಚನೆಯನ್ನು ಸರಳೀಕರಿಸುವುದಕ್ಕೆ ಸಂಬಂಧಿಸಿರುತ್ತದೆ.

ಆದರೆ, ಇಲ್ಲಿಯವರೆಗಿನ ಪ್ರತಿಯೊಂದು ಸುತ್ತಿನ ತರ್ಕಬದ್ಧಗೊಳಿಸುವಿಕೆಯು ಈ ಆದಾಯ ನಷ್ಟಗಳನ್ನು ಸರಿದೂಗಿಸಲು ನಿರೀಕ್ಷಿಸಲಾದ ಪ್ಲವನತೆಯು (buoyancy) ಕಾರ್ಯರೂಪಕ್ಕೆ ಬಂದಿಲ್ಲವಾದ್ದರಿಂದ ರಾಜ್ಯದ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ದರಗಳ ತರ್ಕಬದ್ಧಗೊಳಿಸುವಿಕೆಯಿಂದಾಗಿ ಆರ್ಥಿಕ ವರ್ಷ 2018 ಮತ್ತು 2024ರ ನಡುವೆ ನಿವ್ವಳ ಪರಿಣಾಮಕಾರಿ ಜಿಎಸ್‌ಟಿ ದರವು ಶೇ.14.4 ರಿಂದ ಶೇ.11.6ಕ್ಕೆ ಕುಸಿದಿದೆ ಎಂಬುದಾಗಿ ಅಂದಾಜಿಸಲಾಗಿದೆ.

Previous articleಗದಗ: ಪೊಲೀಸರ ಸುಪರ್ದಿಯಲ್ಲಿ ಗಣೇಶನ ಮೂರ್ತಿ ವಿಸರ್ಜನೆ, ತನಿಖೆಗೆ ಆದೇಶ
Next articleಬೆಳ್ಳಂಬೆಳಗ್ಗೆ ಬೆಳಗಾವಿಯಲ್ಲಿ ಗುಂಡಿನ ಸದ್ದು: ಗ್ಯಾಂಗ್ ರೇಪ್ ಆರೋಪಿ ಕಾಲಿಗೆ ಗುಂಡೇಟು

LEAVE A REPLY

Please enter your comment!
Please enter your name here