ಮೈಸೂರು ವಿಶ್ವವಿಖ್ಯಾತ ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಆಯ್ಕೆ ಮಾಡಿದ ಬಳಿಕ ಪರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೂ ಇದೀಗ ಚಾಮುಂಡಿ ಆಸ್ತಿ ವಿವಾದದ ಅಲೆ ಎದ್ದಿದೆ. ಇದರಿಂದಾಗಿ ರಾಜಮನೆತನ ಮತ್ತು ಸಿದ್ದರಾಮಯ್ಯ ನೇತ್ವತ್ವದ ಸರ್ಕಾರದ ಮಧ್ಯೆ ಸಮರ ಶುರವಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, “ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಆಸ್ತಿ ಅಲ್ಲ. ಎಲ್ಲಾ ವರ್ಗದವರು ಬರುತ್ತಾರೆ. ಇದು ಸರ್ಕಾರದ ಆಸ್ತಿ” ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿರುವುದಲ್ಲದೆ ರಾಜಮನೆತನದಿಂದ ಆಕ್ರೋಶ ಕೂಡ ವ್ಯಕ್ತವಾಗಿದೆ.
ಏನಿದು ವಿವಾದ?: 2024ರಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಮಾದರಿಯಲ್ಲಿ ಚಾಮುಂಡಿಬೆಟ್ಟ ಪ್ರಾಧಿಕಾರವನ್ನು ರಚಿಸಿತು. ಇದಾದ ಬಳಿಕ ಚಾಮುಂಡಿ ಬೆಟ್ಟದಲ್ಲಿಯೇ ಚಾಮುಂಡಿಬೆಟ್ಟದ ಪ್ರಾಧಿಕಾರದ ಸಭೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಿದರು. ಇದಕ್ಕೆ ರಾಜಮನೆತನದ ಪ್ರಮೋದಾದೇವಿ ಹೈಕೋರ್ಟ್ ಮೊರೆ ಹೋದರು. ಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ಮಧ್ಯಂತರ ಆದೇಶ ಹೊರಡಿಸಿತು.
ಬಹಿರಂಗ ಪತ್ರ ಬರೆದ ಪ್ರಮೋದಾದೇವಿ: ಪ್ರಮೋದಾದೇವಿ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದು, ಸರ್ಕಾರ ನಡೆಸಲು ಉದ್ದೇಶಿಸಿರುವ ದಸರಾ ಆಚರಣೆಗಳು, ವಿಶೇಷವಾಗಿ ಪವಿತ್ರ ಚಾಮುಂಡೇಶ್ವರಿ ದೇವಸ್ಥಾನದ ಸುತ್ತ ರಾಜಕೀಯವು ನಡೆಯುತ್ತಿರುವ ಸಂಗತಿ ತೀವ್ರ ಬೇಸರ ತಂದಿದೆ.
ಉದ್ಘಾಟನೆಗೆ ಆಹ್ವಾನಿಸಲಾದ ಗಣ್ಯರ ಆಯ್ಕೆಯ ಬಗ್ಗೆ ಭಿನ್ನಾಭಿಪ್ರಾಯಗಳಿಗೆ ಎಡೆಮಾಡಿದ್ದು ಇದನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ಧರ್ಮಕ್ಕೆ ಸೇರಿಲ್ಲ ಎಂಬಂತಹ ಹೇಳಿಕೆಗಳು ಅನಗತ್ಯ.
ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ಪದ್ಧತಿಗನುಗುಣವಾಗಿ ಪೂಜೆ ಆಚರಣೆ ನಡೆದರೂ ಹಿಂದಿನಿಂದಲೂ ಅನ್ಯ ಧರ್ಮೀಯರಿಗೆ ಪ್ರವೇಶವಿತ್ತು ಮತ್ತು ಈಗಲೂ ಇದೆ. ಅದು ಹಿಂದೂ ದೇವಸ್ಥಾನವಲ್ಲದಿದ್ದರೆ, ಅದನ್ನು ಎಂದಿಗೂ ಮುಜರಾಯಿ ಇಲಾಖೆಯ ಅಡಿಯಲ್ಲಿ ತರಲಾಗುತ್ತಿರಲಿಲ್ಲ ಎಂದು ಪ್ರಮೋದಾದೇವಿ ತಿಳಿಸಿದ್ದಾರೆ.
ಚಾಮುಂಡಿ ಹಿಂದೂಗಳ ಆಸ್ತಿ: ವಿವಾದದ ಕುರಿತು ಮಾತನಾಡಿದ ರಾಜವಂಶಸ್ಥ, ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್, “ಡಿ.ಕೆ.ಶಿವಕುಮಾರ್ ಆರ್‍ಎಸ್‍ಎಸ್ ಹಾಡು ಹಾಡಿ ವಿರೋಧಕ್ಕೆ ಗುರಿಯಾಗಿದ್ದರು. ಇದನ್ನು ಮರೆ ಮಾಚಲು ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಹೇಳಿಕೆ ನೀಡಿರಬಹುದು. ಇದೊಂದು ಹಾಸ್ಯಸ್ಪದ ಹೇಳಿಕೆ” ಎಂದು ಹೇಳಿದ್ದಾರೆ.
“ದೇವಾಲಯ ಹಿಂದೂಗಳದ್ದೇ ಆಗಿತ್ತು. ಮುಂದೆಯೂ ಹಿಂದೂಗಳದ್ದೇ ಆಗಿರುತ್ತದೆ. ಕಾಂಗ್ರೆಸ್ ಯಾವಾಗಲೂ ಹಿಂದೂ ಭಾವನೆಗಳಿಗೆ ಧಕ್ಕೆ ತಂದು ತನ್ನ ನಕಲಿ ಜಾತ್ಯತೀತ ಪ್ರದರ್ಶನ ಮಾಡುತ್ತಿದೆ. ಕರ್ನಾಟಕದ ಜನರು ಎಲ್ಲ ಧರ್ಮಗಳನ್ನೂ ಗೌರವಿಸುತ್ತಾರೆ. ಆದರೆ ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಯನ್ನು ಸಹಿಸುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ.