ಹುಬ್ಬಳ್ಳಿ-ಜೋಧಪುರ್ ನಡುವೆ ನೇರ ರೈಲು ಬೇಕು ಎಂಬ ಬೇಡಿಕೆಗೆ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ ಮತ್ತು ಜೋಧಪುರ್ ನಡುವೆ ಸೆಪ್ಟೆಂಬರ್ ತಿಂಗಳಿನಿಂದ ರೈಲು ಸೇವೆ ಆರಂಭವಾಗಲಿದೆ, ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಕುರಿತು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ‘ಗಣೇಶ ಹಬ್ಬದ ಈ ಶುಭ ಸಂದರ್ಭದಲ್ಲಿ ಹುಬ್ಬಳ್ಳಿಯ ಜನತೆಗೆ ಸಂತಸದ ವಿಷಯ. ನಮ್ಮ ಭಾಗದ ಬಹು ಜನರ ಬೇಡಿಕೆಯಾಗಿದ್ದ ಹುಬ್ಬಳ್ಳಿ- ಜೋಧಪುರ್ ನೇರ ರೈಲು ಮುಂದಿನ ತಿಂಗಳಿನಿಂದ ಪ್ರಾರಂಭವಾಗಲಿದೆ’ ಎಂದು ಹೇಳಿದ್ದಾರೆ.
‘ಈ ಕುರಿತು ನಾನು ನಿರಂತರವಾಗಿ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ ಅವರೊಂದಿಗೆ ಸಂಪರ್ಕದಲ್ಲಿದ್ದು ಮನವಿ ಸಲ್ಲಿಸಿದ್ದೆ. ಈಗ ನಮ್ಮ ಮನವಿಗೆ ಸ್ಪಂದಿಸಿದ ಸಚಿವರು ಹುಬ್ಬಳ್ಳಿಯಿಂದ ಜೋಧ್‌ಪುರಕ್ಕೆ ನೇರ ರೈಲು ಆರಂಭಕ್ಕೆ ಅನುಮೋದನೆ ನೀಡಿದ್ದಾರೆ’ ಎಂದು ಜೋಶಿ ತಿಳಿಸಿದ್ದಾರೆ.
ರೈಲು ವೇಳಾಪಟ್ಟಿ: ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿ-ಜೋಧಪುರ್ ನೇರ ರೈಲು ವೇಳಾಪಟ್ಟಿಯನ್ನು ನೀಡಿದ್ದಾರೆ. ‘ರೈಲು ಸಂಖ್ಯೆ 07359 UBL (ಹುಬ್ಬಳ್ಳಿ) ಯಿಂದ 7:30ಕ್ಕೆ ತೆರಳಿ ಬೆಳಿಗ್ಗೆ 5:30ಕ್ಕೆ BGKT (ಭಗತ ಕಿ ಕೋಟಿ)ಗೆ ತಲುಪಲಿದೆ. ಪ್ರತಿ ರವಿವಾರ ಸಂಚರಿಸುವ ಈ ರೈಲಿನ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭವಾಗಿದೆ. ಪ್ರಸ್ತುತ ಇದು ವಿಶೇಷ ರೈಲಾಗಿದ್ದು ಇದನ್ನು ನಿಯತಕಾಲಿಕವಾಗಿ ಪರಿವರ್ತಿಸಲಾಗುವುದು’ ಎಂದು ಹೇಳಿದ್ದಾರೆ.
‘ನಮ್ಮ ಮನವಿಗೆ ಸ್ಪಂದಿಸುತ್ತ ಈ ಭಾಗದ ರೈಲ್ವೆ ಅಭಿವೃದ್ಧಿಗೆ ವಿಶೇಷ ಆಸಕ್ತಿ ಹೊಂದಿರುವ ಶ್ರೀ ನರೇಂದ್ರ ಮೋದಿ Narendra Modi ಅವರಿಗೆ, ಕೇಂದ್ರ ರೈಲ್ವೆ ಸಚಿವರಾದ ಮಾನ್ಯ ಶ್ರೀ ಅಶ್ವಿನಿ ವೈಷ್ಣವ Ashwini Vaishnaw ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ V Somanna ಅವರಿಗೆ ಅನಂತ ಧನ್ಯವಾದಗಳು’ ಎಂದು ಪ್ರಹ್ಲಾದ್ ಜೋಶಿ ಪೋಸ್ಟ್ ಹಾಕಿದ್ದಾರೆ.
ರೈಲುಗಳ ಸಂಚಾರ ರದ್ದು, ಭಾಗಶಃ ರದ್ದು, ನಿಯಂತ್ರಣ: ನೈಋತ್ಯ ರೈಲ್ವೆ ಪ್ರಮುಖ ರೈಲು ಸೇವೆಯ ಬದಲಾವಣೆ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಬಳ್ಳಾರಿ ಮತ್ತು ತೋರಣಗಲ್ಲು ಯಾರ್ಡ್‌ಗಳಲ್ಲಿ ಥಿಕ್ ವೆಬ್ ಸ್ವಿಚ್‌ಗಳ ಕಾಮಗಾರಿಗಾಗಿ ಲೈನ್ ಬ್ಲಾಕ್ ಕೈಗೊಳ್ಳುವುದರಿಂದ ಸೆಪ್ಟೆಂಬರ್ 3 ರಂದು ಈ ಕೆಳಗಿನ ರೈಲು ಸೇವೆಗಳಲ್ಲಿ ಬದಲಾವಣೆಗಳಿರುತ್ತವೆ ಎಂದು ಹೇಳಿದೆ.
ರೈಲುಗಳ ರದ್ದು. ಗಂತಕಲ್ – ಚಿಕ್ಕಜಾಜೂರು ಪ್ಯಾಸೆಂಜರ್ (ರೈಲು ಸಂಖ್ಯೆ 57415), ಚಿಕ್ಕಜಾಜೂರು – ಗಂತಕಲ್ ಪ್ಯಾಸೆಂಜರ್ (57416 ) ಮತ್ತು ಹೊಸಪೇಟೆ – ಬಳ್ಳಾರಿ ಡೆಮು ವಿಶೇಷ (07397) ರೈಲುಗಳ ಸಂಚಾರವನ್ನು ಸೆಪ್ಟೆಂಬರ್ 3ರಂದು ರದ್ದುಗೊಳಿಸಲಾಗಿದೆ.
ಭಾಗಶಃ ರದ್ದು. ಸೆಪ್ಟೆಂಬರ್ 2ರಂದು ತಿರುಪತಿಯಿಂದ ಹೊರಡುವ ರೈಲು ಸಂಖ್ಯೆ 57405 ತಿರುಪತಿ – ಕದಿರಿದೇವರಪಲ್ಲಿ ಪ್ಯಾಸೆಂಜರ್ ರೈಲು ಗಂತಕಲ್ ಮತ್ತು ಕದಿರಿದೇವರಪಲ್ಲಿ ನಡುವೆ ಭಾಗಶಃ ರದ್ದುಗೊಂಡಿದೆ. ಇದು ಗಂತಕಲ್‌ನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
ಸೆಪ್ಟೆಂಬರ್ 3ರಂದು ಕದಿರಿದೇವರಪಲ್ಲಿಯಿಂದ ಹೊರಡಬೇಕಿದ್ದ ರೈಲು ಸಂಖ್ಯೆ 57406 ಕದಿರಿದೇವರಪಲ್ಲಿ – ತಿರುಪತಿ ಪ್ಯಾಸೆಂಜರ್ ರೈಲು ಕದಿರಿದೇವರಪಲ್ಲಿ ಮತ್ತು ಗಂತಕಲ್ ನಡುವೆ ಭಾಗಶಃ ರದ್ದಾಗಿದ್ದು, ಇದು ತನ್ನ ನಿಗದಿತ ಸಮಯಕ್ಕೆ ಕದಿರಿದೇವರಪಲ್ಲಿಯ ಬದಲಾಗಿ ಗಂತಕಲ್‌ನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ.
ಸೆಪ್ಟೆಂಬರ್ 3 ರಂದು ಬಳ್ಳಾರಿಯಿಂದ ಹೊರಡಬೇಕಿದ್ದ ರೈಲು ಸಂಖ್ಯೆ 07395 ಬಳ್ಳಾರಿ – ದಾವಣಗೆರೆ ಡೆಮು ವಿಶೇಷ ರೈಲು ಬಳ್ಳಾರಿ ಮತ್ತು ಹೊಸಪೇಟೆ ನಡುವೆ ಭಾಗಶಃ ರದ್ದುಗೊಂಡಿದ್ದು, ಇದು ತನ್ನ ನಿಗದಿತ ಸಮಯಕ್ಕೆ ಬಳ್ಳಾರಿಯ ಬದಲಾಗಿ ಹೊಸಪೇಟೆಯಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ.
ಸೆಪ್ಟೆಂಬರ್ 3ರಂದು ಹೊರಡುವ ರೈಲು ಸಂಖ್ಯೆ 56911 ಎಸ್‌ಎಸ್‌ಎಸ್ ಹುಬ್ಬಳ್ಳಿ – ಗಂತಕಲ್ ಪ್ಯಾಸೆಂಜರ್ ರೈಲು ಮುನಿರಾಬಾದ್ ಮತ್ತು ಗಂತಕಲ್ ನಡುವೆ ಭಾಗಶಃ ರದ್ದುಗೊಂಡಿದೆ, ಇದು ಮುನಿರಾಬಾದ್‌ನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
ಸೆಪ್ಟೆಂಬರ್ 3ರಂದು ಗಂತಕಲ್‌ನಿಂದ ಹೊರಡಬೇಕಿದ್ದ ರೈಲು ಸಂಖ್ಯೆ 56912 ಗಂತಕಲ್ – ಎಸ್‌ಎಸ್‌ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಗಂತಕಲ್ ಮತ್ತು ಮುನಿರಾಬಾದ್ ನಡುವೆ ಭಾಗಶಃ ರದ್ದುಗೊಂಡಿರುವುದರಿಂದ, ಇದು ಗಂತಕಲ್‌ನ ಬದಲಾಗಿ ಮುನಿರಾಬಾದ್‌ನಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.
ರೈಲು ನಿಯಂತ್ರಣ. ಸೆಪ್ಟೆಂಬರ್ 3ರಂದು ಹೊರಡುವ ರೈಲು ಸಂಖ್ಯೆ 57402 ಎಸ್‌ಎಸ್‌ಎಸ್ ಹುಬ್ಬಳ್ಳಿ – ತಿರುಪತಿ ಪ್ಯಾಸೆಂಜರ್ ರೈಲು ಮಾರ್ಗಮಧ್ಯೆ 90 ನಿಮಿಷಗಳ ಕಾಲ ವಿಳಂಬವಾಗಿ ಸಂಚರಿಸಲಿದೆ ಎಂದು ಹೇಳಿದೆ.