ಉಪರಾಷ್ಟ್ರಪತಿ ಚುನಾವಣೆ ಕಣ ಅಂತಿಮ: ಗೆಲುವಿಗೆ ಎಷ್ಟು ಮತ ಬೇಕಿದೆ?

0
62

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆ ಕಣ ಅಂತಿಮವಾಗಿದೆ. ಸೆಪ್ಟೆಂಬರ್ 9ರಂದು ನಡೆಯುವ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಮತದಾದನ ದಿನವೇ ನೂತನ ಉಪರಾಷ್ಟ್ರಪತಿ ಯಾರು? ಎಂಬುದು ತಿಳಿಯಲಿದೆ.

ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಯವಾಗಿದೆ. ಚುನಾವಣಾ ಕಣದಲ್ಲಿ ಇಬ್ಬರು ಅಭ್ಯರ್ಥಿಗಳು ಅಂತಿಮವಾಗಿ ಉಳಿದುಕೊಂಡಿದ್ದಾರೆ. ಹೀಗಾಗಿ ನೇರಸ್ಪರ್ಧೆ ಖಚಿತವಾಗಿದೆ.

ಇಬ್ಬರೂ ಅಭ್ಯರ್ಥಿಗಳು ದಕ್ಷಿಣ ಭಾರತ ಮೂಲದವರೇ ಎನ್ನುವುದು ಚುನಾವಣೆಯ ವಿಶೇಷ. ಇಂಡಿಯಾ ಬ್ಲಾಕ್ ಅಭ್ಯರ್ಥಿ ಸುದರ್ಶನ ರೆಡ್ಡಿ ತೆಲಂಗಾಣದವರು. ಎನ್‌ಡಿಎ ಅಭ್ಯರ್ಥಿ ರಾಧಾಕೃಷ್ಣನ್ ತಮಿಳುನಾಡಿನವರು.

ರಾಧಾಕೃಷ್ಣನ್ ಅವರಿಗೆ ರಾಜಕೀಯ ಮತ್ತು ಆಡಳಿತಾತ್ಮಕ ಅನುಭವವಿದೆ ಎಂದು ಎನ್‌ಡಿಎ ಪ್ರಚಾರ ಮಾಡುತ್ತಿದೆ. ಸುದರ್ಶನ್ ರೆಡ್ಡಿ ಸಾಮಾಜಿಕ ನ್ಯಾಯಕ್ಕಾಗಿ ದನಿ ಎತ್ತಿದವರು ಎಂದು ಇಂಡಿಯಾ ಬ್ಲಾಕ್ ಹೇಳುತ್ತಿದೆ.

ಅಂಕಿಗಳ ಮೇಲಾಟ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 782 ಮತಗಳು ಚಲಾವಣೆಯಾಗಬೇಕಿದೆ. ಗೆಲ್ಲಲು ಅಗತ್ಯವಾಗಿರುವ ಮತ 392, ಎನ್‌ಡಿಎ ಮೈತ್ರಿಕೂಟದ ಬಲ 427 ಮತ್ತು ಇಂಡಿಯಾ ಮೈತ್ರಿಕೂಟದ ಸದಸ್ಯ ಬಲ 355. ಆದ್ದರಿಂದ ಎನ್‌ಡಿಎ ಅಭ್ಯರ್ಥಿ ಚುನಾವಣೆ ಗೆಲ್ಲುವುದು ಬಹುತೇಕ ಖಚಿತವಾಗಿದೆ.

ಸೆಪ್ಟೆಂಬರ್ 9ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ರಾಜ್ಯಸಭೆಯ 233 ಚುನಾಯಿತ ಮತ್ತು 12 ನಾಮನಿರ್ದೇಶಿತ ಸದಸ್ಯರು, ಲೋಕಸಭೆಯ 543 ಸದಸ್ಯರು ಮತ ಚಲಾಯಿಸಬಹುದು. ಒಟ್ಟು 788 ಸದಸ್ಯರ ಪೈಕಿ 6 ಸ್ಥಾನಗಳು ಖಾಲಿ ಇದ್ದು, ಮತಪಟ್ಟಿಯಲ್ಲಿ 782 ಜನರಿದ್ದಾರೆ. ಗೆಲ್ಲಲು 392 ಮತಗಳ ಅಗತ್ಯವಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ 427 ಸದಸ್ಯಬಲವನ್ನು ಹೊಂದಿದ್ದರೆ, ಇಂಡಿಯಾ ಬ್ಲಾಕ್ 355 ಸದಸ್ಯರನ್ನು ಹೊಂದಿದೆ. ಆದರೆ ಚುನಾವಣೆಯಲ್ಲಿ ಪಕ್ಷದ ಹೊರತಾಗಿ ಪ್ರಾದೇಶಿಕ ಭಾವನೆಯೂ ಮಹತ್ವದ ಪಾತ್ರ ವಹಿಸಲಿದೆ ಎಂದು ಅಂದಾಜಿಸಲಾಗಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಉಪರಾಷ್ಟ್ರಪತಿ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ರಾಧಾಕೃಷ್ಣನ್ ಅವರನ್ನು ಮೈತ್ರಿಕೂಟ ಅಭ್ಯರ್ಥಿಯಾಗಿಸಿದ್ದು, ಅಂಕಿ ಸಂಖ್ಯೆಗಳ ಆಧಾರದಲ್ಲಿ ಗೆಲವು ಸುಲಭ ಎಂದು ಅಂದಾಜಿಸಲಾಗಿದೆ.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರನ್ನು ಇಂಡಿಯಾ ಬ್ಲಾಕ್ ಅಭ್ಯರ್ಥಿಯಾಗಿ ಮಾಡುವ ಚುನಾವಣೆಯಲ್ಲಿ ಸಾಂಕೇತಿ ಸ್ಪರ್ಧೆ ಮಾಡುತ್ತಿದೆ. ಡಿಎಂಕೆ, ಎಎಪಿ ಸೇರಿ ಎಲ್ಲಾ ಪಕ್ಷಗಳ ಸಲಹೆ ಪಡೆದು ಒಮ್ಮತದ ಅಭ್ಯರ್ಥಿಯನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ.

Previous articleರಾಮನಗರ: ಜೇಡಿ ಮಣ್ಣಿನ ಪರಿಸರ ಸ್ನೇಹಿ ಗಣಪನಿಗೆ ಭಾರೀ ಬೇಡಿಕೆ
Next articleನೌಕಾಪಡೆಗೆ ಉದಯಗಿರಿ ಮತ್ತು ಹಿಮಗಿರಿ ಯುದ್ಧನೌಕೆಗಳು ಸೇರ್ಪಡೆ

LEAVE A REPLY

Please enter your comment!
Please enter your name here