ಬಿಬಿಎಂಪಿಗೆ ಬೀದಿ ನಾಯಿಗೆ ಆಹಾರ ಹಾಕಲು ಸ್ಥಳ ಸಿಗುತ್ತಿಲ್ಲ!

0
41

ಬೆಂಗಳೂರು: ಬಿಬಿಎಂಪಿ ಮಾಹಿತಿಗಳ ಪ್ರಕಾರ ಬೆಂಗಳೂರು ನಗರದಲ್ಲಿ ಒಟ್ಟು 2.79 ಲಕ್ಷ ಬೀದಿ ನಾಯಿಗಳಿವೆ. ಇವುಗಳಿಗೆ ಆಹಾರವನ್ನು ಒದಗಿಸಲು ಪ್ರತ್ಯೇಕ ಜಾಗ ಗುರುತಿಸಲು ಪಾಲಿಕೆ ಪರದಾಟ ನಡೆಸುತ್ತಿದೆ. ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡುವುದು ಈಗ ಬಿಬಿಎಂಪಿಗೆ ಸವಾಲಾಗಿದೆ.

ಸುಪ್ರೀಂಕೋರ್ಟ್ ಬೀದಿನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡುವುದನ್ನು ನಿಷೇಧಿಸಿ, ಪ್ರತ್ಯೇಕ ಸ್ಥಳ ಗುರುತಿಸುವಂತೆ ಸ್ಥಳೀಯ ಪೌರಾಡಳಿತ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಈ ಆದೇಶದ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿಗೆ ಬೀದಿ ನಾಯಿಗಳಿಗೆ ಆಹಾರ ನೀಡಲು ಪ್ರತ್ಯೇಕ ಜಾಗ ಗುರುತಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಕಾರ್ಯವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಬಿಬಿಎಂಪಿ ವ್ಯಾಪ್ತಿಯು ಸುಮಾರು 709 ಚದರ ಕಿಲೋಮೀಟರ್‌ನಷ್ಟು ವಿಸ್ತಾರವಾಗಿದ್ದು, ಇಷ್ಟು ದೊಡ್ಡ ಪ್ರದೇಶದಲ್ಲಿ ನಿರಂತರವಾಗಿ ಬೀದಿ ನಾಯಿಗಳಿಗೆ ಆಹಾರ ವಿತರಿಸುವುದು ಕಷ್ಟದ ಕೆಲಸವಾಗಿದೆ. ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪಾಲಿಕೆ ಇತರ ಸಂಘ-ಸಂಸ್ಥೆಗಳೊಂದಿಗೆ ಕೈ ಜೋಡಿಸಬೇಕಾಗಿದೆ.

2023ರ ಗಣತಿಯ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ 2.79 ಲಕ್ಷ ಬೀದಿ ನಾಯಿಗಳಿವೆ. ಇವು ನಗರದ ವಿವಿಧ ವಲಯಗಳಲ್ಲಿ ಹಂಚಿ ಹೋಗಿದ್ದು, ಆಹಾರದ ಲಭ್ಯತೆ ಕಡಿಮೆಯಿರುವ ಪ್ರದೇಶಗಳಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಈ ನಾಯಿಗಳಿಗೆ ಆಹಾರ ಒದಗಿಸುವುದು ದೊಡ್ಡ ಖರ್ಚಿನ ಕೆಲಸವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ರೂಪಾಯಿಗಳ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಸ್ತುತ ಬೀದಿ ನಾಯಿಗಳು ರಸ್ತೆಬದಿ ಮತ್ತು ಇತರ ಸ್ಥಳಗಳಲ್ಲಿ ಆಹಾರ ಅರಸುತ್ತಿವೆ. ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಸಾರ್ವಜನಿಕರು ಅವುಗಳಿಗೆ ಆಹಾರ ನೀಡುತ್ತಿದ್ದಾರೆ. ಬಹಳಷ್ಟು ನಾಯಿಗಳು ವಸತಿ ಪ್ರದೇಶಗಳಲ್ಲಿ ಜನರು ಎಸೆಯುವ ವ್ಯರ್ಥ ಆಹಾರವನ್ನೇ ಅವಲಂಬಿಸಿವೆ. ರೋಗಗ್ರಸ್ತ ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ನಾಯಿಗಳಿಗೆ ಕೆಲ ದಿನಗಳ ಮಟ್ಟಿಗೆ ಆಹಾರ ನೀಡಲಾಗುತ್ತದೆ. ಆದರೆ ನಂತರ ಅವು ಮತ್ತೆ ಆಹಾರ ಕೊರತೆಯನ್ನು ಎದುರಿಸುತ್ತಿವೆ.

ಈ ಕಾರಣದಿಂದಾಗಿ ಮನುಷ್ಯರ ಮೇಲೆ ನಾಯಿಗಳ ದಾಳಿಯ ಪ್ರಕರಣಗಳು ಹೆಚ್ಚಾಗುತ್ತಿವೆ.ಬೀದಿ ನಾಯಿಗಳಿಗೆ ಚಿಕನ್ ರೈಸ್ ನೀಡುವ ಯೋಜನೆಯನ್ನು ಬಿಬಿಎಂಪಿ ಇತ್ತೀಚೆಗೆ ರೂಪಿಸಿತ್ತು. ಆದರೆ, ಮಾಂಸಾಹಾರ ಸೇವನೆಯಿಂದ ನಾಯಿಗಳ ಆಕ್ರಮಣಶೀಲತೆ ಹೆಚ್ಚಾಗುತ್ತದೆ ಎಂಬ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಎಲ್ಲೆಲ್ಲಿ, ಎಷ್ಟು ನಾಯಿಗಳಿವೆ?: 2023ರ ಗಣತಿ ಪ್ರಕಾರ ಬೆಂಗಳೂರು ನಗರದಲ್ಲಿ ಪೂರ್ವ 37,685, ಪಶ್ಚಿಮ 22,025, ದಕ್ಷಿಣ 23,241, ಯಲಹಂಕ 36.342, ಮಹದೇವಪುರ 58.341, ಬೊಮ್ಮನಹಳ್ಳಿ 39,183, ಆರ್.ಆರ್.ನಗರ 41,266, ದಾಸರಹಳ್ಳಿ ವಲಯದಲ್ಲಿ 21.221 ಬೀದಿನಾಯಿಗಳಿವೆ.

Previous articleದಾಂಡೇಲಿ: ಕಾಳಿ ಸೇತುವೆ ರಕ್ಷಣಾ ಗೋಡೆ ನೀರುಪಾಲು! ಭೂಕುಸಿತ
Next articleಕನ್ನಡ ಚಿತ್ರರಂಗದ ಕಲಾವಿದ ದಿನೇಶ್ ಮಂಗಳೂರು ನಿಧನ

LEAVE A REPLY

Please enter your comment!
Please enter your name here