ಒಳಮೀಸಲು ಪ್ರಶ್ನಿಸಿ ಕೋರ್ಟ್‌ನಲ್ಲಿ ದಾವೆ?

0
77

ಶಿವಕುಮಾರ್ ಮೆಣಸಿನಕಾಯಿ

ಬೆಂಗಳೂರು: ಶತಮಾನಗಳಿಂದ ಧ್ವನಿ ಇಲ್ಲದೆ ಬೀದಿಗಳಲ್ಲಿ ಹೊಟ್ಟೆ ಹೊರೆಯುವ ಅಲೆಮಾರಿ ಜನಾಂಗಗಳಿಗೆ ಒಳ ಮೀಸಲಾತಿ ನೀಡಬೇಕೆಂಬ ಬೇಡಿಕೆ ಹಳೆಯದು. ರಾಜ್ಯ ಸರಕಾರ ಸುಪ್ರಿಂಕೋರ್ಟ್ ಆದೇಶದ ಅನುಸಾರ ಹಂಚಿಕೆ ಮಾಡಿರುವ 6:5:5 ಅನುಪಾತದ ಒಳ ಮೀಸಲಾತಿ ಫಾರ್ಮುಲಾ ಅಲೆಮಾರಿಗಳಿಗೆ ಮರಣ ಶಾಸನವನ್ನೇ ಬರೆದಿದೆ ಎಂದು ಈ ಸಮುದಾಯಗಳು ಅಳಲು ತೋಡಿಕೊಳ್ಳುತ್ತಿವೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಒಳಮೀಸಲಾತಿ ಹಂಚಿಕೆ ವಿರುದ್ಧ ಹೈಕೋರ್ಟ್ ಮೊರೆ ಹೋಗಲು ರಾಜ್ಯದ 49 ಅಲೆಮಾರಿ ಸಮುದಾಯಗಳು ಸಜ್ಜಾಗಿವೆ. ಸಮಾನರ ಜತೆ ಸಮಾನರು ಹಂಚಿಕೊಳ್ಳಬೇಕು. ಸಮಾನರ ಜತೆ ಅಸಮಾನರು ಸ್ಪರ್ಧಿಸಲು ಆಗುವುದಿಲ್ಲ ಎಂಬುದು ಸಂವಿಧಾನದಲ್ಲಿ ಮೀಸಲಾತಿಗಾಗಿ ಉಲ್ಲೇಖಿಸಿದ ಮೂಲಭೂತ ಪರಿಕಲ್ಪನೆ.

ಆದರೆ ರಾಜ್ಯ ಸರಕಾರ ಲಂಬಾಣಿ, ಬೋವಿ, ಕೊರಮ ಕೊರಚರ ಜತೆಗೆ ಅತ್ಯಂತ ಅಶಕ್ತವಾಗಿರುವ 49 ಅಲೆಮಾರಿ ಸಮುದಾಯಗಳನ್ನು ಸರ್ಧಗೆ ನಿಲ್ಲಿಸಿದರೆ ಇದು ನ್ಯಾಯವೇ?. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲು ಎಲ್ಲ 49 ಸಮುದಾಯಗಳು ಚರ್ಚೆ ನಡೆಸುತ್ತಿವೆ. 49 ಸಮುದಾಯಗಳ ಮುಖಂಡರ ಜತೆ ಚರ್ಚಿಸಿ ಹೈಕೋರ್ಟ್ ಮೊರೆ ಹೋಗುವ ತೀರ್ಮಾನ ಪ್ರಕಟಿಸಲಾಗುವುದು ಎಂದು ಹಿರಿಯ ನ್ಯಾಯವಾದಿ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕಾನಾಥ್ ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದರು.

ಅಲೆಮಾರಿಗಳು ಜನಸಂಖ್ಯೆಯಲ್ಲಿ ಕಡಿಮೆ ಇದ್ದಾರೆ, ರಾಜಕೀಯವಾಗಿ ಇವರು ಏನೂ ಮಾಡಲಾರರು ಎಂಬ ಕಾರಣಕ್ಕೆ ಅಸ್ಪಶ್ಯರಾದ ಅಲೆಮಾರಿ ಜನಾಂಗಗಳನ್ನು ಬಲಾಡ್ಯ ಸ್ಪೃಶ್ಯರ ಜೊತೆಗೆ ಸೇರಿಸಿದರೆ ಅಲೆಮಾರಿಗಳು ಬದುಕಲು ಸಾಧ್ಯವಿಲ್ಲ. ಈಗಾಗಲೇ ಸ್ಪೃಶ್ಯ ಸಮುದಾಯಗಳ ಜೊತೆಗೆ ಹೊಲೆಯರು, ಮಾದಿಗರು ಸೆಣೆಸಲು ಆಗದೇ ಒಳಮೀಸಲಾತಿ ಕೇಳಿದ್ದರು.

ಈಗ ಅಂತಹ ಸ್ಪೃಶ್ಯ ಸಮುದಾಯಗಳ ಜೊತೆಗೆ ಅಲೆಮಾರಿಗಳನ್ನು ಸೇರಿಸುವುದರಿಂದ ಒಳಮೀಸಲಾತಿ ಉದ್ದೇಶ ಈಡೇರಲು ಸಾಧ್ಯವೇ ಇಲ್ಲ. ಪ್ರತ್ಯೇಕ ಶೇ.1ರಷ್ಟು ಮೀಸಲಾತಿ ಕೊಡಬೇಕೆಂಬುದ ದಶಕಗಳ ಬೇಡಿಕೆಯನ್ನು ಸರಕಾರ ಈಡೇರಿಸಲೇಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಆಯೋಗದ ವರದಿಯೇ ತಿರಸ್ಕಾರ: ರಾಜ್ಯ ಸರಕಾರ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆ ಮಾಡಲು ನೇಮಕ ಮಾಡಿದ್ದ ನ್ಯಾ.ನಾಗಮೋಹನ್ ದಾಸ್ ಏಕಸದಸ್ಯ ಆಯೋಗವು 5 ಗುಂಪುಗಳನ್ನು ರಚಿಸಲು ಶಿಫಾರಸು ಮಾಡಿತ್ತು. 6:5:4:1:1: ಅನುಪಾತದಲ್ಲಿ ಒಳಮೀಸಲಾತಿ ಹಂಚಿಕೆಗೆ ಸೂಚಿಸಿತ್ತು. ಆದರೆ ಈ ಗುಂಪುಗಳನ್ನು ವಿಂಗಡಣೆ ಬದಿಗೊತ್ತಿ ಕೇವಲ ಆಡಳಿತಾತ್ಮಕ ಕೆಲವು ಶಿಫಾರಸುಗಳನ್ನು ಮಾತ್ರ ಸರಕಾರ
ಒಪ್ಪಿಕೊಂಡಿದೆ.

ಅಂದರೆ ಒಳಮೀಸಲಾತಿ ಮೂಲ ಆಶಯದ ಅನುಸಾರ ಪ್ರಮಾಣ ಹಂಚಿಕೆಯನ್ನು ಜನಸಂಖ್ಯೆ ಆಧರಿತ ಮಾಡಲಾಗಿದ್ದು, ಈಗಾಗಲೇ ಸಾಕಷ್ಟು ಪ್ರಾತಿನಿಧ್ಯ ಪಡೆದಿರುವ ಜಾತಿಗಳಿಗೆ ಹೆಚ್ಚು ಪ್ರಮಾಣ ನೀಡಿ, ಈವರೆಗೆ ಅವಕಾಶವೇ ಸಿಗದೇ ಅನೇಕ ಜಾತಿಗಳನ್ನು ಸ್ಪೃಶ್ಯ ಜಾತಿಗಳ ಗುಂಪಿಗೆ ಸೇರ್ಪಡೆ ಮಾಡಲಾಗಿದೆ ಎಂಬುದು ಅಲೆಮಾರಿ ಸಮುದಾಯಗಳ ಆಕ್ಷೇಪವಾಗಿದೆ. ಒಳಮೀಸಲಾತಿ ಹಂಚಿಕೆ ವೇಳೆ ಜನಸಂಖ್ಯೆ ಮಾತ್ರ ನೋಡಲಾಗಿದೆ ಹೊರತು ಪ್ರಾತಿನಿಧ್ಯ ಪರಿಗಣಿಸಿಲ್ಲ. ಎಂಬುದು ವಿರೋಧದ ಮೂಲ ಬಿಂದು.

ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ: ಮೀಸಲು ಹಂಚಿಕೆಗೆ 5.5 ಲಕ್ಷ ಜನಸಂಖ್ಯೆ ಹೊಂದಿರುವ ಅಲೆಮಾರಿ ಜನಾಂಗಗಳು ಅಸಮಾಧಾನಗೊಂಡಿವೆ. ಶನಿವಾರದ ಸಿಎಂ ಸಭೆ ಕೂಡ ವಿಫಲವಾಗಿದೆ. ತತ್ಪರಿಣಾಮ ಈಗ ಕಾನೂನು ಹೋರಾಟಕ್ಕೆ ಮುಂದಾಗಿರುವ ಸಮುದಾಯಗಳನ್ನು ಸಮಾಧಾನಪಡಿಸಲು ರಾಜ್ಯ ಸರಕಾರ ಅಲೆಮಾರಿ ಜಾತಿಗಳಿಗೆ 50 ಕೋಟಿ ರೂ.ಗಳ ವಿಶೇಷ ಕಲ್ಯಾಣ ಪ್ಯಾಕೇಜ್ ನೀಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ತೀರ್ಮಾನ ಬಳಿಕ ನ್ಯಾ.ದಾಸ್ ಮೌನ. ಸತತ 9 ತಿಂಗಳು ಒಳಮೀಸಲು ವರದಿ ಸಿದ್ಧಪಡಿಸಲು ನ್ಯಾ.ನಾಗಮೋಹನ್ ದಾಸ್ ಅವರು ನಯಾಪೈಸೆ ಪಡೆಯದೆ ಕೆಲಸ ಮಾಡಿದ್ದರು. ಸರ್ಕಾರದ ತೀರ್ಮಾನದ ಬಳಿಕ ಸರಕಾರದ ನಿಲುವನ್ನು ಸ್ವಾಗತಿಸುವುದಿರಲಿ, ಒಂದೇ ಒಂದು ಅಭಿಪ್ರಾಯವನ್ನು ಕೂಡ ನಾಗಮೋಹನದಾಸ್ ಅವರು ಹೊರಹಾಕಿಲ್ಲ. ಈ ಬಗ್ಗೆ ಸಂಯುಕ್ತ ಕರ್ನಾಟಕ ಪ್ರತಿಕ್ರಿಯೆ ಕೇಳಿದಾಗ, ‘ಸದ್ಯಕ್ಕೆ ನಾನು ಯಾವುದೇ ಅಭಿಪ್ರಾಯ ಹೇಳಲು ಇಷ್ಟಪಡುವುದಿಲ್ಲ’ ಎಂದಷ್ಟೇ ಹೇಳಿದರು.

Previous articleಧರ್ಮಸ್ಥಳ ಕೇಸ್: ಕಾಂಗ್ರೆಸ್ ಸರ್ಕಾರಕ್ಕೆ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನೆಗಳು
Next articleದಾಂಡೇಲಿ: ಕಾಳಿ ಸೇತುವೆ ರಕ್ಷಣಾ ಗೋಡೆ ನೀರುಪಾಲು! ಭೂಕುಸಿತ

LEAVE A REPLY

Please enter your comment!
Please enter your name here