ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತಿದ್ದೇನೆ ಎಂದು ದೂರು ನೀಡಿದ್ದ ಅನಾಮಿಕ ವ್ಯಕ್ತಿಯನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದರು. ಕೋರ್ಟ್ ಆತನನ್ನು 10 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿದೆ.
ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದ ಅನಾಮಿಕ ವ್ಯಕ್ತಿಯ ಹೆಸರು, ಫೋಟೋ ಶನಿವಾರ ರಿವೀಲ್ ಆಗಿದೆ. ಈ ವ್ಯಕ್ತಿ ಮಂಡ್ಯ ತಾಲೂಕು ಚಿಕ್ಕಬಳ್ಳಿ ಗ್ರಾಮದ ಸಿ.ಎನ್.ಚಿನ್ನಯ್ಯ.
ಎಸ್‌ಐಟಿ ಪೊಲೀಸರು ಬೆಳ್ತಂಗಡಿ ಕೋರ್ಟ್‌ಗೆ ಆರೋಪಿ ಸಿ.ಎನ್.ಚಿನ್ನಯ್ಯ ಹಾಜರುಪಡಿಸಿದ್ದರು. ಕೋರ್ಟ್ 10 ದಿನಗಳ ಕಾಲ ಆರೋಪಿಯನ್ನು ಎಸ್‌ಐಟಿ ವಶಕ್ಕೆ ನೀಡಿದೆ. ಕೋರ್ಟ್‌ನಿಂದ ಬಿಗಿ ಭದ್ರತೆಯಲ್ಲಿ ಆತನನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ.
ಸಿ.ಎನ್.ಚಿನ್ನಯ್ಯ ವಿವರ ಬಹಿರಂಗ: ಜುಲೈ 11ರಂದು ಬುರುಡೆ ಸಮೇತ ಬೆಳ್ತಂಗಡಿ ಕೋರ್ಟ್‌ಗೆ ಹಾಜರಾಗಿದ್ದ ಮಾಸ್ಕ್ ಮ್ಯಾನ್ ಯಾರು? ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಶನಿವಾರ ಆತನ ಹೆಸರು, ವಿಳಾಸ, ಫೋಟೋ ರಿವೀಲ್ ಆಗಿದೆ.
ಸಿ.ಎನ್.ಚಿನ್ನಯ್ಯ ಧರ್ಮಸ್ಥಳದಲ್ಲಿ 1995 ರಿಂದ 2014ರ ತನಕ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದ. ಚಿನ್ನಯ್ಯಯನ್ನು ಪೊಲೀಸರು ಬಿಎನಎಸ್ ಕಾಯ್ದೆಯ ಕಲಂ 353(1)(ಬಿ) ಮತ್ತು 353(2) ಅಡಿಯಲ್ಲಿ ಬಂಧಿಸಿದ್ದಾರೆ.
ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ ಸುಳ್ಳು ಮಾಹಿತಿ ನೀಡಿದ ಆರೋಪ ಇದಾಗಿದೆ. ಎಸ್‌ಐಟಿ ಪೊಲೀಸರು ಕೋರ್ಟ್ ಮಂದೆ ಹೆಚ್ಚಿನ ವಿಚಾರಣೆಗಾಗಿ ಚಿನ್ನಯ್ಯ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು.
ಕರ್ನಾಟಕ ಸರ್ಕಾರ ಜುಲೈ 19ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಇದರ ಸಂಬಂಧ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಬಹುದಾದ ಪ್ರಕರಣಗಳ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿತ್ತು. ಸಿ.ಎನ್.ಚಿನ್ನಯ್ಯ ತೋರಿಸಿದ ಜಾಗಗಳಲ್ಲಿ ಶವ, ಅಸ್ತಿ ಪಂಜರಕ್ಕಾಗಿ ಹುಡುಕಾಟ ನಡೆಸಲಾಗಿತ್ತು.
ಗೃಹ ಸಚಿವರ ಹೇಳಿಕೆ: ಉಡುಪಿಯಲ್ಲಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂಳಿರುವ ಪ್ರಕರಣದ ದೂರುದಾರ, ಅನಾಮಿಕ ಮುಸುಕುಧಾರಿ ಬಂಧನವನ್ನು ಖಚಿತಪಡಿಸಿದ್ದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ದೂರುದಾರ ಪೊಲೀಸ್ ಕಸ್ಟಡಿಯಲ್ಲಿದ್ದು, ಆತನ ಹೇಳಿಕೆಯನ್ನು ಪಡೆದು ಹೇಳಿಕೆ ಆಧಾರದಲ್ಲಿ ಪೊಲೀಸರು ಪ್ರಕರಣದ ತನಿಖೆ ನಡೆಸಲಿದ್ದಾರೆ. ಧರ್ಮಸ್ಥಳ ಪ್ರಕರಣದ ಬಗೆಗಿನ ಎಸ್‌ಐಟಿ ತನಿಖೆ ಮುಂದುವರಿಯಲಿದೆ. ಸಮಗ್ರ ತನಿಖೆ ನಡೆದು ವರದಿ ಬಂದ ಬಳಿಕವಷ್ಟೇ ಎಲ್ಲಾ ಊಹಾಪೋಹಗಳಿಗೂ ತೆರೆ ಬೀಳಿದೆ. ಅನನ್ಯ ಭಟ್ ನಾಪತ್ತೆ ಪ್ರಕರಣದ ದೂರುದಾರೆ ಸುಜಾತಾ ಭಟ್ ಮೇಲೆಯೂ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದೆ” ಎಂದು ಹೇಳಿದ್ದಾರೆ.