ಬೆಂಗಳೂರು: ನಮ್ಮ ಮೆಟ್ರೋ ಜಾಲ ಬೆಂಗಳೂರು ನಗರದಲ್ಲಿ ವಿಸ್ತರಣೆಯಾಗುತ್ತಿದೆ. ಆಗಸ್ಟ್ 11ರಂದು ಪ್ರಧಾನಿ ನರೇಂದ್ರ ಮೋದಿ ಆರ್.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕಿಸುವ 16 ನಿಲ್ದಾಣಗಳ 19.15 ಕಿ.ಮೀ. ಹಳದಿ ಮಾರ್ಗವನ್ನು ಉದ್ಘಾಟನೆ ಮಾಡಿದ್ದಾರೆ.
ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ದೊಡ್ಡಬಳ್ಳಾಪುರಕ್ಕೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸುವ ಕುರಿತು ಧೀರಜ್ ಮುನಿರಾಜು (ದೊಡ್ಡಬಳ್ಳಾಪುರ) ಪ್ರಶ್ನೆ ಮಾಡಿದ್ದರು.
ಈ ಪ್ರಶ್ನೆಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉತ್ತರ ನೀಡಿದ್ದಾರೆ. ನಮ್ಮ ಮೆಟ್ರೋ ಸಂಪರ್ಕವನ್ನು ದೊಡ್ಡಬಳ್ಳಾಪುರಕ್ಕೆ ವಿಸ್ತರಣೆ ಮಾಡುವ ಕುರಿತು ಸರ್ಕಾರದ ನಿಲುವು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಮೆಟ್ರೋ ರೈಲನ್ನು ಬೆಂಗಳೂರು ಉತ್ತರ ಭಾಗದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ವಿಸ್ತರಿಸಲು ಉದ್ದೇಶಿಸಿರುವುದರಿಂದ ದೊಡ್ಡಬಳ್ಳಾಪುರ ನಗರದವರೆಗೂ ಮೆಟ್ರೋ ರೈಲಿನ ಸಂಪರ್ಕ ಮುಂದುವರೆಸುವಲ್ಲಿ ಸರ್ಕಾರದ ನಿಲುವೇನು? ಎಂದು ಪ್ರಶ್ನೆ ಮಾಡಿದ್ದರು. ಡಿ.ಕೆ.ಶಿವಕುಮಾರ್ ಉತ್ತರದಲ್ಲಿ ಪ್ರಸ್ತುತ ದೊಡ್ಡಬಳ್ಳಾಪುರಕ್ಕೆ ಮೆಟ್ರೋ ಸಂಪರ್ಕವನ್ನು ವಿಸ್ತರಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದು ಪ್ರಶ್ನೆಯಲ್ಲಿ ಪ್ರಸ್ತುತ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರದಲ್ಲಿ ಫಾಕ್ಸ್‌ನ್ ಕಂಪನಿಯು ಸೇರಿದಂತೆ ಐ.ಟಿ.ಐ.ಆರ್ ಯೋಜನೆಯು ಪುಗತಿಯಲ್ಲಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕ್ಲೀನ್ ಸಿಟಿ ಯೋಜನೆ ಅನುಷ್ಠಾನವಾಗುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೋ ರೈಲನ್ನು ದೊಡ್ಡಬಳ್ಳಾಪುರ ನಗರದವರೆಗೂ ವಿಸ್ತರಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುವುದೇ? ಎಂದು ಪ್ರಶ್ನಿಸಿದ್ದರು. ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಹಾಗಿದ್ದಲ್ಲಿ, ಈ ಕುರಿತು ಸರ್ಕಾರದ ಮುಂದೆ ಹೊಸ ಪ್ರಸ್ತಾವನೆ/ಯೋಜನೆ ಇದೆಯೇ, ದೊಡ್ಡಬಳ್ಳಾಪುರ ನಗರಕ್ಕೆ ಮೆಟ್ರೋ ರೈಲು ವಿಸ್ತರಿಸಲು ಇರುವ ತೊಡಕುಗಳೇನು? ಎಂದು ಶಾಸಕರು ಪ್ರಶ್ನೆ ಮಾಡಿದ್ದರು.
ಡಿ.ಕೆ.ಶಿವಕುಮಾರ್ ಉತ್ತರದಲ್ಲಿ ಭವಿಷ್ಯದ ದಿನಗಳಲ್ಲಿ ಮೆಟ್ರೋ ರೈಲು ವ್ಯವಸ್ಥೆಯನ್ನು ಒದಗಿಸುವ ಸಲುವಾಗಿ ಯಲಹಂಕದಿಂದ ರಾಜನಕುಂಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಸೇರಿದಂತೆ 26 ಕಿ.ಮೀ.ಗಳ ಮೆಟ್ರೋ ಕಾರಿಡಾರ್‌ಗಳನ್ನು ತಾತ್ಕಾಲಿಕ ಮಾಸ್ಟರ್ ಪ್ಲಾನ್‌ನಲ್ಲಿ ಗುರುತಿಸಲಾಗಿದೆ. ಸಮಗ್ರ ಚಲನಶೀಲತಾ ಯೋಜನೆ (CMP)ಯಲ್ಲಿ ಭವಿಷ್ಯದ ಕಾರಿಡಾರ್‌ಗಳ ಮಾಸ್ಟರ್ ಪ್ಲಾನ್ ತಯಾರಿಸುವ ಕುರಿತು ಪರಿಶೀಲನೆಯಲ್ಲಿದೆ ಎಂದು ಸರ್ಕಾರ ಹೇಳಿದೆ.
























