ಮಂಗಳೂರು: ಧರ್ಮಸ್ಥಳ ಪ್ರಕರಣದ ಮಹತ್ವದ ಬೆಳವಣಿಗೆಯಲ್ಲಿ ಎಸ್‌ಐಟಿ ಪೊಲೀಸರು ಅನಾಮಿಕ ದೂರುದಾರ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದ ವ್ಯಕ್ತಿಯನ್ನು ಶನಿವಾರ ಬಂಧಿಸಿದ್ದಾರೆ. ಆತನ ಹೆಸರು, ಊರು ಸಹ ರಿವೀಲ್ ಆಗಿದೆ.
ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಅನಾಮಿಕ ದೂರುದಾರನನ್ನು ಎಸ್‌ಐಟಿ ಪೊಲೀಸರು ವಿಚಾರ ನಡೆಸುತ್ತಿದ್ದರು. ಶನಿವಾರ ಮುಂಜಾನೆ 5 ಗಂಟೆಯ ತನಕ ವಿಚಾರಣೆ ನಡೆದಿತ್ತು. ಇಂದು ಬೆಳಗ್ಗೆ ಮಾಸ್ಕ್ ಹಾಕಿಕೊಂಡು ಓಡಾಟ ನಡೆಸುವ ದೂರುದಾರನನ್ನು ಬಂಧಿಸಲಾಗಿದೆ.
ಸದ್ಯ ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು, ಮಾಸ್ಕ್ ಮ್ಯಾನ್ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಬೆಳ್ತಂಗಡಿ ಕೋರ್ಟ್‌ಗೆ ಆತನನ್ನು ಹಾಜರು ಪಡಿಸಲಿದ್ದಾರೆ. ಅನಾಮಿಕ ದೂರುದಾರ ವ್ಯಕ್ತಿಯ ಹೆಸರು ಸಿ.ಎನ್.ಚಿನ್ನಯ್ಯ ಎಂದು ಬಹಿರಂಗವಾಗಿದೆ, ಆತ ಮೂಲತಃ ಮಂಡ್ಯದವನು.
ಸಿ.ಎನ್.ಚಿನ್ನಯ್ಯನನ್ನು ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ಕೇಳುವ ನಿರೀಕ್ಷೆ ಇದೆ. ಆತ ನೀಡಿರುವ ದೂರಿನ ಸತ್ಯಾಸತ್ಯತೆ ಬಗ್ಗೆಯೇ ಪೊಲೀಸರಿಗೆ ಅನುಮಾನವಿದ್ದು, ಆದ್ದರಿಂದ ವಿಚಾರಣೆ ತೀವ್ರಗೊಳಿಸಿದ್ದಾರೆ.
ಕರ್ನಾಟಕ ಸರ್ಕಾರ ಜುಲೈ 19ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಇದರ ಸಂಬಂಧ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಬಹುದಾದ ಪ್ರಕರಣಗಳ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿತ್ತು.
ಅನಾಮಿಕ ದೂರುದಾರ ನೀಡಿದ ದೂರಿನ ಅನ್ವಯ ಎಸ್‌ಐಟಿ ಧರ್ಮಸ್ಥಳದಲ್ಲಿ ತನಿಖೆ ಮಾಡುತ್ತಿದೆ. ದೂರುದಾರ ತೋರಿಸಿದ ಜಾಗದಲ್ಲಿ ಅಸ್ಥಿಪಂಜರಕ್ಕಾಗಿ ಹುಡುಕಾಟ ನಡೆಸುತ್ತಿತ್ತು. ಆದರೆ ಕಳೆದ ವಾರದ ಉತ್ಪನ್ನ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ವಿಧಾನಸಭೆ ಕಲಾಪದಲ್ಲಿ ಅನಾಮಿಕ ದೂರುದಾರ, ಮಾಸ್ಕ್ ಮ್ಯಾನ್ ಕುರಿತು ಚರ್ಚೆಗಳು ನಡೆದಿತ್ತು. ಆತ ಯಾರು?, ಬಂಧಿಸದೇ ಆತನನ್ನು ವಿಚಾರಣೆ ನಡೆಸುವುದು ಏಕೆ?, ದಿನ ಬೆಳಗ್ಗೆ ಬಂದು ಸಂಜೆ ಆತ ಎಲ್ಲಿಗೆ ಹೋಗುತ್ತಾನೆ? ಎಂದು ಪ್ರತಿಪಕ್ಷ ಬಿಜೆಪಿ ಪ್ರಶ್ನೆ ಮಾಡಿತ್ತು.
ಗೃಹ ಸಚಿವ ಡಾ.ಜಿ.ಪರಮೇಶ್ವರ ಉತ್ತರ ನೀಡುವಾಗ ಧರ್ಮಸ್ಥಳದ ಪ್ರಕರಣದ ತನಿಖೆ ಬಗ್ಗೆ ಎಸ್‌ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರೇ ತನಿಖೆ ಕುರಿತು ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಸ್ಪೋಟಕ ವಿಚಾರ ಬಯಲು?: ಮಾಸ್ಕ್ ಮ್ಯಾನ್ ಸಿ.ಎನ್.ಚಿನ್ನಯ್ಯ ವಿಚಾರಣೆ ವೇಳೆ, “ನಾನು ಕೇವಲ ಪಾತ್ರಧಾರಿ ಸೂತ್ರಧಾರಿಗಳು ಬೇರೆ ಇದ್ದಾರೆ. ನನಗೆ ಬುರುಡೆ ತೆಗೆದುಕೊಂಡು ಹೋಗಿ ಕೋರ್ಟ್‌ಗೆ ಒಪ್ಪಿಸು ಎಂದು ಹೇಳಿದ್ದರು. ನಾನು ಹಾಗೆ ಮಾಡಿದೆ” ಎಂದು ಸ್ಫೋಟಕ ಹೇಳಿಕೆ ನೀಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹೇಳಿಕೆ ಸತ್ಯಾಸತ್ಯತೆ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಇನ್ನಷ್ಟು ಮಾಹಿತಿ ಸಂಗ್ರಹ ಮಾಡಬೇಕಿದೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ನಂಜಯ್ಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಬಳಿಕ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.
ಧರ್ಮಸ್ಥಳ ಪ್ರಕರಣ ದೇಶ, ವಿದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ “ಈಗ ಕೇಳಿಬಂದಿರುವ ಆರೋಪಗಳೆಲ್ಲಾ ಆಧಾರ ರಹಿತ ಹಾಗೂ ಸಂಪೂರ್ಣ ಸುಳ್ಳಾಗಿವೆ. ಸತ್ಯವೇ ಗೆಲ್ಲುತ್ತದೆ, ಸಂಚು ಸಾಯುತ್ತದೆ” ಎಂದು ಹೇಳಿದ್ದರು.
ಪಿಟಿಐಗೆ ನೀಡಿದ್ದ ಸಂದರ್ಶನದಲ್ಲಿ ಅವರು, “ಆರೋಪಗಳ ತನಿಖೆಗೆ ಕರ್ನಾಟಕ ಸರ್ಕಾರ ಎಸ್‌ಐಟಿ ರಚಿಸಿರುವುದು ಸ್ವಾಗತಾರ್ಹ, ಸತ್ಯ ಎಲ್ಲರಿಗೂ ತಿಳಿಯಲು ಬೇಗ ತನಿಖೆ ಪೂರ್ಣಗೊಳ್ಳಲಿ. ನಾವು ನಮ್ಮ ಎಲ್ಲಾ ದಾಖಲೆಗಳನ್ನು ತೆರೆದಿಟ್ಟಿದ್ದೇವೆ. ತನಿಖೆಗೆ ಸಂಪೂರ್ಣವಾಗಿ ಸಹಕಾರ ನೀಡಲಾಗುತ್ತಿದೆ. ಧರ್ಮಸ್ಥಳದಲ್ಲಿ ಯಾವುದೇ ಅಕ್ರಮ ನಡೆಯುತ್ತಿಲ್ಲ” ಎಂದು ಸ್ಪಷ್ಟಪಡಿಸಿದ್ದರು.