ಬೆಂಗಳೂರು: ಕುಸುಮಾ ಹನುಮಂತರಾಯಪ್ಪ ನಿವಾಸದ ಮೇಲೆ ಇಡಿ ದಾಳಿ ನಡೆದಿದೆ. ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ, ನಟ ದೊಡ್ಡಣ್ಣ ಅಳಿಯ ವೀರೇಂದ್ರ ಪಪ್ಪಿ ನಿವಾಸದ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಸುಮಾ ಮನೆ ಮೇಲೆಯೂ ದಾಳಿ ನಡೆಸಿದ್ದಾರೆ.
ಶುಕ್ರವಾರ ಮುಂಜಾನೆ 2 ಕಾರುಗಳಲ್ಲಿ ಆಗಮಿಸಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಕುಸುಮಾ ಹನುಮಂತರಾಯಪ್ಪ ನಿವಾಸದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ವೀರೇಂದ್ರ ಪಪ್ಪಿ ಜೊತೆ ಕುಸುಮಾ ಸಹೋದರ ವ್ಯವಹಾರ ನಡೆಸಿದ್ದಾರೆ ಎಂಬ ಮಾಹಿತಿ ಇದೆ.
ಬೆಂಗಳೂರಿನ ಮುದ್ದಿಪಾಳ್ಯ ರಸ್ತೆಯಲ್ಲಿರುವ ಕುಸುಮಾ ಹನುಮಂತರಾಯಪ್ಪ ನಿವಾಸದಲ್ಲಿ ಇಡಿ ಅಧಿಕಾರಿಗಳಿದ್ದಾರೆ. ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಶಾಸಕ ವೀರೇಂದ್ರ ಪಪ್ಪಿ ಮತ್ತು ಅವರ ಸಹೋದರರಿಗೆ ಸಂಬಂಧಿಸಿದ ಸುಮಾರು 17 ಕಡೆಗಳಲ್ಲಿಯೂ ಇಡಿ ಪರಿಶೀಲನೆ ಮುಂದುವರೆದಿದೆ.
ಕುಸುಮಾ ಆರ್.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ನಾಯಕಿ. 2023ರ ವಿಧಾನಸಭೆ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ 116,138 ಮತಗಳನ್ನು ಪಡೆದು ಬಿಜೆಪಿಯ ಮುನಿರತ್ನ ವಿರುದ್ಧ ಸೋಲು ಕಂಡಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಮುನಿರತ್ನ ಬಿಜೆಪಿ ಸೇರಿದಾಗ 2020ರಲ್ಲಿ ಆರ್.ಆರ್.ನಗರ ಉಪ ಚುನಾವಣೆ ನಡೆದಿತ್ತು. ಆಗ ಸಹ ಕುಸುಮಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಚುನಾವಣೆಯಲ್ಲಿ ಅವರು 67,798 ಮತಗಳನ್ನು ಪಡೆದಿದ್ದರು.
ವ್ಯವಹಾರದಲ್ಲಿ ಪಾಲುದಾರರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ, ಕನ್ನಡದ ಹಿರಿಯ ನಟ ದೊಡ್ಡಣ್ಣ ಅಳಿಯ ವೀರೇಂದ್ರ ಪಪ್ಪಿ ಉದ್ಯಮಿಯೂ ಹೌದು. ಅವರು ಗೋವಾದಲ್ಲಿ ಕ್ಯಾಸಿನೋ ಸೇರಿ ಹಲವು ಉದ್ಯಮವನ್ನು ಹೊಂದಿದ್ದಾರೆ. ಶುಕ್ರವಾರ ಈ ಉದ್ಯಮವನ್ನು ಗುರಿಯಾಗಿಸಿಕೊಂಡು ಇಡಿ ದಾಳಿ ಮಾಡಲಾಗಿದೆ.
ಕುಸುಮಾ ಹನುಮಂತರಾಯಪ್ಪ ಸಹೋದರ ಶಾಸಕ ವೀರೇಂದ್ರ ಪಪ್ಪಿ ಜೊತೆ ವ್ಯವಹಾರ ಪಾಲುದಾರಿಕೆ ಹೊಂದಿದ್ದಾರೆ ಎಂಬ ಮಾಹಿತಿ ಇದೆ. ಆದ್ದರಿಂದ ಶಾಸಕರ ನಿವಾಸದ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಕುಸುಮಾ ಮನೆಯ ಮೇಲೆಯೂ ದಾಳಿ ಮಾಡಿದ್ದಾರೆ.
ವೀರೇಂದ್ರ ಪಪ್ಪಿ ಮತ್ತು ಅವರ ಸಹೋದರರಿಗೆ ಸೇರಿದ ರತ್ನ ಗೇಮಿಂಗ್ ಸಲ್ಯೂಷನ್ಸ್, ರತ್ನ ಗೋಲ್ಡ್ ಕಂಪನಿ, ರತ್ನ ಮಲ್ಟಿ ಸೋರ್ಸ್ ಕಂಪನಿ, ಪಪ್ಪಿ ಟೆಕ್ನಾಲಜೀಸ್ ಕಂಪನಿ, ಪಪ್ಪಿ ಟೂರ್ಸ್ & ಟ್ರಾವೆಲ್ಸ್ ಮತ್ತು ಪಪ್ಪಿ ಬೇರ್ ಬಾಕ್ಸ್ ಕಂಪನಿಗಳ ವ್ಯವಹಾರದ ಆಧಾರದ ಮೇಲೆ ಇಡಿ ದಾಳಿಯಾಗಿದೆ.
ಮೊದಲು ಜೆಡಿಎಸ್‌ನಲ್ಲಿದ್ದ ವೀರೇಂದ್ರ ಪಪ್ಪಿ ಬಳಿಕ ಕಾಂಗ್ರೆಸ್ ಸೇರಿದ್ದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಚಿತ್ರದುರ್ಗ ಕ್ಷೇತ್ರದಲ್ಲಿ ಕೆ.ಸಿ.ವಿರೇಂದ್ರ ಪಪ್ಪಿಗೆ ಟಿಕೆಟ್ ನೀಡಿತ್ತು. ಚುನಾವಣೆಯಲ್ಲಿ ಅವರು 122,021 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2016ರಲ್ಲಿ ಕೆ.ಸಿ.ವೀರೇಂದ್ರ ಪಪ್ಪಿ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು.