ಧರ್ಮಸ್ಥಳ ವಿಚಾರ: ಒಂದು ವಾರ ಧರ್ಮಯುದ್ಧ ವಿಜಯೇಂದ್ರ ಘೋಷಣೆ

0
88

ಬೆಂಗಳೂರು: ಧರ್ಮಸ್ಥಳ ವಿಚಾರವಾಗಿ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಶುಕ್ರವಾರದಿಂದ ಪ್ರತಿ ಅಸೆಂಬ್ಲಿ ಕ್ಷೇತ್ರದಲ್ಲಿ ಬಿಜೆಪಿ ಹೋರಾಟವನ್ನು ನಡೆಸಲಿದೆ. ಒಂದು ವಾರ ಧರ್ಮಯುದ್ಧ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ತನಿಖೆಗೆ ಬೆಂಬಲ ನೀಡಲಾಗುತ್ತದೆ, ಅಪಪ್ರಚಾರಕ್ಕೆ ವಿರೋಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ವಿಚಾರವಾಗಿ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ‘ಧರ್ಮದ ಉಳಿವಿಗಾಗಿ ಧರ್ಮ ಯುದ್ಧ’ ಹೋರಾಟವನ್ನು ಆಗಸ್ಟ್ 22ರಿಂದ ಒಂದು ವಾರ ಕಾಲ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಲಾಗುವುದು ಎಂದು ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ದಿನೇಶ್ ಗುಂಡೂರಾವ್ ಅವರು ನೀಡಿರುವ ಹೇಳಿಕೆಗಳು ಎಲ್ಲರಿಗೂ ತಿಳಿದಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ವಿಚಾರವಾಗಿ ರಾಜ್ಯ ಸರ್ಕಾರದ ನಡವಳಿಕೆ ಬಗ್ಗೆ ನಮಗೂ ಅನುಮಾನಗಳು ಕಾಡುತ್ತಿವೆ. ಹೀಗಾಗಿ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ‘ಧರ್ಮದ ಉಳಿವಿಗಾಗಿ ಧರ್ಮ ಯುದ್ಧ’ ಪ್ರತಿಭಟನೆಯನ್ನು ಶುಕ್ರವಾರದಿಂದ ಮುಂದಿನವಾರದವರೆಗೂ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಪ್ರಕಟಿಸಿದರು.

ಧರ್ಮಸ್ಥಳದ ಪ್ರಕರಣ ಕುರಿತಂತೆ ತನಿಖೆ ವಿಚಾರದಲ್ಲಿ ಈಗಲೂ ಕೂಡ ನಾವು ಹಿಂದೆ ಸರಿದಿಲ್ಲ. ಆದರೆ ತನಿಖೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರಗಳು ನಡೆದುಕೊಂಡು ಬಂದಿವೆ. ಇಂಥ ಅಪಪ್ರಚಾರವನ್ನು ನಿಲ್ಲಿಸುವ, ತಡೆಯುವ ಮತ್ತು ಕಟ್ಟಿಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಅಪಪ್ರಚಾರಕ್ಕೆ ಕ್ರಮ ಏಕಿಲ್ಲ?: ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಬೇರೆ ಬೇರೆ ಸಂದರ್ಭದಲ್ಲಿ 24 ಗಂಟೆ ಒಳಗಾಗಿ ಎಫ್‌ಐಆರ್ ದಾಖಲಿಸುತ್ತಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನೆಪದಲ್ಲಿ ದಕ್ಷಿಣ ಕನ್ನಡದಲ್ಲಿ 81 ವರ್ಷದ ಬಿಜೆಪಿ ಹಿರಿಯ ಕಾರ್ಯಕರ್ತ ಪೂವಪ್ಪ ಅವರ ಮನೆಗೆ ರಾತ್ರಿ 1 ಗಂಟೆಗೆ ಪೊಲೀಸ್ ಅಧಿಕಾರಿಗಳು ಹೋಗಿ ಫೋಟೋ ತೆಗೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಕಾರ್ಯಕರ್ತರು ಪೋಸ್ಟ್ ಮಾಡಿದರೆ ತಡಮಾಡದೇ ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿ ಬಂಧಿಸಿರುವುದನ್ನು ಕಳೆದ ಎರಡೂವರೆ ವರ್ಷಗಳಲ್ಲಿ ನೋಡಿದ್ದೇವೆ. ಆದರೆ ಧರ್ಮಸ್ಥಳದ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸರ್ಕಾರ ಏಕೆ ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ವಿಜಯೇಂದ್ರ ಪ್ರಶ್ನಿಸಿದರು.

ಈ ಎಲ್ಲ ಗುಮಾನಿಗಳು ಇಂದು ರಾಜ್ಯಾದ್ಯಂತ ಮತ್ತು ರಾಜ್ಯದ ಅಸಂಖ್ಯಾತ ಭಕ್ತರಲ್ಲಿ ಚರ್ಚೆ ಆಗುತ್ತಿದೆ. ಇದೆಲ್ಲದರ ನಡುವೆಯೂ ಇಂದು ಯಾವ ದುಷ್ಟಶಕ್ತಿಗಳೂ ಷಡ್ಯಂತ್ರದ ಹಿಂದೆ ಕೆಲಸ ಮಾಡುತ್ತಿವೆ? ಯಾವ ಸಂಘಟನೆಗಳು ಇದಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿವೆ? ಇದನ್ನು ತಡೆಯುವ ಕೆಲಸ ರಾಜ್ಯ ಸರ್ಕಾರ ಮಾಡದೆ ಇರುವುದು ದುರದೃಷ್ಟಕರ ಎಂದು ಆಕ್ಷೇಪಿಸಿದರು.

Previous articleಇಸ್ರೋ: ಭಾರತದ ಮೊದಲ ಮಾನವ ಸಹಿತ ಗಗನಯಾನ
Next articleಧರ್ಮಸ್ಥಳ ಪ್ರಕರಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಪಾತ್ರ; ಸೊರಕೆ

LEAVE A REPLY

Please enter your comment!
Please enter your name here