ಮುತ್ತತ್ತಿ ಗ್ರಾಮದಲ್ಲಿ ನೆಲೆಸಿರುವ ಮುತ್ತತ್ತಿರಾಯನ ಜಾತ್ರಾ ಮಹೋತ್ಸವದಲ್ಲಿ 4 ದಿನಗಳ ಕಾಲ ನಡೆದ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಅಪಾರ ಭಕ್ತಾದಿಗಳ ಪಾಲ್ಗೊಂಡು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನೀತರಾದರು. ರಾಜ್ಯಾದ್ಯಂತ ಅಪಾರ ಭಕ್ತಾದಿಗಳನ್ನು ಒಳಗೊಂಡಿರುವ ದೇವಾಲಯವಿದು. 19ನೇ ಮಂಗಳವಾರ ಮೊದಲನೇ ಪೂಜೆಯಿಂದ ಪ್ರಾರಂಭಗೊಂಡು ಪಾದ ದಾರೆಯಲ್ಲಿ ಉಪವಾಸ ಪೂಜೆ, ಮಧ್ಯಾಹ್ನದ ನಂತರ ಹಾಲರವಿ ಸೇವೆ ಮತ್ತು ದೇವರ ಉತ್ಸವಗಳು ನಡೆದ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡು ಪೂಜೆ ಸಲ್ಲಿಸಿದ್ದರು.
20ನೇ ಬುಧವಾರ ದೊಡ್ಡ ಮುತ್ತತ್ತಿಯಲ್ಲಿ ಬಾಣಸಮುದ್ರ ಗ್ರಾಮಸ್ಥರಿಂದ ದೇವಾಲಯಕ್ಕೆ ಹಾಗೂ ದೇವರ ರಥಕ್ಕೆ ವಿಶೇಷವಾಗಿ ವಿವಿಧ ಪುಷ್ಪಗಳಿಂದ ಅಲಂಕರಿಸುವುದರ ಜೊತೆಗೆ ದೇವಸ್ಥಾನದ ಲ್ಲಿ ವಿಶೇಷವಾಗಿ ಪೂಜಾ ಪುನಸ್ಕಾರಗಳನ್ನು ನಡೆಸಿ ಬಂದ ಭಕ್ತರಿಗೆ ಪ್ರಸಾದ ವಿನಯೋಗಿಸಲಾಯಿತು. ಗುರುವಾರ ಬೆಳಗ್ಗೆ ಆಂಜನೇಯ ಸ್ವಾಮಿಯ ಮೂರ್ತಿಗೆ ಕಾವೇರಿ ನದಿಯಿಂದ ಶುದ್ಧವಾದ ನೀರನ್ನು ತಂದು ಶುಚಿಗೊಳಿಸಿ ಪಂಚಾಮೃತ ಹಾಗೂ ಹಾಲಿನ ಅಭಿಷೇಕಗಳನ್ನು ನಡೆಸಲಾಯಿತು. ನಂತರ ದೇವರ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಯಿತು.
ಮಧ್ಯಾಹ್ನ 4ಗಂಟೆ ಯ ನಂತರ ತಳಿಗೆ ಮನೆಯಿಂದ ದೇವರಿಗೆ ತಯಾರಿಸಿದ ನೈವೇದ್ಯ ಹಾಗೂ ಹಾಲರವಿ ಸೇವೆಗೆ ಕನಕಾಂಬರ ಕಾಕಡ ಹೂಗಳಿಂದ ಸಿಂಗರಿಸಿದ ಮಡಿಕೆ ಹಾಗೂ ದೇವರ ಮೂರ್ತಿಗಳನ್ನು ಮಡಿವಾಳ ಆಸಿದ ಮಡಿಯ ಮೇಲೆ ಚಾಮರಗಳನ್ನು ಬೀಸುತ್ತಾ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಿದ ನಂತರ ಹಾಲರವಿ ಸೇವೆ ಮಡಿಕೆಯನ್ನು ಅರ್ಚಕರಾದ ರವಿ ಹೊತ್ತು ಅರಳಿ ಮರವನ್ನೇರಿ ಹಗ್ಗದ ಸಹಾಯದಿಂದ ತುಗುಯ್ಯಾಲೆ ಹಾಡಿದಾಗ ಹರಕೆ ಒತ್ತೋವರು ಬಿದಿರು ಕೋಲಿನಿಂದ ಮಡಕೆ ಒಡೆದು ತಮ್ಮ ಭಕ್ತಿ ಸಮರ್ಪಿಸಿದರು.
ನಂತರ ಪದ್ಧತಿಯಂತೆ ಒಂಬತ್ತು ತೆಂಗಿನಕಾಯಿಗಳನ್ನು ಅರ್ಚಕರು ಹಗ್ಗದಿಂದ ಕಟ್ಟಿ ನೆಲದ ಮೇಲೆ ಎಸೆದ ತಕ್ಷಣ ಜಾಂಬವ ಜನಾಂಗದವರು ಕಾಯಿಯನ್ನು ಚೂಪಾದ ಬಿದರ ಕೋಲಿನಿಂದ ಚುಚ್ಚಿ ಚುಚ್ಚಿ ಸುಲಿಯುವುದು ಒಂದು ವಿಶೇಷ ಹಾಗೂ ಆಕರ್ಷಣೀಯವಾಗಿ ನಡೆಯಿತು.
ಭಕ್ತರು ಹುಲಿ ವಾಹನವನ್ನು ಹೊತ್ತು ದೇವಸ್ಥಾನದ ಆವರಣದಲ್ಲಿ ಮೂರು ಸುತ್ತು ಮೆರವಣಿಗೆ ಮಾಡಿದರು. ಮತ್ತು ಸಂಜೆ ಏನ್. ಕೂಡಹಳ್ಳಿ ಗ್ರಾಮಸ್ಥರಿಂದ ಹುಲಿವಾಹನ ಸೇವೆ ನಡೆಯಿತು.ಮತ್ತು ಹುಣಸನಹಳ್ಳಿ ಗ್ರಾಮಸ್ಥರಿಂದ ರಾತ್ರಿ ದೇವರ ಪಲ್ಲಕಿ ಉತ್ಸವ ನಡೆಯಿತು.ಈ ನಾಲ್ಕು ದಿನ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಂಡು ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಭಕ್ತರು ಪ್ರಾರ್ಥಿಸಿದರು.
ಅರ್ಚಕ ಕುಮಾರ್ ಮಾತನಾಡಿ, “ನಾಲ್ಕು ದಿನಗಳಿಂದ ಅಪಾರ ಭಕ್ತಾದಿಗಳ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಬಂದ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಸಹ ಏರ್ಪಡಿಸಲಾಗಿತ್ತು” ಎಂದರು.
ದೇವಸ್ಥಾನದ ಅರ್ಚಕರು ಹಾಗೂ ಬ್ಯಾಡ್ರಹಳ್ಳಿ ಗ್ರಾಮ ಪಂಚಾಯತಿಯ ಸದಸ್ಯರು ಆದ ರವಿ ಮಾತನಾಡಿ, “ಕೆಆರ್‌ಎಸ್ ಅಣೆಕಟ್ಟೆಯಿಂದ ಹೆಚ್ಚು ನೀರು ಬಿಟ್ಟಿದ್ದ ಪರಿಣಾಮ ಮುತ್ತತ್ತಿ ಬಳಿ ಹರಿಯುವ ಕಾವೇರಿ ನದಿಯಲ್ಲಿ ನೀರು ಜಾಸ್ತಿ ಬಂದಿರುತ್ತದೆ ಎಂಬ ನಿರೀಕ್ಷೆಯಿಂದ ಈ ವರ್ಷ ಭಕ್ತಾದಿಗಳ ಸಂಖ್ಯೆ ಸ್ವಲ್ಪ ಕಡಿಮೆ ಆಗಿತ್ತು” ಎಂದು ಹೇಳಿದರು.