ಬೆಂಗಳೂರು: ಬೆಂಗಳೂರು ನಗರ ಸಂಚಾರಿ ಪೊಲೀಸರು ನಗರದ ವಾಹನ ಸವಾರರಿಗೆ ಗುಡ್‌ನ್ಯೂಸ್ ನೀಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಇದ್ದರೆ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಅವಕಾಶ ನೀಡಿದ್ದಾರೆ. ಈ ಹಿಂದೆಯೂ ಇದೇ ಮಾದರಿ ಆಫರ್ ನೀಡಲಾಗಿತ್ತು.
ಈ ಕುರಿತು ಪ್ರಕಟಣೆ ಮೂಲಕ ಪೊಲೀಸರು ಮಾಹಿತಿ ನೀಡಿದ್ದಾರೆ. ಘನ ರಾಜ್ಯ ಸರ್ಕಾರವು ಸರ್ಕಾರದ ಆದೇಶ ಸಂಖ್ಯೆ: ಟಿಡಿ 27 ಟಿಡಿಓ 2023 ಬೆಂಗಳೂರು, ದಿನಾಂಕ 21.08.2025ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಈ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡವನ್ನು ಪಾವತಿಸಲು ಶೇ 50ರಷ್ಟು ರಿಯಾಯಿತಿಯನ್ನು ನೀಡಿ ಆದೇಶಿಸಿರುತ್ತದೆ.
ಈ ಆದೇಶವು ದಿನಾಂಕ: 23.08.2025 ರಿಂದ 12.09.2025 ರವರೆಗೆ ಜಾರಿಯಲ್ಲಿದ್ದು, ದಂಡವನ್ನು ಪಾವತಿಸದೇ ಇರುವ ಪ್ರಕರಣಗಳಿಗೆ ಶೇ.50 ರಷ್ಟು ದಂಡವನ್ನು ಪಾವತಿಸುವ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಬಾಕಿ ಇರುವ ದಂಡದ ವಿವರಗಳನ್ನು ವೀಕ್ಷಿಸುವ ಮತ್ತು ಪಾವತಿಸುವ ವಿಧಾನವನ್ನು ಪೊಲೀಸರು ವಿವರಿಸಿದ್ದಾರೆ.
- ಕರ್ನಾಟಕ ಸ್ಟೇಟ್ ಪೊಲೀಸ್ (ಕೆ.ಎಸ್.ಪಿ) ಆ್ಯಪ್ ಮುಖಾಂತರ ಪಾವತಿಸಬಹುದಾಗಿದೆ.
- ಬೆಂಗಳೂರು ಸಂಚಾರ ವಿಭಾಗದಿಂದ ಪರಿಚಯಿಸಿರುವ ಬಿಟಿಪಿಅಸ್ತ್ರಂ ಆಪ್ ಮೂಲಕ ಪಾತಿಸಬಹುದು.
- ಹತ್ತಿರದ ಸಂಚಾರ ಪೊಲೀಸ್ ಠಾಣೆಯಲ್ಲಿ ನೋಂದಣಿ ಸಂಖ್ಯೆ ವಿವರ ನೀಡಿ ಪಾವತಿಸಿ
- ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಪಾವತಿಸಬಹುದಾಗಿದೆ.
- ಕರ್ನಾಟಕ ಒನ್/ ಬೆಂಗಳೂರು ಒನ್ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ
ಬೆಂಗಳೂರು ನಗರದ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ವಾಹನ ಸವಾರರು 2023ರ ಫೆಬ್ರವರಿ 11ರ ತನಕ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ಈ ರಿಯಾಯಿತಿಯಲ್ಲಿ ದಂಡ ಪಾವತಿ ಮಾಡಬಹುದು. ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ತಾವನೆ ಒಪ್ಪಿದ್ದ ಕರ್ನಾಟಕ ಸರ್ಕಾರ ಈ ಹಿಂದೆ ಜುಲೈ 5 ರಿಂದ 11ರ ತನಕ ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಅವಕಾಶ ನೀಡಿತ್ತು. ಈಗ ಅವಧಿ ಮುಕ್ತಾಯವಾಗಿದ್ದು, ಮತ್ತೊಮ್ಮೆ ರಿಯಾಯಿತಿ ಘೋಷಣೆ ಮಾಡಲಾಗಿದೆ.
ಈ ಹಿಂದೆಯೂ ಇದೇ ಮಾದರಿ ಘೋಷಣೆಗಳನ್ನು ಮಾಡಲಾಗಿತ್ತು. ಶೇ.50ರ ರಿಯಾಯಿತಿ ನೀಡಿದ ನಂತರ 51 ಕೋಟಿ ರೂ.ಗೂ ಹೆಚ್ಚು ದಂಡವನ್ನು 6 ದಿನಗಳಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಸಂಗ್ರಹ ಮಾಡಲಾಗಿತ್ತು.
ಬೆಂಗಳೂರು ನಗರದಲ್ಲಿ ಲಕ್ಷಾಂತರ ವಾಹನಗಳಿದ್ದು, ಕೋಟ್ಯಾಂತರ ರೂಪಾಯಿ ದಂಡ ಬಾಕಿ ಇದೆ. ಇದನ್ನು ವಸೂಲಿ ಮಾಡಲು ನೋಟಿಸ್ ನೀಡುವ ಬದಲು ಸಂಚಾರಿ ಪೊಲೀಸರು ಈ ಮಾದರಿ ರಿಯಾಯಿತಿ ಘೋಷಣೆ ಮಾಡುತ್ತಾರೆ. ವಾಹನ ಸವಾರರು ಇದಕ್ಕೆ ಬೆಂಬಲ ನೀಡಿದ್ದಾರೆ.
ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ 80ರಷ್ಟು ಬೆಂಗಳೂರು ನಗರದ್ದೇ ಇದೆ. ಆದ್ದರಿಂದ ದಂಡ ಸಂಗ್ರಹಕ್ಕಾಗಿ ಪೊಲೀಸರು ರಿಯಾಯಿತಿ ಐಡಿಯಾವನ್ನು ಮಾಡಿ, ವಾಹನ ಸವಾರರಿಂದ ದಂಡ ಕಟ್ಟಿಸಿಕೊಳ್ಳುತ್ತಾರೆ.