ಬೆಂಗಳೂರು: ಬೆಂಗಳೂರು ನಗರಕ್ಕೆ ಗುಡ್ ನ್ಯೂಸ್. ನಗರದಲ್ಲಿ ಮತ್ತೆ ಬೈಕ್ ಟ್ಯಾಕ್ಸಿ ಸೇವೆ ಪ್ರಾರಂಭವಾಗಿದೆ. ಜೂನ್ 16ರಂದು ನಗರದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಂಡಿತ್ತು. ಈಗ ಪುನಃ ಎರಡು ಕಂಪನಿಗಳು ಈ ಸೇವೆಯನ್ನು ಆರಂಭಿಸಿವೆ.
ರ‍್ಯಾಪಿಡೋ ಮತ್ತು ಉಬರ್ ನಗರದಲ್ಲಿ ಗುರುವಾರದಿಂದಲೇ ಬೈಕ್ ಟ್ಯಾಕ್ಸಿ ಸೇವೆಯನ್ನು ಆರಂಭಿಸಿದೆ. ಕರ್ನಾಟಕ ಹೈಕೋರ್ಟ್ ಬೈಕ್ ಟ್ಯಾಕ್ಸಿ ಕುರಿತು ನಿಯಮ ರೂಪಿಸುವಂತೆ ಸೂಚನೆ ನೀಡಿದ ಹಿನ್ನಲೆಯಲ್ಲಿ ಸೇವೆ ಸ್ಥಗಿತಗೊಳಿಸಲಾಗಿತ್ತು.
ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಜೂನ್‌ನಲ್ಲಿ ಬೈಕ್ ಟ್ಯಾಕ್ಸಿ ಕುರಿತು ಸರ್ಕಾರ ಸ್ಪಷ್ಟ ಮಾರ್ಗಸೂಚಿ ರಚನೆ ಮಾಡುವ ತನಕ ಸೇವೆ ಸ್ಥಗಿತಗೊಳಿಸಿ ಎಂದು ನಿರ್ದೇಶನ ನೀಡಿತ್ತು. ಆದ್ದರಿಂದ ರ‍್ಯಾಪಿಡೋ ಮತ್ತು ಉಬರ್ ಸೇವೆ ಸ್ಥಗಿತಗೊಳಿಸಿತ್ತು.
ಏಕಸದಸ್ಯ ಪೀಠದ ಈ ಆದೇಶವನ್ನು ರ‍್ಯಾಪಿಡೋ ಮತ್ತು ಉಬರ್ ದ್ವಿಸದಸ್ಯ ಪೀಠದಲ್ಲಿ ಪ್ರಶ್ನೆ ಮಾಡಿದ್ದವು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಯಾಗಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ಪೀಠ ಬೈಕ್ ಸೇವೆ ನಿಷೇಧಿಸಿರುವುದು ಅಸಂವಿಧಾನಿಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಕೋರ್ಟ್ ಬೈಕ್ ಟ್ಯಾಕ್ಸಿ ಕುರಿತು ಸರ್ಕಾರ ಸ್ಪಷ್ಟ ಮಾರ್ಗಸೂಚಿ ರಚನೆ ಮಾಡಲಿ. ಅಂಕಿ ಸಂಖ್ಯೆಗಳ ಜೊತೆಗೆ ಅದಕ್ಕೆ ಸಮರ್ಥನೆಯನ್ನು ನೀಡಲಿ ಎಂದು ಹೇಳಿದೆ. ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿಕೆ ಮಾಡಿದೆ. ಆದ್ದರಿಂದ ಗುರುವಾರದಿಂದಲೇ ಬೈಕ್ ಟ್ಯಾಕ್ಸಿ ಸೇವೆ ಬೆಂಗಳೂರು ನಗರದಲ್ಲಿ ಆರಂಭವಾಗಿದೆ.
ಹೈಕೋರ್ಟ್ ಬೈಕ್ ಟ್ಯಾಕ್ಸಿ ಸೇವೆ ಮುಂದುವರೆಸುವುದಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸಿ ನಿಮ್ಮ ನಿಲುವನ್ನು ಒಂದು ತಿಂಗಳಿನಲ್ಲಿ ತಿಳಿಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಸೂಚನೆ ಕೊಟ್ಟಿದೆ.
ಅರ್ಜಿಯ ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ವಾದ ಮಂಡಿಸಿದರು. ಆಗ ನ್ಯಾಯಪೀಠ ಬೈಕ್ ಟ್ಯಾಕ್ಸಿ ಸೇವೆಗೆ ಶಾಸನಬದ್ಧ ಅನುಮತಿ ಇರುವಾಗ ರಾಜ್ಯ ಸರ್ಕಾರ ಇದಕ್ಕೆ ಸಂಪೂರ್ಣ ನಿಷೇಧ ಹೇರುವುದು ತರವಲ್ಲ. ಸದ್ಯ ಹೇರಿರುವ ನಿಷೇಧ ಅನಿರ್ದಿಷ್ಟ ಅವಧಿಗೆ ಮುಂದುವರೆಸಲು ಸಾಧ್ಯವಿಲ್ಲ ಎಂದು ಹೇಳಿತು.
ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯಿಂದ ಸಂಚಾರ ದಟ್ಟಣೆ ಉಂಟಾಗುವುದಿಲ್ಲ. ಅನೇಕ ಜನರು ತಮ್ಮ ಜೀವನೋಪಾಯಕ್ಕಾಗಿ ಈ ಸೇವೆಯನ್ನು ಅವಲಂಬಿಸಿದ್ದಾರೆ ಎಂಬುದನ್ನು ಸರ್ಕಾರ ಗಮನಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಆಗಸ್ಟ್ 13ರಂದು ಬೈಕ್ ಟ್ಯಾಕ್ಸಿ ಕುರಿತು ಮಾತನಾಡಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, “ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡುವ ಕುರಿತು ಹೈಕೋರ್ಟ್ ತೀರ್ಪು ನಂತರ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಹೇಳಿದ್ದರು.
ಬೈಕ್ ಟ್ಯಾಕ್ಸಿ ಸೇವೆಗೆ ನಿಷೇಧ ಹೇರಿದ್ದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಬಸ್ ಅಥವಾ ಇತರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ತಲುಪದ ಸ್ಥಳಗಳಿಗೆ ಈ ಬೈಕ್ ಟ್ಯಾಕ್ಸಿಗಳು ತಲುಪುತ್ತಿವೆ.
ಇದ ಕಡಿಮೆ ದೂರದ ಪ್ರಯಾಣಕ್ಕೆ ಸಹಾಯಕವಾಗಿದೆ. ಇಂತಹ ಸೇವೆ ಬಡವರಿಗೆ ಅನುಕೂಲವಾಗಿದೆ. ಬೈಕ್ ಟ್ಯಾಕ್ಸಿ ಮೇಲಿನ ನಿಷೇಧ ವಾಪಸ್ ಪಡೆಯಬೇಕು ಎಂದು ಹಲವಾರು ಜನರು, ಸಂಘಟನೆಗಳು ಸರ್ಕಾರವನ್ನು ಒತ್ತಾಯುಸಿದ್ದವು.
ಕೇಂದ್ರ ಸರ್ಕಾರ ಜುಲೈ 25ರಂದು ಮೋಟಾರು ವಾಹನಗಳ ಅಗ್ರಿಗೇಟರ್ ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಈ ಮಾರ್ಗಸೂಚಿಯನ್ನು ಎಲ್ಲಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕಳಿಸಿತ್ತು.