ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಿಪ್ಪರಗಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದ್ದು, ಮತ್ತೊಮ್ಮೆ ಕೃಷ್ಣಾನದಿ ಮೈದುಂಬಿ ಹರಿಯುತ್ತಿದೆ.
ಕಳೆದ ಹಲವಾರು ದಿನಗಳಿಂದ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರನ್ನು ಹರಿಬಿಡಲಾಗಿದೆ. ಆದ್ದರಿಂದ ಬುಧವಾರ ಮುಂಜಾನೆ ಕೃಷ್ಣಾ ನದಿಯಲ್ಲಿ ಮತ್ತೆ ನೀರಿನ ಪ್ರಮಾಣ ಹೆಚ್ಚಾಗಿದೆ.
ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಕಳೆದ ಹಲವಾರು ದಿನಗಳಿಂದ ಮಳೆ ಸುರಿಯುತ್ತಿದ್ದು, ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ಕೆಲವು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಇದೆ.
ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ರಾಜಾಪುರ ಬ್ಯಾರೇಜ್‌ನಿಂದ ನಿರಂತರವಾಗಿ ನೀರು ಹರಿದು ಬಿಡುತ್ತಿರುವುದರಿಂದ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬುಧವಾರ ಮುಂಜಾನೆ 6 ಗಂಟೆಗೆ ಹಿಪ್ಪರಗಿ ಜಲಾಶಯಕ್ಕೆ 1,13,500 ಕ್ಯೂಸೆಕ್ ಒಳ ಹರಿವು ಇದ್ದು, 1,12,750 ಕ್ಯೂಸೆಕ್ ಹೊರ ಹರಿವು ಇದೆ.
ನೀರಿನ ಮಟ್ಟ 522.72 ಮೀಟರ್ ಆಗಿದೆ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬಿಡಕರ್ ತಿಳಿಸಿದ್ದಾರೆ. ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾ 270 ಮಿ.ಮೀ, ನವುಜಾ 387 ಮಿ.ಮೀ, ಮಹಾಬಳೇಶ್ವರ 308 ಮಿ.ಮೀ. ಮಳೆಯಾದ ವರದಿಯಾಗಿದೆ.