ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಸೇತುವೆಗಳು ಮುಳುಗಡೆಯಾಗಿದ್ದು, ಜನ ಸಂಪರ್ಕ ಕಡಿತಗೊಂಡಿದೆ. ಯಾದಗಿರಿ ತಾಲೂಕಿನ ಪಗಲಾಪುರ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ ಶಾಲಾ-ಕಾಲೇಜುಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ ಮಾಡಿದೆ.
ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ಕೃಷ್ಣ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದ್ದು, ಇದರಿಂದ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ನದಿ ನೀರು ರಭಸವಾಗಿ ಹರಿಯುತ್ತಿದ್ದು, ಶಹಾಪುರ ತಾಲೂಕಿನ ಕೊಳ್ಳೂರು ಸೇತುವೆ ಮುಳುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ.
ಈ ಸೇತುವೆ ಮುಳುಗಡೆಯಾದರೆ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ರಾಜ್ಯಗಳಿಗೆ ರಸ್ತೆ ಸಂಪರ್ಕ ಕಡಿತವಾಗಲಿದೆ. ಇನ್ನೂ ಪ್ರವಾಹ ಪರಿಸ್ಥಿತಿ ಕಾರಣ ಜಿಲ್ಲೆಯ ನದಿ ಪಾತ್ರದ ಗ್ರಾಮಗಳ ಜನತೆ ನದಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಶಾಲಾ, ಕಾಲೇಜುಗಳಿಗೆ ರಜೆ : ವಾಯುಭಾರ ಕುಸಿತದಿಂದಾಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಇನ್ನೂ 3-4 ದಿನಗಳವರೆಗೆ ಸುರಿಯುವ ಪರಿಣಾಮ ಮುಂಜಾಗ್ರತ ಕ್ರಮವಾಗಿ ಆಗಸ್ಟ್ 19 ಮತ್ತು 20 ಎರಡು ದಿನಗಳವರೆಗೆ ಅಂಗನವಾಡಿ ಸೇರಿದಂತೆಯೇ ಎಲ್ಲ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.
ಈ ಕುರಿತು ಮಂಗಳವಾರ ಬೆಳಗ್ಗೆ ಆದೇಶ ಹೊರಡಿಸಿರುವ ಡಿಸಿ ಹರ್ಷಲ್ ಭೋಯರ್, ವಿಪರೀತ ಮಳೆಯಾಗುತ್ತಿರುವ ಮಕ್ಕಳು ಸಕಾಲಕ್ಕೆ ಶಾಲೆಗಳಿಗೆ ಹೋಗಿ ಬರಲು ಕಷ್ಟವಾಗುವ ಕಾರಣ ಮತ್ತು ಆರೋಗ್ಯದ ದೃಷ್ಟಿಯಿಂದ ಎರಡು ದಿನಗಳ ರಜೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.