ಬೆಂಗಳೂರು: ಬೆಂಗಳೂರು ನಗರದ ಹೆಬ್ಬಾಳ ಫ್ಲೈ ಓವರ್ ಲೋಕಾರ್ಪಣೆ ಮಾಡಲಾಗಿದೆ. ನಗರದ ಪ್ರಮುಖ ಜಂಕ್ಷನ್‌ನಲ್ಲಿ ಈ ಫ್ಲೈ ಓವರ್‌ನಿಂದ ಸಂಚಾರ ದಟ್ಟಣೆ ಶೇ 30ರಷ್ಟು ಕಡಿಮೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಬ್ಬಾಳ ಜಂಕ್ಷನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಆರ್.ಪುರಂ ಕಡೆಯಿಂದ ಮೇಖ್ರಿ ವೃತ್ತ ಸಂಪರ್ಕಿಸುವ ನೂತನ ಫ್ಲೈ ಓವರ್ ಲೂಪ್ ಲೋಕಾರ್ಪಣೆಗೊಳಿಸಿದರು. ಫ್ಲೈ ಓವರ್ ಉದ್ಘಾಟನೆ ಬಳಿಕ ಡಿ.ಕೆ.ಶಿವಕುಮಾರ್ ಬೈಕ್ ಓಡಿಸಲು ತಯಾರಾದರು. ಆಗ ಸಿದ್ದರಾಮಯ್ಯ ‘ಏನಯ್ಯಾ ಬೈಕ್ ಓಡಿಸ್ತಿಯಾ?’ ಎಂದು ಹೇಳಿದರು.
ಫ್ಲೈ ಓವರ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಬೈರತಿ ಸುರೇಶ್, ಬಿಡಿಎ ಅಧ್ಯಕ್ಷರಾದ ಎನ್.ಎ.ಹ್ಯಾರಿಸ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ನೂತನ ಫ್ಲೈ ಓವರ್ ಲೂಪ್ ಲೋಕಾರ್ಪಣೆ ಬಳಿಕ ಡಿ.ಕೆ.ಶಿವಕುಮಾರ್ ಫ್ಲೈ ಓವರ್ ಮೇಲೆ ಬೈಕ್‌ನಲ್ಲಿ ಸಂಚಾರವನ್ನು ನಡೆಸಿದರು. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಈ ಕಾರ್ಯಕ್ರಮದ ಬಳಿಕ ಮಾತನಾಡಿದ ಡಿಸಿಎಂ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್, “ಮೂರು ತಿಂಗಳಲ್ಲಿ ಮತ್ತೆ ಹೆಬ್ಬಾಳ ಫ್ಲೈಓವರ್ ವಿಸ್ತರಣೆ ಆಗಲಿದೆ. ನವೆಂಬರ್ ಒಳಗೆ ಆರು ಲೇನ್ ಆಗುತ್ತದೆ. ಎಸ್ಟಿಮ್ ಮಾಲ್‌ನಿಂದ 1 ಕಿ.ಮೀ. ತನಕ ಟನಲ್ ಬರುತ್ತದೆ. ತುರ್ತು ಸಂದರ್ಭದಲ್ಲಿ ಇದರ ಬಳಕೆಯಾಗುತ್ತದೆ” ಎಂದು ಹೇಳಿದರು.
ಬೈಕ್ ಓಡಿಸುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಡಿ.ಕೆ.ಶಿವಕುಮಾರ್ “ನನ್ನ ಹಳೆಯ ಯೆಜ್ಡಿ ರೋಡ್‌ಕಿಂಗ್ ಬೈಕ್ ಅನ್ನು ಚಾಲನೆ ಮಾಡುವ ಮೂಲಕ ಕಾಲೇಜುದಿನಗಳನ್ನು ಮೆಲುಕು ಹಾಕಿಕೊಂಡೆ” ಎಂದು ಬರೆದುದ್ದಾರೆ.
“ಹೆಬ್ಬಾಳದ ಮೂಲಕ ಸಂಚರಿಸುವವರಿಗೆ ಈ ಮೇಲ್ಸೇತುವೆ ಗೇವ್ ಚೇಂಜರ್ ಆಗಿರಲಿದೆ. 700 ಮೀಟರ್ ಉದ್ದದ ಈ ಫ್ಲೈ ಓವರ್ ಅನ್ನು 80 ಕೋಟಿ ರೂ. ವೆಚ್ಚದಲ್ಲಿ ಕೇವಲ 7 ತಿಂಗಳಿನಲ್ಲಿ ಪೂರ್ಣಗೊಳಿಸಲಾಗಿದೆ” ಎಂದು ಡಿ.ಕೆ.ಶಿವಕುಮಾರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೆ.ಆರ್.ಪುರ-ಮೇಖ್ರಿ ಸರ್ಕಲ್ ಸಂಪರ್ಕಿಸುವ 700 ಮೀಟರ್ ಉದ್ದದ ಫ್ಲೈ ಓವರ್ ಲೂಪ್ ಅನ್ನು ನಿರ್ಮಾಣ ಮಾಡಿದೆ. ಇದರ ವೆಚ್ಚ 80 ಕೋಟಿ ರೂ.ಗಳು.
ಈ ಫ್ಲೈ ಓವರ್ ಲೂಪ್ ಉದ್ಘಾಟನೆ ಬಳಿಕ ಹೆಬ್ಬಾಳ ಜಂಕ್ಷನ್‌ನಲ್ಲಿ ವಾಹನಗಳ ದಟ್ಟಣೆ ಶೇ 30ರಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಮೇಖ್ರಿ ಸರ್ಕಲ್ ಬಳಿ ದಟ್ಟಣೆ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.
“ಬಿಜೆಪಿ ಸರ್ಕಾರ 4 ವರ್ಷ ಇದ್ದಾಗ ನಯಾಪೈಸೆ ಕೆಲಸ ಮಾಡಿಲ್ಲ. ನಮ್ಮ ಸರ್ಕಾರ ಬಂದ ತಕ್ಷಣ ಹೆಬ್ಬಾಳ ಫ್ಲೈ ಓವರ್ ಕೆಲಸ ವೇಗವಾಗಿ ಮಾಡುತ್ತಿದ್ದೇವೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೆಲವು ದಿನಗಳ ಹಿಂದೆ ಹೇಳಿದ್ದರು.
“ಒಂದು ವರ್ಷದಲ್ಲಿ ಅಗಲೀಕರಣ ನಡೆದಿದೆ. 6-7 ತಿಂಗಳಿನಲ್ಲಿ ಫ್ಲೈ ಓವರ್ ನಿರ್ಮಾಣವಾಗಲಿದೆ. ಬಿಜೆಪಿ ಕೆಲಸ ಮಾಡಲಿಲ್ಲ. ನಾವು ಮಾತುಕೊಟ್ಟಂತೆ ಕೆಲಸ ಮಾಡುತ್ತೇವೆ” ಎಂದು ತಿಳಿಸಿದ್ದರು.