ಪಾಟ್ನಾ: ರಾಹುಲ್ ಗಾಂಧಿ ಮತ್ತೊಂದು ಯಾತ್ರೆಯನ್ನು ಆರಂಭಿಸಿದ್ದಾರೆ. 16 ದಿನಗಳ ಕಾಲ ಈ ಯಾತ್ರೆ ನಡೆಯಲಿದೆ. ಈಗಾಗಲೇ ಮತ ಕಳ್ಳತನ ಆರೋಪ ಮಾಡಿ ಸಂಚಲನ ಮೂಡಿಸಿರುವ ಅವರ ಈ ಯಾತ್ರೆಗೆ ಹೇಗೆ ಜಲ ಬೆಂಬಲ ಸಿಗಲಿದೆ? ಎಂದು ಕಾದು ನೋಡಬೇಕಿದೆ.
ಬಿಹಾರ ವಿಧಾನಸಭೆ ಚುನಾವಣೆ-2025 ಗಮನದಲ್ಲಿಟ್ಟುಕೊಂಡು ಆರ್‌ಜೆಡಿ ನಾಯಕರ ಜೊತೆ ಸೇರಿ ಬಿಹಾರದಲ್ಲಿ ರಾಹುಲ್ ಗಾಂಧಿ ಭಾನುವಾರ ಈ ಯಾತ್ರೆಯನ್ನು ಆರಂಭಿಸಿದ್ದಾರೆ. ‘ಮತ ಅಧಿಕಾರ ಯಾತ್ರೆ’ ಎಂದು ಈ ಯಾತ್ರೆಗೆ ನಾಮಕರಣ ಮಾಡಲಾಗಿದೆ. 16 ದಿನ, 20 ಜಿಲ್ಲೆಗಳಲ್ಲಿ 1,300 ಕಿ.ಮೀ.ಯಾತ್ರೆ ನಡೆಯಲಿದೆ. ಬಿಹಾರ ಚುನಾವಣೆಗೂ ಮೊದಲು ಇದು ರಾಜ್ಯ ರಾಜಕೀಯದಲ್ಲಿ ಬಹಳ ಚರ್ಚೆಗೆ ಕಾರಣವಾಗಿದೆ.
ಮತ ಕಳ್ಳತನ: ಬಿಹಾರ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಹುಲ್ ಗಾಂಧಿ, ಆರ್‌ಜೆಡಿಯ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಪುತ್ರ ತೇಜಸ್ವಿ ಯಾದವ್ ಜೊತೆಗೆ ಈ ‘ಮತ ಅಧಿಕಾರ ಯಾತ್ರೆ’ ಆರಂಭಿಸಿದರು.
ಭಾನುವಾರ ಆರಂಭವಾದ ಯಾತ್ರೆ ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ವಿರೋಧಿಸುವುದಾಗಿದೆ. ಮತ ಕಳ್ಳತನವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿ ಯಾತ್ರೆಯನ್ನು ಕೈಗೊಳ್ಳಲಾಗಿದೆ.
ಬಿಹಾರ ರಾಜ್ಯದ ಸಾಸಾರಾಮ್ ಜಿಲ್ಲೆಯಲ್ಲಿ ಭಾನುವಾರ ಯಾತ್ರೆಯನ್ನು ಆರ್‌ಜೆಡಿ ನಾಯಕರ ಜೊತೆ ರಾಹುಲ್ ಗಾಂಧಿ ಆರಂಭಿಸಿದ್ದು, ಸೆಪ್ಟೆಂಬರ್ 1ರಂದು ಪಾಟ್ನಾದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಯಾತ್ರೆ ಕುರಿತು ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ’16 ಜಿಲ್ಲೆ, 20+ ಜಿಲ್ಲೆಗಳು 1,300 + ಕಿ.ಮೀ.ಗಳು. ನಾವು ಜನರ ಬಳಿ ಬರುತ್ತಿದ್ದೇವೆ ಮತದ ಅಧಿಕಾರ ಕೇಳಲು. ಇದು ಸಂವಿಧಾನ ನಮಗೆ ನೀಡಿರುವ ಹಕ್ಕಿನ ರಕ್ಷಣೆಗಾಗಿ. ಒಬ್ಬ ವ್ಯಕ್ತಿ ಒಂದು ಮತ. ನಮ್ಮ ಸಂವಿಧಾನವನ್ನು ರಕ್ಷಣೆ ಮಾಡಲು ಬಿಹಾರದಲ್ಲಿ ನಮ್ಮ ಜೊತ ಸೇರಿ’ ಎಂದು ಕರೆ ನೀಡಿದ್ದಾರೆ.
‘ಮತ ಅಧಿಕಾರ ಯಾತ್ರೆ’ ಸಂದರ್ಭದಲ್ಲಿ ರಾಹುಲ್ ಗಾಂಧಿ ಔರಂಗಾಬಾದ್, ಗಯಾ, ನಳಂದ, ಬಾಗಲ್‌ಪುರ್, ಪುರೇನಾ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಪಾಟ್ನಾದಲ್ಲಿ ಈ ಯಾತ್ರೆ ಅಂತಿಮಗೊಳ್ಳಲಿದೆ.
ರಾಹುಲ್‌ಗೆ ಆಯೋಗದ ತಿರುಗೇಟು: ಮತ ಕಳ್ಳತನ ಆರೋಪ ಮಾಡಿರುವ ರಾಹುಲ್ ಗಾಂಧಿಗೆ ಕೇಂದ್ರ ಚುನಾವಣಾ ಆಯೋಗ ಭಾನುವಾರ ತಿರುಗೇಟು ನೀಡಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದರು. “ಆರೋಪಗಳಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ 7 ದಿನಗಳಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು. ಇಲ್ಲವಾದಲ್ಲಿ ಆರೋಪಗಳು ಆಧಾರ ರಹಿತ ಎಂದು ಪರಿಗಣಿಸಲಾಗುತ್ತದೆ” ಎಂದು ಹೇಳಿದರು.
“ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದೇ ಯಾವುದೇ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದಿಲ್ಲ. ಪ್ರತಿಯೊಬ್ಬರ ಮತದಾರನ ಜೊತೆ ಚುನಾವಣಾ ಆಯೋಗ ನಿಂತಿದೆ” ಎಂದು ಸ್ಪಷ್ಟಪಡಿಸಿದರು.
“ಬಿಹಾರದಲ್ಲಿ ತರಾತುರಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡಲಾಗುತ್ತಿದೆ ಎಂಬುದು ಸುಳ್ಳು. ಪ್ರತಿ ಚುನಾವಣೆಗೂ ಮೊದಲು ನಾವು ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತೇವೆ. ಇದು ಆಯೋಗದ ಕಾನೂನು ಬದ್ಧವಾದ ಕರ್ತವ್ಯ” ಎಂದರು.
2024ರ ಲೋಕಸಭೆ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಈ ಕುರಿತು ಕರ್ನಾಟಕದ ಬೆಂಗಳೂರು ನಗರದಲ್ಲಿ ಆಗಸ್ಟ್ 8ರಂದು ಬೃಹತ್ ಪ್ರತಿಭಟನೆಯನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ್ದರು. ಈಗ ಬಿಹಾರದಲ್ಲಿ ಚುನಾವಣೆ ಸಮೀಪಿಸುತ್ತಿರುವಾಗ ಯಾತ್ರೆ ನಡೆಸಲಾಗುತ್ತಿದೆ.