ಪಾಟ್ನಾ: ಸ್ಮರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಯುವಕ, ಯುವತಿಯರಿಗೆ ಬಿಹಾರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಬಿಹಾರ ವಿಧಾನಸಭೆ ಚುನಾವಣೆ 2025ಕ್ಕೆ ದಿನಗಣನೆ ನಡೆಯುತ್ತಿರುವಾಗಲೇ ರಾಜ್ಯ ಸರ್ಕಾರ ಯುವ ಜನರನ್ನು ಸೆಳೆಯಲು ಮಹತ್ವದ ಘೋಷಣೆಯನ್ನು ಮಾಡಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಕುರಿತು ಘೋಷಣೆ ಮಾಡಿದ್ದಾರೆ. ಅಭ್ಯರ್ಥಿಗಳು ಎಲ್ಲಾ ನೇಮಕಾತಿಗಳ ಪೂರ್ವಭಾವಿ ಪರೀಕ್ಷೆಗೆ 100 ರೂ. ಮತ್ತು ಮುಖ್ಯ ಪರೀಕ್ಷೆಗೆ ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ.
ನಿತೀಶ್ ಕುಮಾರ್ ಈ ಘೋಷಣೆ ರಾಜ್ಯದ ಲಕ್ಷಾಂತರ ಯುವ ಸಮುದಾಯಕ್ಕೆ ಸಹಾಯಕವಾಗಲಿದೆ. ಅದರಲ್ಲೂ ಶುಲ್ಕದ ಕಾರಣಕ್ಕೆ ಪರೀಕ್ಷೆ ಬರೆಯಲು ಆಲೋಚನೆ ನಡೆಸುವ ಬಡ, ಮಧ್ಯಮ ವರ್ಗದ ಯುವ ಸಮುದಾಯಕ್ಕೆ ಅನುಕೂಲವಾಗಲಿದೆ.
ಏಕರೂಪ ಶುಲ್ಕ: ಶುಕ್ರವಾರ ನಿತೀಶ್ ಕುಮಾರ್ ಏಕರೂಪ ಪರೀಕ್ಷಾ ಶುಲ್ಕ ಎಂಬ ಘೋಷಣೆಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಎಲ್ಲಾ ನೇಮಕಾತಿಗಳ ಪೂರ್ವಭಾವಿ ಪರೀಕ್ಷೆಗೆ ಅಭ್ಯರ್ಥಿಗಳು ರೂ. 100 ಶುಲ್ಕ ಪಾವತಿಸಬೇಕು. ಮುಖ್ಯ ಪರೀಕ್ಷೆಗೆ ಯಾವುದೇ ಶುಲ್ಕವಿಲ್ಲ ಎಂದು ಹೇಳಿದರು.
ನಿತೀಶ್ ಕುಮಾರ್ ತಮ್ಮ ಘೋಷಣೆಯಲ್ಲಿ, “ಸರ್ಕಾರಿ ಉದ್ಯೋಗಗಳಿಗಾಗಿ ಎಲ್ಲಾ ಆಯೋಗಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಾಥಮಿಕ ಪರೀಕ್ಷೆಗಳ (ಪಿಟಿ) ಶುಲ್ಕದಲ್ಲಿ ಏಕರೂಪತೆಯನ್ನು ತರಲು ಮತ್ತು ಅಭ್ಯರ್ಥಿಗಳಿಗೆ ಗಮನಾರ್ಹ ಶುಲ್ಕ ರಿಯಾಯಿತಿ ನೀಡಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದನ್ನು ಘೋಷಿಸಲು ನನಗೆ ಸಂತೋಷವಾಗುತ್ತಿದೆ” ಎಂದು ಹೇಳಿದ್ದಾರೆ.
“ನೇಮಕಾತಿಗಳ ಪೂರ್ವಭಾವಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಶುಲ್ಕವಾಗಿ 100 ರೂ. ಮಾತ್ರ ವಿಧಿಸಲು ಸೂಚನೆಗಳನ್ನು ನೀಡಲಾಗಿದೆ. ಪ್ರಾಥಮಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಮುಖ್ಯ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಇನ್ನು ಮುಂದೆ ಯಾವುದೇ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ” ಎಂದು ತಿಳಿಸಿದರು.
ಬಿಹಾರ ರಾಜ್ಯದ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳನ್ನು ಬಿಹಾರ ಲೋಕಸೇವಾ ಆಯೋಗ, ಬಿಹಾರ ಸ್ಟಾಫ್ ಸೆಲೆಕ್ಷನ್ ಕಮಿಟಿ, ಬಿಹಾರ ಟೆಕ್ನಿಕಲ್ ಸರ್ವೀಸ್ ಕಮಿಷನ್, ಬಿಹಾರ ಪೊಲೀಸ್ ಸಬಾರ್ಡಿನೇಟ್ ಸರ್ವೀಸ್ ಕಮೀಷನ್, ಸೆಂಟ್ರಲ್ ಕಾನ್ಸ್‌ಟೇಬಲ್ ಸೆಲೆಕ್ಷನ್ ಬೋರ್ಡ್ ಸೇರಿ ವಿವಿಧ ಆಯೋಗಗಳು ನಡೆಸುತ್ತವೆ.
ಬಿಹಾರ ರಾಜ್ಯದವರಿಗೆ ಉದ್ಯೋಗ ನೀಡುವುದು ಮುಖ್ಯಮಂತ್ರಿ ನಿತೀಶ್ ಕುಮಾರ್ ಆಡಳಿತ ಪ್ರಮುಖ ಗುರಿಯಾಗಿದೆ. ಈಗ ವಿಧಾನಸಭೆ ಚುನಾವಣೆ ಹತ್ತಿರುವಾಗುತ್ತಿರುವ ಕಾರಣ ಯುವ ಸಮುದಾಯವನ್ನು ಸೆಳೆಯಲು ಈ ಘೋಷಣೆ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಜ್ಯದ ಜನರಿಗೆ ಉದ್ಯೋಗ ನೀಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕ್ರಮಗಳ ಭಾಗವಾಗಿಯೇ ಈಗ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆಯ ಶುಲ್ಕದ ಬಗ್ಗೆ ಬಿಹಾರ ರಾಜ್ಯ ಸರ್ಕಾರ ತೀರ್ಮಾನವನ್ನು ಕೈಗೊಂಡಿದೆ. ಚುನಾವಣೆಯಲ್ಲಿ ಇದು ಹೇಗೆ ಸಹಾಯಕವಾಗಲಿದೆ? ಎಂದು ಕಾದು ನೋಡಬೇಕಿದೆ.
ಬಿಹಾರದ ಸಿಎಂ ನಿತೀಶ್ ಕುಮಾರ್ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಜೊತೆ ಇದ್ದಾರೆ. ಬಿಹಾರ ಚುನಾವಣೆ ನವೆಂಬರ್‌ನಲ್ಲಿ ನಡೆಯುವ ನಿರೀಕ್ಷೆ ಇದೆ. ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಕಾಂಗ್ರೆಸ್, ಆರ್‌ಜೆಡಿ ಸೇರಿದಂತೆ ಇತರ ಪಕ್ಷಗಳು ‘ಇಂಡಿಯಾ’ ಮೈತ್ರಿಕೂಟದ ಮೂಲಕ ಎದುರಿಸಲಿವೆ.