ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಬೆಂಗಳೂರು ನಗರದಲ್ಲಿ ಬುಧವಾರ ಬೆಳಗ್ಗೆಯಿಂದ ರಾತ್ರಿಯ ತನಕ ಜಿಟಿ ಜಿಟಿ ಮಳೆ ಜನರನ್ನು ಕಾಡಿದೆ. ಆದರೆ ಆಗಸ್ಟ್ 18ರಿಂದ ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಅನ್ವಯ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್‌ಎನ್‌ಎಂಡಿಸಿ) ರಾಜ್ಯದ ಹವಾಮಾನ ಪರಿಸ್ಥಿತಿ ವಿವರಣೆ ನೀಡಿದೆ. ರಾಜ್ಯದಲ್ಲಿ ಇನ್ನಷ್ಟು ದಿನ ಮಳೆ ಮುಂದುವರೆಯಲಿದೆ ಎಂದು ಹೇಳಿದೆ.
ಮಳೆ ಮುನ್ಸೂಚನೆ: ಗುರುವಾರ ರಾಜ್ಯದ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆಯಾಗಲಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಕೆಎಸ್‌ಎನ್‌ಎಂಡಿಸಿ ಹೇಳಿದೆ. ಅಲ್ಲದೇ ಮುಂದಿನ 7 ದಿನಗಳ ಮಳೆ ಮುನ್ಸೂಚನೆಯನ್ನು ನೀಡಿದೆ.
ರಾಜ್ಯದಾದ್ಯಂತ ಜೋರಾದ ಗಾಳಿಯೊಂದಿಗೆ ಚದುರಿದಿಂತೆ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆ. ಆಗಸ್ಟ್ 18 ರಿಂದ ಕರಾವಳಿ ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ಕೊಟ್ಟಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಲ್ಲದೇ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಆಗಸ್ಟ್ 15 ರಿಂದ 19ರ ತನಕ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ. ಚಂಡಮಾರುತದ ಪರಿಣಾಮ ನೈಋತ್ಯ ಮುಂಗಾರು ಸಹ ಒಂದು ವಾರ ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಆಗಸ್ಟ್ 20ರ ತನಕ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ಕೊಡಲಾಗಿದೆ.
ಬೆಂಗಳೂರು ನಗರದಲ್ಲಿ ಬುಧವಾರ ಇಡೀ ದಿನ ಜಿಟಿ ಜಿಟಿ ಮಳೆಯಾಗಿದೆ. ನಗರದಲ್ಲಿ ಸೋಮವಾರ 27 ಡಿಗ್ರಿ, ಮಂಗಳವಾರ 25 ಡಿಗ್ರಿ ಮತ್ತು ಬುಧವಾರ 22.6 ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಗುರುವಾರ, ಶುಕ್ರವಾರ ಉಷ್ಣಾಂಶ ಏರಿಕೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಇನ್ನಷ್ಟು ದಿನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ.
ಆಗಸ್ಟ್ 16ರ ತನಕ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಭಾರೀ ಮಳೆ ಮನ್ಸೂಚನೆ ನೀಡಲಾಗಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ.
ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿಯೂ ಮಳೆ ಸಾಧ್ಯತೆ ಇದೆ.