ನಮ್ಮ ಮೆಟ್ರೋ ನಿಲ್ದಾಣಕ್ಕೆ ಬಿಜೆಪಿ ಶಾಸಕ ಮುನಿರತ್ನ ಹೆಸರು, ಏನಿದು ಚರ್ಚೆ?

0
79

ಬೆಂಗಳೂರು: ನಮ್ಮ ಮೆಟ್ರೋ ಬೆಂಗಳೂರು ಜನರ ಜೀವನಾಡಿಯಾಗುತ್ತಿದೆ. ಮೆಟ್ರೋ ನಿಲ್ದಾಣಕ್ಕೆ ನಟ ದಿ.ಶಂಕರನಾಗ್ ಹೆಸರು ಇಡಬೇಕು ಎಂಬ ಬೇಡಿಕೆ ಇದೆ. ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ಮೆಟ್ರೋ ನಿಲ್ದಾಣಕ್ಕೆ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಹೆಸರು ಇಡುವ ಕುರಿತು ಚರ್ಚೆ ನಡೆದಿದೆ.

ಶಾಸಕ ಮುನಿರತ್ನ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಈ ಕುರಿತು ಚರ್ಚೆಗಳು ನಡೆದಿವೆ. ನಮ್ಮ ಮೆಟ್ರೋ ಯೋಜನೆಯಲ್ಲಿ ಬಾಗಲೂರು ಮತ್ತು ದೊಡ್ಡಜಾಲ ನಿಲ್ದಾಣಗಳ ನಡುವೆ ಬೆಟ್ಟಹಲಸೂರು ನಿಲ್ದಾಣ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ.

ವಿಧಾನಸಭೆ ಕಲಾಪದಲ್ಲಿ ಈ ಕುರಿತು ಚರ್ಚೆ ನಡೆದಾಗ, ಡಿ.ಕೆ.ಶಿವಕುಮಾರ್ ಮಾತನಾಡಿ, “ಶಾಸಕ ಮುನಿರತ್ನ ಬೆಟ್ಟಹಲಸೂರು ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಹಣ ನೀಡಿದರೆ, ಆ ನಿಲ್ದಾಣಕ್ಕೆ ಮುನಿರತ್ನ ಅಂಡ್ ಕಂಪನಿ ಎಂದೇ ಹೆಸರಿಡಲು ಸಿದ್ಧ” ಎಂದು ಹೇಳಿದ್ದಾರೆ.

ಏನಿದು ಮುನಿರತ್ನ ಹೆಸರಿನ ಚರ್ಚೆ?: ಬೆಂಗಳೂರು ನಗರದಲ್ಲಿ ಕಂಪನಿಗಳ ಸಿಎಸ್‌ಆರ್ ನಿಧಿ ಬಳಕೆ ಮಾಡಿಕೊಂಡು ಮೆಟ್ರೋ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಹೀಗೆ ನಿಧಿ ನೀಡಿದ ಕಂಪನಿಗಳ ಹೆಸರುಗಳನ್ನು ನಮ್ಮ ಮೆಟ್ರೋ ನಿಲ್ದಾಣಕ್ಕೆ ಇಡಲಾಗಿದೆ.

ಈ ಮಾದರಿಯನ್ನು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಸಹ ಶ್ಲಾಘಿಸಿದ್ದಾರೆ. ಇದು ದೇಶದ ಇತರ ರಾಜ್ಯಗಳಿಗೆ ಮಾದರಿ ಎಂದು ಹೇಳಿದ್ದಾರೆ. ಇನ್ಫೋಸಿಸ್, ಡೆಲ್ಟಾ ಹೆಸರುಗಳನ್ನು ಈಗಾಗಲೇ ಮೆಟ್ರೋ ನಿಲ್ದಾಣಕ್ಕೆ ಇಡಲಾಗಿದೆ.

ನಮ್ಮ ಮೆಟ್ರೋ ಯೋಜನೆಯ ಹಂತ-2B ಕೆಆರ್ ಪುರ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಬೆಟ್ಟಹಲಸೂರು ನಿಲ್ದಾಣ ನಿರ್ಮಾಣದ ಪ್ರಸ್ತಾಪವಿದೆ. ಇದಕ್ಕೆ ಮೊದಲು ಎಂಬಿಸಿ ಗ್ರೂಪ್ ಅನುದಾನ ನೀಡುವ ಭರವಸೆ ಕೊಟ್ಟಿತ್ತು.

ಆದರೆ ಬಳಿಕ ಕಂಪನಿ ಹಿಂದೆ ಸರಿದಿದ್ದು, ಈಗ ಬಿಎಂಆರ್‌ಸಿಎಲ್ ಬೆಟ್ಟಹಲಸೂರು ನಿಲ್ದಾಣ ನಿರ್ಮಾಣದ ಪ್ರಸ್ತಾಪ ಕೈ ಬಿಟ್ಟಿದೆ. ಈ ಕುರಿತ ಚರ್ಚೆ ವೇಳೆ ಶಾಸಕ ಮುನಿರತ್ನ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಲ್ಡರ್‌ಗೆ ಕರೆ ಮಾಡಿ 24 ತಾಸಿನಲ್ಲಿ ಹಣ ಕಟ್ಟುತ್ತೀಯಾ? ಇಲ್ಲವಾ? ಎಂದು ಕೇಳಿದರೆ ಸಾಕು, ಅವರು ಹಣ ಕಟ್ಟುತ್ತಾರೆ. ಬಿಲ್ಡರ್‌ಗಳು ಕೇವಲ ಡಿ.ಕೆ. ಶಿವಕುಮಾರ್ ಮಾತು ಕೇಳುತ್ತಾರೆ ಎಂದರು.

ಆಗ ಕಲಾಪದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, “ಆ ಭಾಗದಲ್ಲಿ ಎಂಬೆಸಿ ಗ್ರೂಪ್‌ನ ಸುಮಾರು 250 ಎಕರೆ ಜಮೀನು ಇದೆ. ಮೆಟ್ರೋ ನಿಲ್ದಾಣಕ್ಕೆ ತಮ್ಮ ಹೆಸರು ಬರಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾರೆ. ರೂ.140 ಕೋಟಿ ಮೊತ್ತದಲ್ಲಿ ನಿರ್ಮಿಸಲಾಗುವ ಮೆಟ್ರೋ ನಿಲ್ದಾಣಕ್ಕೆ ರೂ.120 ಕೋಟಿ ನೀಡುವುದಾಗಿ ಹೇಳಿದ್ದರು” ಎಂದು ವಿವರಣೆ ನೀಡಿದರು.

“ಆದರೆ ಅದರಲ್ಲಿ ಕೇವಲ 1 ಕೋಟಿ ರೂ. ಮಾತ್ರ ನೀಡಿದ್ದಾರೆ. ಆ ಭಾಗದಲ್ಲಿ ಮುನಿರತ್ನ ಅವರದ್ದು 70-80 ಎಕರೆ ಜಮೀನಿದೆ. ಹೀಗಾಗಿ ಮುನಿರತ್ನ ಹಣ ಕೊಟ್ಟು ಮೆಟ್ರೋ ನಿಲ್ದಾಣಕ್ಕೆ ಮುನಿರತ್ನ ಅಂಡ್ ಕಂಪನಿ” ಎಂದು ಹೆಸರು ಇಡಲಾಗುತ್ತದೆ ಎಂದರು.

ನಮ್ಮ ಮೆಟ್ರೋಗೆ ರಾಷ್ಟ್ರಮಟ್ಟದ ಪ್ರಶಸ್ತಿ

ಕೆಲವು ದಿನಗಳ ಹಿಂದೆ ಕರ್ನಾಟಕ ಹೈಕೋರ್ಟ್‌ಗೆ ಬೆಟ್ಟಹಲಸೂರು ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಪಿಐಎಲ್ ಸಲ್ಲಿಕೆಯಾಗಿತ್ತು. ಆಗ ಈ ಕುರಿತು ಪರಿಶೀಲನೆ ನಡೆಸುವಂತೆ ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿ ಕೋರ್ಟ್ ಅರ್ಜಿ ವಜಾಗೊಳಿಸಿತ್ತು.

Previous articleಬೆಂಗಳೂರು ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ ಕೊಟ್ಟ ಬಿಬಿಎಂಪಿ
Next articleನಮ್ಮ ಮೆಟ್ರೋ ಹಳದಿ ಮಾರ್ಗ, ಬೆಂಗಳೂರಿಗೆ ಬಂತು 4ನೇ ರೈಲು

LEAVE A REPLY

Please enter your comment!
Please enter your name here