ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ನಗರದ ಹಳದಿ ನಮ್ಮ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ್ದಾರೆ. ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿಗಳು 19.15 ಕಿ.ಮೀ. ನಮ್ಮ ಮೆಟ್ರೋ ಮಾರ್ಗ ಲೋಕಾರ್ಪಣೆ ಮಾಡಿದ್ದಾರೆ. ಸೋಮವಾರದಿಂದ ಈ ಮಾರ್ಗ ಜನರ ಸಂಚಾರಕ್ಕೆ ಮುಕ್ತವಾಗಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗ ಆರ್.ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಸಂಪರ್ಕ ಕಲ್ಪಿಸಲಿದೆ. ಸದ್ಯಕ್ಕೆ ಈ ಮಾರ್ಗದಲ್ಲಿ 3 ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ. 19.15 ಕಿ.ಮೀ. ಉದ್ದದ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿವೆ.
ಹಳದಿ ಮಾರ್ಗಕ್ಕೆ ಪ್ರಯಾಣಿಕರನ್ನು ಆಕರ್ಷಿಸಲು ಬಿಎಂಆರ್‌ಸಿಲ್ ಬಿಎಂಟಿಸಿ, ನಮ್ಮ ಯಾತ್ರಿ ಸೇರಿದಂತೆ ವಿವಿಧ ಸಂಸ್ಥೆಗಳ ಜೊತೆ ಕೆಲಸ ಮಾಡುತ್ತಿದೆ. ಸೋಮವಾರದಿಂದಲೇ ಪ್ರಾರಂಭವಾಗುವಂತೆ ಬಿಎಂಟಿಸಿ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಹಳದಿ ಮಾರ್ಗಕ್ಕೆ 12 ಮೆಟ್ರೋ ಫೀಡರ್ ಬಸ್ ಸೇವೆಯನ್ನು ಆರಂಭಿಸಲಿದೆ.
ಬಿಎಂಆರ್‌ಸಿಎಲ್ ಈಗಾಗಲೇ ಹಳದಿ ಮಾರ್ಗದಿಂದ ಎಲೆಕ್ಟ್ರಾನಿಕ್ ಸಿಟಿ, ದೊಡ್ಡಕನ್ನಲ್ಲಿ, ಚಂದಾಪುರ, ಹೆಬ್ಬಗೋಡಿ ಕಡೆಗೆ ಬಿಎಂಟಿಸಿ ಬಸ್‌ಗಳು ಸಿಗಲಿವೆ ಎಂದು ಹೇಳಿದೆ. ಮೆಟ್ರೋ ರೈಲು ಏರುವವರು ನಿಮ್ಮ ಏರಿಯಾದಿಂದ ಬಿಎಂಟಿಸಿ ಬಸ್‌ಗಳಲ್ಲಿ ನಿಲ್ದಾಣಕ್ಕೆ ಆಗಮಿಸಬಹುದು.
ಬಸ್‌ಗಳ ವೇಳಾಪಟ್ಟಿ: ಸದ್ಯದ ಮಾಹಿತಿ ಪ್ರಕಾರ ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಹುಸ್ಕೂರು ಗೇಟ್, ಚಿಂತಲ ಮಡಿವಾಳ, ಮುತ್ತಾನಲ್ಲೂರು ವೃತ್ತ, ತಿಮ್ಮಸಂದ್ರ ವೃತ್ತ, ಚಂದಾಪುರ ಮಾರ್ಗದಲ್ಲಿ 4 ಬಿಎಂಟಿಸಿ ಬಸ್‌ಗಳು
20 ಟ್ರಿಪ್ ಸಂಚಾರ ನಡೆಸಲಿವೆ.
ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್‌ನಿಂದ ಬೆಳಗ್ಗೆ 8.40ರಿಂದ ಸಂಜೆ 4.50ರ ತನಕ, ಕೊಡತಿ ವಿಪ್ರೋ ಗೇಟ್‌ನಿಂದ ಬೆಳಗ್ಗೆ 8.05ರಿಂದ ಸಂಜೆ 5.35ರ ತನಕ ಬಸ್‌ಗಳ ಸಂಚಾರವಿದೆ.
ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್‌ನಿಂದ ಕೋನಪ್ಪನ ಅಗ್ರಹಾರ, ಹೊಸ ರೋಡ್, ಕಸವನಹಳ್ಳಿ, ಕೈಕೊಂಡ್ರಹಳ್ಳಿ ಮಾರ್ಗದ ಮೂಲಕ ಬಸ್ ದೊಡ್ಡಕನ್ನಲ್ಲಿ ನಿಲ್ದಾಣ ತಲುಪಲಿದೆ. 4 ಬಸ್‌ಗಳು ಬೆಳಗ್ಗೆ8.20 ರಿಂದ ಸಂಜೆ 4.55ರ ತನಕ 32 ಟ್ರಿಪ್ ಸಂಚಾರ ನಡೆಸಲಿವೆ.
ಎರಡು ಬಸ್‌ಗಳು 20 ಟ್ರಿಪ್‌ಗಳಲ್ಲಿ ಬೊಮ್ಮಸಂದ್ರ ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ ಬೊಮ್ಮಸಂದ್ರ ನಡುವೆ ಸಂಚಾರ ನಡೆಸಲಿವೆ. ಬೆಳಗ್ಗೆ 8.30 ರಿಂದ ಸಂಜೆ 6.05ರ ತನಕ ಈ ಬಸ್‌ಗಳು ಇರಲಿವೆ.
ಬೊಮ್ಮಸಂದ್ರ, ತಿರುಪಾಳ್ಯ ವೃತ್ತ, ಎಸ್ ಮಾಂಡೋ-3, ಎಲೆಕ್ಟ್ರಾನಿಕ್ ಸಿಟಿ ವಿಪ್ರೋಗೇಟ್, ಕೋನಪ್ಪನ ಅಗ್ರಹಾರ ಮಾರ್ಗ ಮತ್ತು ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ ಬೊಮ್ಮಸಂದ್ರ ಮಾರ್ಗದಲ್ಲಿ ಬಸ್ ಚಕ್ರ ಸುತ್ತುಗಳಲ್ಲಿ ಸಂಚಾರ ನಡೆಸಲಿವೆ.
ಆರ್.ವಿ ರಸ್ತೆ ಮತ್ತು ಬೊಮ್ಮಸಂದ್ರ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಆರ್.ವಿ.ರಸ್ತೆ, ರಾಗಿಗುಡ್ಡ, ಜಯದೇವ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕುಡ್ಲುಗೇಟ್, ಸಿಂಗಸಂದ್ರ, ಹೊಸ ರಸ್ತೆ, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ ಇನ್ಫೋಸಿಸ್, ಹುಸ್ಕೂರ್ ರಸ್ತೆ, ಬಯೋಕಾನ್ ಹೆಬ್ಬಗೋಡಿ, ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣಗಳಿವೆ.